»   » ಅರಮನೆಗಾಗಿ ಗಣೇಶ್ ಪಡೆದ ಸಂಭಾವನೆ ಎಷ್ಟು ಗೊತ್ತೆ?

ಅರಮನೆಗಾಗಿ ಗಣೇಶ್ ಪಡೆದ ಸಂಭಾವನೆ ಎಷ್ಟು ಗೊತ್ತೆ?

Posted By:
Subscribe to Filmibeat Kannada


ಚಿತ್ರದ ಹೆಸರು ಅರಮನೆ! ಮಹಾರಾಜ ಅರ್ಥಾತ್ ಚಿತ್ರದ ನಾಯಕನ ಹೆಸರು ಗಣೇಶ್. ಪಡೆದ ಸಂಭಾವನೆ ಅವರು ಬಾಯಿಬಿಟ್ಟು ಹೇಳುತ್ತಿಲ್ಲ, ನಂಬಲರ್ಹ ಮೂಲಗಳ ಪ್ರಕಾರ ಒಂದೂಕಾಲು ಕೋಟಿ! ಇಷ್ಟು ವಿವರಗಳು ಸಾಕು.. ಚಿತ್ರದ ಶ್ರೀಮಂತಿಕೆಯನ್ನು ಅಳೆಯುವುದಕ್ಕೆ.

ಇಷ್ಟು ದಿನ ದರ್ಶನ್, ಉಪೇಂದ್ರ, ಸುದೀಪ್, ಶಿವಣ್ಣ ಸೇರಿದಂತೆ ಘಟನುಘಟಿಗಳನ್ನು ಹಿಂದಕ್ಕಟ್ಟಿ ಪುನೀತ್ ಮುನ್ನುಗುತ್ತಿದ್ದರು. ಕೋಟಿ ರೂಪಾಯಿ ಸಂಭಾವನೆ ಪಡೆದು ಕೋಟಿಗೊಬ್ಬ ಆಗಿದ್ದರು! ಅರಸು ಮುಗ್ಗರಿಸಿದ(ಅಂಕಿ ಸಂಖ್ಯೆಗಳು ಚಿತ್ರ ಗೆದ್ದಿವೆ ಅನ್ನುತ್ತವೆ )ನಂತರ ತುಸು ಸಂಭಾವನೆ ಇಳಿದಿದೆಯಂತೆ.

ಈಗ ಗಣೇಶ್ ಸರದಿ. ಅವರ ಹೆಸರ ಹಿಂದೆ ಗೋಲ್ಡನ್ ಸ್ಟಾರ್ ಸೇರಿಕೊಂಡಿದೆ. ಹೀಗಾಗಿ ಮುಟ್ಟಿದ್ದೆಲ್ಲವೂ ಚಿನ್ನ. ಹಿಂದಿನ ಚಿತ್ರ ಚೆಲುವಿನ ಚಿತ್ತಾರಕ್ಕಾಗಿ ಎಸ್.ನಾರಾಯಣ್ ನೀಡಿದ್ದ 70ಲಕ್ಷವನ್ನು ಅವರು ಜೇಬಿಗಿಳಿಸಿಕೊಂಡಿದ್ದರು. ಈಗ ನಾರಾಯಣ್ ಕೋಟಿಗಳನ್ನು ಜೇಬಿಗಿಳಿಸುತ್ತಿದ್ದಾರೆ!

ದುಡ್ಡಿನ ವಿಷಯ ಬಿಟ್ಟು ಮತ್ತೆ ಅರಮನೆ ಬಗ್ಗೆ ಹೇಳುವುದಾದರೆ, ಈ ಚಿತ್ರದ ನಿರ್ದೇಶಕ ನಾಗಶೇಖರ್. ಯಾರಿದು ಅನ್ನಬೇಡಿ? ಕರ್ರಗೆ ತೊಳೆದ ಕೆಂಡದಂತಿರುವ ನಾಗಶೇಖರ್ ಅನೇಕ ಚಿತ್ರಗಳಲ್ಲಿ ಹಾಸ್ಯನಟರಾಗಿ ನಿಮ್ಮನ್ನು ನಗಿಸಿದವರು. ಈಗ ತೆರೆ ಹಿಂದೆ ಆಕ್ಷನ್ ಕಟ್ ಹೇಳಲು ನಿಂತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ದಿನ ಮುಹೂರ್ತ ಪೂರೈಸಿ, ಈಗ ರಾಕ್ ಲೈನ್ ಸ್ಡುಡಿಯೋದಲ್ಲಿ ಅರಮನೆ ಚಿತ್ರೀಕರಣ ಮುಂದುವರೆದಿದೆ. ಈ ಚಿತ್ರದ ನಾಯಕಿ ರೋಮ. ಮಲಯಾಲಂನ ನೋಟ್ ಬುಕ್ ಮತ್ತು ಚಾಕಲೇಟ್ ಚಿತ್ರಗಳ ನಾಯಕಿ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಲು ಬ್ರೇಕ್ ಗಾಗಿ ರೋಮ ಕಾಯುತ್ತಿದ್ದಾರೆ. ರಂಗಾಯಣ ರಘುಗೆ ಚಿತ್ರದಲ್ಲಿ ವಿಶೇಷ ಪಾತ್ರ.

ಗುರುಕಿರಣ್ ಸಂಗೀತ ನಿರ್ದೇಶಕ. ಈ ಚಿತ್ರದಲ್ಲಾದರೂ ಗುರು ಸಂಗೀತ ಕರ್ಣಕಠೋರವಾಗಿರದಿದ್ದರೇ ಸಾಕು!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada