»   » ಶಿಲ್ಪ ಶ್ರೀನಿಯ ಡಯಟ್ಟು, ನೆನೆಗುದಿಗೆ ಬಿದ್ದ ಸಿಟಿ ಮಾರ್ಕೆಟ್ಟು

ಶಿಲ್ಪ ಶ್ರೀನಿಯ ಡಯಟ್ಟು, ನೆನೆಗುದಿಗೆ ಬಿದ್ದ ಸಿಟಿ ಮಾರ್ಕೆಟ್ಟು

By: *ದಟ್ಸ್‌ಕನ್ನಡ ಬ್ಯೂರೊ
Subscribe to Filmibeat Kannada

ನಿರ್ಮಾಪಕ ಶಿಲ್ಪ ಶ್ರೀನಿವಾಸ್‌ ಪ್ರವರ್ಧಮಾನಕ್ಕೆ ಬಂದದ್ದು 'ಪರ್ವ' ಸಿನಿಮಾ ಟೈಮಿನ ಕಿರಿಕ್ಕಿನಲ್ಲಿ ಪ್ರೇಮಾ ಮನೆಯ ಮುಂದೆ ಹೂಕುಂಡಗಳನ್ನು ಆಕಾಶದೆತ್ತರಕ್ಕೆ ಎಸೆದಾಗಲೇ. ಅದು ಯಾರು ಹೇಳಿದರೋ, ಹೀರೋ ಅಂದ್ರೆ ನೀನೇ ಗುರು ಅಂತ, ಶ್ರೀನಿ ಹೀರೋ ಆಗಲು ಹೊಂಟೇ ಬಿಟ್ಟರು.

ಸಾಕಷ್ಟು ಪೂರ್ವ ಸಿದ್ಧತೆಗಳ ನಂತರ ಶ್ರೀನಿ ನಾಯಕತ್ವದ ಸಿನಿಮಾ ಸೆಟ್ಟೇರಿತು. ಹೆಸರು ಸಿಟಿ ಮಾರ್ಕೆಟ್‌. ನೋಡಿದವರೆಲ್ಲಾ ದಂಗು. ಹರ್ಕ್ಯುಲಸ್‌ ಥರ ಇದ್ದ ಶಿಲ್ಪ ಶ್ರೀನಿ ಹರಿಹರ ಪ್ರಿಯರ ತರಹ ಸಣಕಲು ಕಡ್ಡಿಯಾಗಿ ಹೋಗಿದ್ದರು. ಅವರು ಎಷ್ಟು ಇಳಿದು ಹೋಗಿದ್ದರೆಂದರೆ, ಪ್ರೇಮಾ ಮನೆಯ ಹೂಕುಂಡಗಳನ್ನು ಅಲ್ಲಾಡಿಸುವುದೂ ಅಸಾಧ್ಯ ಎಂಬಷ್ಟು !

ನಾಯಕನಾಗೋ ಹುಚ್ಚು ಶಿಲ್ಪಾಗೆ ಇದಕ್ಕೂ ಮೊದಲೇ ಇತ್ತಂತೆ. 'ಹುಚ್ಚ' ಸಿನಿಮಾದ ಸುದೀಪ್‌ ಜಾಗದಲ್ಲಿ ಶಿಲ್ಪ ಇರಬೇಕಿತ್ತಂತೆ. ಆದರೆ, ಸುದೀಪ್‌ ಅದೃಷ್ಟ ಚೆನ್ನಾಗಿತ್ತು ಹಾಗಾಗಲಿಲ್ಲ. ಗೆಳೆಯರ ಕುಮ್ಮಕ್ಕೂ ಶಿಲ್ಪ ಬೆನ್ನ ಹಿಂದೆ ಸದಾ ಇತ್ತು. ಕೊನೆಗೆ ಎಲ್ಲರೂ ಅಪ್ಪಣೆ ಕೊಡಿಸಿದಂತೆ ಕಟ್ಟಾ ಡಯಟ್ಟಿಗೆ ಬಿದ್ದರು ಶಿಲ್ಪ. ಒಣ ಚಪಾತಿ ತಿಂದು ತಿಂದು ಥೇಟ್‌ ಒಣ ಚಪಾತಿಯೇ ಆಗಿಬಿಟ್ಟರು. ಕೆನ್ನೆಗಳಲ್ಲಿ ಹಳ್ಳ ಬಿದ್ದವು. ರೆಟ್ಟೆ ಸುತ್ತಿಟ್ಟ ರೊಟ್ಟಿಯಾಯಿತು.

ಕನ್ನಡಿ ಮುಂದೆ ಆ್ಯಂಗಲ್‌ ಆ್ಯಂಗಲ್‌ಗಳಲ್ಲಿ ನೋಡಿಕೊಂಡರೂ ಎಲ್ಲೂ ತಾವು ನಾಯಕನಾಗಲು ಲಾಯಕ್ಕು ಅಂತ ಶಿಲ್ಪಾ ಶ್ರೀನಿವಾಸ್‌ಗೆ ಅನ್ನಿಸಲಿಲ್ಲ. ಕೊನೆಗೆ ಸಿಟಿ ಮಾರ್ಕೆಟ್‌ ಬಳಗದ ಮುಂದೆಯೇ, 'ನನ್ನನ್ನು ಯಾರು ನೋಡ್ತಾರೆ ಬಿಡ್ರಿ' ಅಂತ ಶ್ರೀನಿ ಹೇಳಿದಾಗ ಅಲ್ಲಿದ್ದವರ ಮನಸ್ಸು ಥೇಟ್‌ ಸಿಟಿ ಮಾರ್ಕೆಟ್ಟಿನಂತಾಯಿತು. ಚಿತ್ರ ನೆನೆಗುದಿಗೆ ಬಿತ್ತು.

ಇದೀಗ-
ಸಾಕಷ್ಟು ಪೂಸಿ ಹೊಡೆದ ನಂತರ ಶಿಲ್ಪಾ ಬಣ್ಣ ಹಚ್ಚಲು ಒಪ್ಪಿದ್ದು, ಸಿಟಿ ಮಾರ್ಕೆಟ್‌ ಮತ್ತೆ ಸೆಟ್ಟೇರೋದು ಖರೆ. ಆದರೆ, ಶ್ರೀನಿ ಹೃಷ್ಟಪುಷ್ಟವಾಗಬೇಕು. ಅದು ಬೇಗ ಆಗಲಿ ಅಂತ ಆಪ್ತ ಬಳಗ ತುಪ್ಪದಲ್ಲಿ ಮಾಡಿದ ತಿನಿಸುಗಳನ್ನು ಯದ್ವಾ ತದ್ವಾ ತಿನ್ನಿಸುತ್ತಿರುವುದು ಶ್ರೀನಿ ಆರೋಗ್ಯಕ್ಕಂತೂ ಒಳ್ಳೇದಲ್ಲ !

ಈ ಎಲ್ಲಾ ಸರ್ಕಸ್ಸುಗಳನ್ನು ದೂರದಿಂದಲೇ ನೋಡುತ್ತಿರುವ ಪ್ರೇಮಾ ಮನಸ್ಸಲೇ ಮುಸು ಮುಸು ನಗುತ್ತಿರುವುದೂ ನಿಜವಂತೆ.

English summary
Flower pot fame Shilpa Sreenivas is struggling hard to become hero
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada