»   » ನಾನು ಸೋಮಾರಿಯಾಗಿದ್ದೇನೆ- ರಾಮಕೃಷ್ಣ

ನಾನು ಸೋಮಾರಿಯಾಗಿದ್ದೇನೆ- ರಾಮಕೃಷ್ಣ

By Staff
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  *ನಾಡಿಗೇರ್‌ ಚೇತನ್‌, ಮುಕುಂದ್‌ ತೇಜಸ್ವಿ

  ನೀವು ಪುಟ್ಟಣ್ಣ ಕಣಗಾಲರ ಅಭಿಮಾನಿಯಾಗಿದ್ದರೆ ರಾಮಕೃಷ್ಣ ನಿಮಗೆ ಗೊತ್ತೇ ಇರಬೇಕು. ಪುಟ್ಟಣ್ಣರ ಶಿಷ್ಯ ಎನ್ನುವ ಲೇಬಲ್ಲು , ‘ಪ್ಲೇಬಾಯ್‌’ ಎನ್ನುವ ಇಮೇಜಿನಿಂದ ಹೊರಬರಲು ಸಾಧ್ಯವಾಗದೆ- ಆರಕ್ಕೇರದ, ಮೂರಕ್ಕಿಂತ ತೀರಾ ಕೆಳಕ್ಕೆ ಬಿದ್ದು ಹೋದ ನಮ್ಮ ನಡುವಿನ ನಟ ರಾಮಕೃಷ್ಣ . ಈ ರಾಮಕೃಷ್ಣ ಪುಟ್ಟಣ್ಣನವರ ಪ್ರೀತಿಯ ಶಿಷ್ಯ, ಪುಟ್ಟಣ್ಣನವರ ಪಾಲಿಗೆ ರಾಮ್ಕಿ.

  ‘ಅಮೃತ ಘಳಿಗೆ’ಯಲ್ಲಿ ಶ್ರೀಧರ್‌ ಸೆಂಟಿಮೆಂಟು, ‘ಮಾನಸ ಸರೋವರ’ದಲ್ಲಿ ಅಯ್ಯೋ ಪಾಪ ಶ್ರೀನಾಥ್‌, ‘ರಂಗನಾಯಕಿ’ಯಲ್ಲಿ ಒನ್‌ ಅಂಡ್‌ ಓನ್ಲಿ ಆರತಿ.. ಹೀಗೆ ಬೀಟ್‌ ಮಾಡುವ ಸ್ಕೋಪ್‌ ಇರುವ ಪಾತ್ರಗಳ ನಡುವೆ ಏಗಿ ಏಗಿ ಸುಸ್ತಾದ ರಾಮ್ಕಿ, ಪುಟ್ಟಣ್ಣ ಕಣಗಾಲ್‌ ಸತ್ತ ನಂತರ ಎಲ್ಲದರಲ್ಲೂ ಡುಮ್ಕಿ ! ರಾಮ್ಕಿ ಕಲಾವಿದ ಅನ್ನುವುದಕ್ಕೆ ‘ಬೆಂಕಿಯಲ್ಲಿ ಅರಳಿದ ಹೂವು’ ಚಿತ್ರದಲ್ಲಿ ವಿಷಾದದ ಕೆಂಡವ ಹೊಟ್ಟೆಯಲ್ಲಿಟ್ಟುಕೊಂಡು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾ ಜೊತೆಜೊತೆಗೇ ಗೊಳೋ ಅಂತ ಅಳಿಸಿದ ಪರಿಯ ಸಾಕ್ಷಿಯಾಂದೇ ಸಾಕು. ಸ್ಪಷ್ಟವಾದ ಆತನ ಕಂಠ ಟ್ರಂಪ್‌ಕಾರ್ಡ್‌ ಆಗಬೇಕಿತ್ತು. ಆದರೆ, ರಾಮ್ಕಿಗೆ ಒಂದು ಇಮೇಜು ಅಂತ ಕಟ್ಟಿಕೊಳ್ಳಲಿಕ್ಕೇ ಆಗಲಿಲ್ಲ. ಪ್ಲೇಬಾಯ್‌ ಆಗಲು ಆತ ಹೆಣಗಾಟ ನಡೆಸಿದ್ದು ಮಾತ್ರ ಇವತ್ತಿಗೂ ಸ್ಪಷ್ಟ.

  ಕಳೆದ ಕೆಲವು ವರ್ಷಗಳಲ್ಲಿ - ‘ಅಮೃತ ಘಳಿಗೆ’, ‘ನಾನೇನೂ ಮಾಡ್ಲಿಲ್ಲ’, ‘ಲಾಲಿ’ ಮೊದಲಾದ ಚಿತ್ರಗಳಲ್ಲಿ ರಾಮ್ಕಿ ಕಾಣಿಸಿಕೊಂಡರೂ ಬರಕತ್ತಾಗಲಿಲ್ಲ. ಈಗ ಅಂಥ ಆಫರುಗಳಿಂದ ಬೇಸತ್ತಿರುವುದರಿಂದ, ಜಾಳುಜಾಳು ಪೋಷಕ ಪಾತ್ರಗಳ ನಿರಾಕರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

  ಹಾಗಾದರೆ ಈಗ ಏನ್ಮಾಡ್ತಿದೀರ ರಾಮ್ಕಿ... ಎಂಬ ವೃತ್ತಿ ಬದುಕಿನ ಬುಡಕ್ಕೇ ಕೈಹಾಕುವ ಗಂಭೀರ ಪ್ರಶ್ನೆಗೂ ತೇಲಿಸಿ ಉತ್ತರ ಕೊಡುವಂತಾಗಿ ಬಿಟ್ಟಿದ್ದಾರೆ ರಾಮಕೃಷ್ಣ. ‘ನಾನು ಶುದ್ಧ ಸೋಮಾರಿಯಾಗಿದ್ದೇನೆ’ ಅನ್ನುವ ಅವರು ಅದಕ್ಕಿಂತ ಒಂದು ಪದವನ್ನೂ ಹೆಚ್ಚಾಗಿ ಪ್ರಸ್ತುತ ಬದುಕಿನ ಬಗ್ಗೆ ಹೇಳೋದಿಲ್ಲ. ತೀರಾ ಕೆಣಕಿದರೂ ಅವರ ಮಾತು ಹೊರಳಿದ್ದು ಫ್ಲ್ಯಾಷ್‌ಬ್ಯಾಕ್‌ನತ್ತಲೇ....

  ನಾನು ಮೂಲತಃ ಉತ್ತರ ಕನ್ನಡ ಜಿಲ್ಲೆ , ಸಿರ್ಸಿ ತಾಲ್ಲೂಕಿನವನು. ಅಲ್ಲೆಲ್ಲ ಚಲನಚಿತ್ರಗಳಿಂತ ಯಕ್ಷಗಾನ ಹೆಸರುವಾಸಿ. ಬೇರೆ ಭಾಷೆಯ ಚಿತ್ರಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳೇ ಹೆಚ್ಚಾಗಿ ತೆರೆಕಾಣುತ್ತಿತ್ತು. ಕನ್ನಡದಲ್ಲೂ ರಾಜಕುಮಾರ್‌ ಮತ್ತಿತರರು ನಟಿಸುತ್ತಿದ್ದ ಪೌರಾಣಿಕ ಚಿತ್ರಗಳೇ ಜಾಸ್ತಿ. ಆಗ ನಾನು ಯಕ್ಷಗಾನದಲ್ಲಿ ಪಾತ್ರ ಮಾಡುತ್ತಿದ್ದೆ. ಒಮ್ಮೆ ನಮ್ಮ ಊರಿನಲ್ಲಿ ಗುಬ್ಬಿ ಕಂಪೆನಿಯವರು ಕ್ಯಾಂಪ್‌ ಹಾಕಿದ್ದಾಗ, ಅವರ ನಾಟಕಗಳನ್ನು ನೋಡಿ ಮರುಳಾದೆ. ನಿಧಾನಕ್ಕೆ ಆವರ ಸಂಪರ್ಕ ಬೆಳೆಸಿಕೊಂಡೆ. ಬಿ.ಎ. ಮಗಿಸಿ ಗುಬ್ಬಿ ಕಂಪೆನಿ ಸೇರಿದ ನಾನು , ಮೊದಲ 6 ತಿಂಗಳು ಬರೀ ನಾಟಕ ನೋಡುವುದನ್ನೇ ಚಾಳಿ ಮಾಡಿಕೊಂಡೆ. ಹಾಗೆಯೇ ನಾಟಕಗಳಲ್ಲಿ ಸಣ್ಣಸಣ್ಣ ಪಾತ್ರ ಮಾಡುವ ಅವಕಾಶ 1973ರಲ್ಲಿ ಸಿಕ್ಕಿತು. ನನ್ನ ಅರಾಂಗೇಟ್ರಮ್‌ ಆದದ್ದು ಹಾಗೆ. ನಿಧಾನವಾಗಿ ಒಳ್ಳೆಯ ಪ್ರಮುಖ ಪಾತ್ರಗಳು ಸಿಕ್ಕವು. 2 ವರ್ಷ ಹೀಗೆ ಕಳೆಯಿತು.

  ರಾಮಕೃಷ್ಣ ಕೃಷ್ಣನಾದದ್ದು : ಗುಬ್ಬಿ ಕಂಪೆನಿಯಿಂದ ನನ್ನನ್ನು ದೆಹಲಿಯ ಎನ್‌. ಎಸ್‌.ಡಿಗೆ ಕಳಿಸಲು ತೀರ್ಮಾನವಾಗಿತ್ತು. ಎಲ್ಲ ಖರ್ಚನ್ನು ಕಂಪೆನಿಯೇ ಭರಿಸಲು ನಿರ್ಧರಿಸಿತ್ತು. ಅದಕ್ಕಾಗಿ ಒಮ್ಮೆ ಬೆಂಗಳೂರಿಗೆ ಬಂದಿದ್ದಾಗ, ಆಕಸ್ಮಿಕವಾಗಿ ಡಾ. ರಾಜಕುಮಾರ್‌ ಅವರ ಭೇಟಿಯಾಯಿತು. ಆಗಷ್ಟೇ ಬಬ್ರುವಾಹನ ಚಿತ್ರೀಕರಣ ಶುರುವಾಗಿತ್ತು. ಆ ಚಿತ್ರದ ನಿರ್ಮಾಪಕ ಕೆ.ಸಿ.ಎನ್‌. ಚಂದ್ರಶೇಖರ್‌ಗೆ ಕೃಷ್ಣನ ಪಾತ್ರಕ್ಕೆ ತೆಲುಗಿನ ಎನ್‌.ಟಿ.ಆರ್‌ ಅವರನ್ನು ಕರೆಸುವ ಯೋಚನೆ ಇತ್ತು. ಆದರೆ ರಾಜ್‌ಕುಮಾರ್‌ ಮತ್ತು ಚಿತ್ರದ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ, ನನ್ನನ್ನು ನೋಡಿ ನಾನೇ ಆ ಪಾತ್ರಕ್ಕೆ ಸರಿ ಎಂದು ತೀರ್ಮಾನಿಸಿ ನನಗೆ ಆ ಪಾತ್ರ ನೀಡಿದರು. ಆದರೆ ಆ ಪಾತ್ರ ಬ್ರೇಕ್‌ ಕೊಡುವಷ್ಟು ಬಲವಾಗಿರಲಿಲ್ಲ, ಆದರೆ ಒಬ್ಬ ಹೊಸ ಕಲಾವಿದನಿಗೆ ಸಿಗುವ ಒಳ್ಳೆಯ ಆವಕಾಶ ಅದಾಗಿತ್ತು.

  ಅವರೊಬ್ಬರೇ ಪುಟ್ಟಣ್ಣ : ಮುಂಚಿನಿಂದಲೂ ನನ್ನನ್ನು ಪುಟ್ಟಣ್ಣನವರ ಶಿಷ್ಯ ಎಂದೇ ಕರೆಯುತ್ತಿದ್ದರು. ಈಗಲೂ ಹಾಗೆ ಕರೆಯುತ್ತಾರೆ. ಅವರ- ನನ್ನ ನಡುವಿನ ಸಂಬಂಧ ಗುರು- ಶಿಷ್ಯರ ತರಹ ಇದ್ದದ್ದೂ ನಿಜ. ಒಮ್ಮೆ ಮದರಾಸಿನ ಅವರ ಮನೆಗೆ ಹೋಗಿದ್ದೆ. ಅವರು ತಮ್ಮ ಕೋಣೆಗೆ ಕರೆದೊಯ್ದು, ಬೀರುವಿನಲ್ಲಿದ್ದ ಚಿತ್ರರಂಗಕ್ಕೆ ಸಂಬಂಧಪಟ್ಟ ವಿವಿಧ ಪುಸ್ತಕಗಳನ್ನು ತೋರಿಸಿ- ಈ ಪುಸ್ತಕಗಳನ್ನು ಇಡಿಯಾಗಿ ಓದದಿದ್ದರೂ, ಒಂದು ಬಾರಿಯಾದರೂ ತಿರುವಿ ಹಾಕಿದ್ದೇನೆ. ಆದ್ದರಿಂದಲೇ ಜನ ನನ್ನ ಪುಟ್ಟಣ್ಣ ಕಣಗಾಲ್‌ ಅಂತ ಕರೆಯುವುದು ಎಂದು ಹೆಮ್ಮೆಯಿಂದ ಹೇಳಿದರು. ಹಾಗಿತ್ತು ಅವರಿಗೆ ಚಿತ್ರಗಳ ಬಗ್ಗೆ ಇದ್ದ ಜ್ಞಾನ. ಪುಟ್ಟಣ್ಣನವರಿಗೆ ಸಂಗೀತ, ಸಾಹಿತ್ಯ, ಛಾಯಾಗ್ರಹಣ, ಸಂಕಲನ ಎಲ್ಲದರ ಬಗ್ಗೆಯೂ ಜ್ಞಾನವಿತ್ತು. ಅವರು ಸಾಹಿತಿಗಳ ಜತೆ ಗುದ್ದಾಡುತ್ತಿದ್ದರು. ಆ ಗುದ್ದಾಟ ಆರೋಗ್ಯಕರ ಚರ್ಚೆಗೆ ಕಾರಣವಾಗುತ್ತಿತ್ತು...

  ಮತ್ತೆ ರಾಮ್ಕಿಯನ್ನು ಪೋಸ್ಟ್‌ ಪುಟ್ಟಣ್ಣ ದಿನಗಳಿಗೆ ಕರೆತರುವ ಯತ್ನ ಮಾಡಿದಾಗ...

  ಭಾರ್ಗವ, ಡಿ. ರಾಜೇಂದ್ರ ಬಾಬು ಮತ್ತು ದಿನೇಶ್‌ ಬಾಬುರವರ ನಿರ್ದೇಶನದಲ್ಲೂ ಅನೇಕ ಚಿತ್ರಗಳಲ್ಲಿ ನಟಿಸಿದ್ದೇನೆ. ಅಮೃತವರ್ಷಿಣಿ, ಲಾಲಿ, ನಾನೇನೂ ಮಾಡ್ಲಿಲ್ಲ ಮುಂತಾದ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಬೇರೆ ನಿರ್ದೇಶಕರು ಬೇರೆ ಕಲಾವಿದರಿಗೆ ಅಷ್ಟು ಗಮನ ಕೊಡುವುದಿಲ್ಲ. ಪುಟ್ಟಣ್ಣ ಹಾಗಲ್ಲ. ಸಣ್ಣ ಪುಟ್ಟ ಪಾತ್ರಗಳಿಗೂ ಪ್ರಾತಿನಿಧ್ಯ ಕೊಡುತ್ತಿದ್ದರು. ಈಗ ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ.

  ಹೇಗಿದ್ದ ಸಿನಿಮಾ ಹೇಗಾಗಿಹೋಯ್ತು : ಹಿಂದೆ ಚಲನಚಿತ್ರಗಳ ಅಂತರಾತ್ಮದಲ್ಲಿ ಭವ್ಯತೆ, ಪಾವಿತ್ರ್ಯ, ಸ್ವಚ್ಛತೆ ಇತ್ತು. ಆದರೆ ಈಗ ಅಂತಹ ಒಂದು ಚಿತ್ರವೂ ಬರುತ್ತಿಲ್ಲ. ಕನ್ನಡ ಚಿತ್ರರಂಗ ಕನ್ನಡ ಸಾಹಿತ್ಯದ ಆಂಗ. ಚಲನಚಿತ್ರಗಳಿಂದ ಜನಾಂಗವನ್ನು ತಿದ್ದಬಹುದು. ಅಂತಹ ಪ್ರಭಾವಶಾಲಿಯಾದ ಮಾಧ್ಯಮವನ್ನು ಹಾಳು ಮಾಡುತ್ತಿದ್ದಾರೆ. ಜನರಿಗೆ ಬೇಕಾಗಿದ್ದು ಇವರೇ ತೀರ್ಮಾನ ಮಾಡ್ತಿದ್ದಾರೆ. ಒಂದು ಸಂಭಾಷಣೆ ಹೇಳಬೇಕಿದ್ದರೆ ಕಲಾವಿದರು ಬಹಳ ಕಷ್ಟ ಪಡುತ್ತಿದ್ದರು. ಚಿತ್ರ ಸಾಹಿತಿಗಳಿಗೆ ಸಾಹಿತಿಗಳ ಬಗ್ಗೆ ಭಯವಿತ್ತು. ಸಾಹಿತ್ಯದ ಮಟ್ಟ ಕಡಿಮೆಯಾದರೆ ಏನಂತಾರೆ ಎಂಬ ಅಳುಕಿತ್ತು. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಕನ್ನಡ ಚಿತ್ರಗಳು ಪ್ರದರ್ಶಿತವಾಗುತ್ತಿದ್ದವು. ಪುಟ್ಟಣ್ಣನವರ ಚಿತ್ರ ಬಿಡುಗಡೆಯಾದರೆ ಬೇರೆ ಭಾಷೆಯ ನಿರ್ದೇಶಕರು ಬೆಂಗಳೂರಿಗೆ ಬಂದು ನೋಡುತ್ತಿದ್ದರು. ಅಷ್ಟೇ ಅಲ್ಲ, ಬೇರೆ ಭಾಷೆಗಳಿಗೆ ಆ ಚಿತ್ರಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೀಗ ಚಲನಚಿತ್ರ ರಂಗದಲ್ಲಿ ಮುಸುಕಿನ ಗುದ್ದಾಟ, ಸ್ವಪ್ರತಿಷ್ಠೆ ಅತಿಯಾಗಿದೆ. ಯಾರಾದರೂ ತಪ್ಪು ಮಾಡಿದಾಗ ತಿದ್ದೋಕೆ ಹೋದರೆ, ನಾವೇ ಕೆಟ್ಟವರಾಗುತ್ತೇವೆ.

  ಪೊಲೀಸರನ್ನ ಅಷ್ಟು ಕೆಟ್ಟದಾಗ ತೋರಿಸೋದು ?
  ಇವತ್ತು ಪಾತ್ರಗಳೇನೋ ಸಿಗುತ್ತವೆ. ಆದರೆ ಅವುಗಳಿಗೆ ನನ್ನ ಮನಸೊಪ್ಪುತ್ತಿಲ್ಲ. ಹೊಸಬರ ಹತ್ತಿರ ಕಲಿಯುವುದು ಬಹಳಷ್ಟಿದೆ ಅನ್ನುವುದು ನಿಜವಾದರೂ, ಬರುತ್ತಿರುವ ಚಿತ್ರಗಳಲ್ಲಿ ಮೌಲ್ಯಗಳು, ನೀತಿ ಇರೋದಿಲ್ಲ. ಒಂದು ಕಾಲದಲ್ಲಿ ಪಾತ್ರ ಸಿಕ್ಕಬೇಕೆಂದರೆ ತಪಸ್ಸು ಮಾಡಬೇಕಿತ್ತು. ಈಗ ಯಾಕೆ ಕರೆಯುತ್ತಾರೋ ಅನಿಸುತ್ತೆ. ನಮ್ಮ ಸಂಸ್ಕೃತಿ ಬಗ್ಗೆ ಆಘಾತವಾಗಿದೆ. ಸಿನಿಮಾಗಳಲ್ಲಿ ಪೋಲಿಸರನ್ನು ಬಹಳ ಕೆಟ್ಟದಾಗಿ ಪ್ರತಿಬಿಂಬಿಸಲಾಗುತ್ತಿದೆ. ಕಾನೂನಿನ ಬಗ್ಗೆ ಗೌರವವಿಲ್ಲ.

  ಹಾಗೆ ನೋಡಿದರೆ ನಾಟಕ ನಿಜವಾಗಿಯೂ ಮಜಾ ಕೊಡುವ ಮಾಧ್ಯಮ. ಅಲ್ಲಿ ಸಿನಿಮಾ, ಟೀವಿ ಥರ ಪ್ರತಿಕ್ರಿಯೆಗೆ ಕಾಯುವ ಹಾಗಿಲ್ಲ. ಹಚ್ಚಿದ ಬಣ್ಣಕ್ಕೆ ನಿಂತಲ್ಲೇ ಚಪ್ಪಾಳೆ, ಇಲ್ಲ ಛೀಮಾರಿ. ಈಗ ನಾವು ನಾಟಕಕ್ಕೆ ಹೋಗಿ ಅಭಿನಯಿಸುತ್ತೇವೆ ಅಂತ ಇಟ್ಕೊಳ್ಳಿ. ಸಿನಿಮಾದವರು ಅನ್ನುವ ಕಾರಣಕ್ಕೆ ಸಂಭಾವನೆ ಜಾಸ್ತಿ ಕೊಟ್ಟು ಕಳಿಸುತ್ತಾರೆ. ಆದರೆ, ರಂಗ ಕಲಾವಿದರಾಗೇ ಬೆಳಕಿಗೆ ಹುಡುಕುತ್ತಿರುವ ಕಲಾವಿದರು ಬಡವರಾಗೇ ಉಳಿದು ಬಿಡುತ್ತಾರೆ. ಆ ಕಾರಣಕ್ಕೇ ನಾಟಕಗಳ ನಟನೆಯ ತಂಟೆಗೆ ಹೋಗುತ್ತಿಲ್ಲ.

  ಇಷ್ಟಾದರೂ ನನಗೆ ಅಭಿಮಾನಿಗಳಿದ್ದಾರೆ ಅನ್ನುವುದೇ ಸಮಾಧಾನ. ಇತ್ತೀಚೆಗೆ ದಾವಣಗೆರೆ ಬಳಿಯ ಒಂದು ಹಳ್ಳಿಗೆ ಮದುವೆಗೆಂದು ಹೋಗಿದ್ದೆ. ಅಲ್ಲಿನ ಅಭಿಮಾನಿಗಳು, ನಿಮಗೆ ಯಾವುದೇ ರೀತಿಯ ತೊಂದರೆ ಇದ್ದರೆ ಅದನ್ನು ನಾವು ಪರಿಹರಿಸುತ್ತೀವಿ, ಆದರೆ ದಯವಿಟ್ಟು ಕೆಟ್ಟ ಪಾತ್ರಗಳಲ್ಲಿ ಮಾತ್ರ ಅಭಿನಯಿಸಬೇಡಿ ಅಂತ ಪ್ರೀತಿಯಿಂದ ಹೇಳಿದರು.

  ಈವರೆಗೆ 110ಕ್ಕೂ ಹೆಚ್ಚು ಚಿತ್ರಗಳಲ್ಲಿ (ಒಂದು ತಮಿಳೂ ಸೇರಿದಂತೆ) ನಟಿಸಿರುವ ರಾಮ್ಕಿಗೆ ಪ್ರಶಸ್ತಿಗಳೂ ಕೈಸೇರಿವೆ. ‘ರಂಗ ನಾಯಕಿ’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಶ್ರೇಷ್ಠ ಪೋಷಕ ನಟ, 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ‘ಅಮೃತವರ್ಷಿಣಿ’ ಚಿತ್ರಕ್ಕೆ 1996-97ರಲ್ಲಿ ನಾಕ್‌ಔಟ್‌ ಉದಯ ಚಲನಚಿತ್ರ ಪ್ರಶಸ್ತಿ - ರಾಮ್ಕಿ ಬೊಕೆಯ ಕೆಲವು ಹೂಗಳು.

  ಪಾತ್ರ ತೂಕವಾಗಿರದಿದ್ದಲ್ಲಿ ಸುತಾರಾಂ ಒಪ್ಪಿಕೊಳ್ಳುವುದಿಲ್ಲ ಅಂತ ಸಂಕಲ್ಪ ಮಾಡಿರುವ ರಾಮ್ಕಿಯ ಅಭಿನಯದ ಇನ್ನೂ ತೆರೆ ಕಾಣದ ಏಕೈಕ ಚಿತ್ರ ‘ಎಕ್ಸ್‌ಕ್ಯೂಸ್‌ ಮಿ’. ಅದಾದ ನಂತರ.. ಅಂತ ಮತ್ತೆ ಕಿಚಾಯಿಸುವಿಕೆಗೆ ಮುಂದಾದರೆ, ರಾಮ್ಕಿ ‘ಎಕ್ಸ್‌ಕ್ಯೂಸ್‌ ಮಿ’ ಅಂದು ಮಾತು ಮುಗಿಸಿದರು.

  Post Your Views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more