»   » ಹಾಡುಸುಂದರಿ ನಂದಿತ ಮದ್ವೆ ಆಗ್ತಿದಾರೆ

ಹಾಡುಸುಂದರಿ ನಂದಿತ ಮದ್ವೆ ಆಗ್ತಿದಾರೆ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಸಾಮಾನ್ಯವಾಗಿ ಹಾಡುಗಾರ್ತಿಯರು ನಿಯತಕಾಲಿಕಗಳ ಮುಖಪುಟದಲ್ಲಿ ರಾರಾಜಿಸಬೇಕಾದರೆ ಅವರ ಕ್ರೆಡಿಟ್ಟಿನಲ್ಲಿ ಒಂದು ನೂರು ಹಾಡಾದರೂ ಇರಬೇಕು ಎಂಬಂಥಾ ಕಾಲವಿತ್ತು. ಅದರಲ್ಲೂ ಕನ್ನಡದ ಗಾಯಕಿಯರು ಸುದ್ದಿಯ ಉಪ್ಪಿನಕಾಯಿಯಾದ ಉದಾಹರಣೆ ತೀರಾ ಕಮ್ಮಿ. ಇದಕ್ಕೆ ಅಪವಾದ ಸ್ಯಾಂಡಲ್‌ವುಡ್‌ನ ಯಶಸ್ವಿ ಯುವ ಗಾಯಕಿ ನಂದಿತ.

ತಿಂಗಳೊಪ್ಪತ್ತಿಗೆ ಕಾಲು ಲಕ್ಷ ರುಪಾಯಿ ಸುರಿಸುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ವೃತ್ತಿಗೆ ಗುಡ್‌ಬೈ ಹೇಳಿ ವೀಣೆ ಹಿಡಿದು ಕೂತಳು ಎಂಬ ಕಾರಣಕ್ಕೆ ನಂದಿತ ಮೊದಲು ಸುದ್ದಿಯಾದಳು. ಉದಯ ಟೀವಿಯ ‘ಕುಹೂ ಕುಹೂ’ ಎಂಬ ಕಾರ್ಯಕ್ರಮದಲ್ಲಿ ಕಂಡಾಗ, ‘ಮೂಡಲ್‌ ಕುಣಿಗಲ್‌ ಕೆರೆ ಹಾಡನ್ನು ಈ ಹುಡುಗೀನೆ ಹಾಡಿರೋದು, ನೋಡೋಕೆ ಎಷ್ಟು ಚೆನ್ನಾಗಿದಾಳೆ’ ಅಂತ ಜನ ಮಾತಾಡಿಕೊಂಡಿದ್ದು ಜನಪ್ರಿಯತೆ ತಂದಿತು.

ತನ್ನ ಕನಸುಗಳನ್ನು ಹಂಚಿಕೊಳ್ಳಲು ನಂದಿತ ಪದೇಪದೇ ಮಾಧ್ಯಮದವರ ಸಹವಾಸ ಮಾಡಿದ್ದೂ ಉಂಟು. ಹೇಳಿಕೇಳಿ ಕಾರ್ಪೊರೇಟ್‌ ತಂತ್ರಜ್ಞಾನಿಯಾದ ನಂದಿತಾಗೆ ಮಾರುಕಟ್ಟೆ ಗುಟ್ಟುಗಳು ಅಂಗೈನೆಲ್ಲಿ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಬಲು ಕಾಲ ನೆಲೆ ನಿಂತಳು. ಕೈತುಂಬಾ ಕೆಲಸ ತಂದುಕೊಂಡಳು. ವೀಣೆ ನುಡಿಸುವುದನ್ನು ಬಿಡದೆ, ಆಲ್ಬಂ ತರುವ ಮನಸ್ಸು ಮಾಡಿದಳು. ಹಿಂದಿ ಸಿನಿಮಾಗಳಲ್ಲಿ ಹಾಡಬೇಕು, ಮಟ್ಟುಗಾರಳಾಗಬೇಕು ಅಂತ ಕನಸು ಕಂಡಳು.

2003ನೇ ಇಸವಿಯಲ್ಲಿ ಪದೇಪದೇ ಪತ್ರಿಕೆಗಳ ಹೂರಣವಾದ ಸ್ಫುರದ್ರೂಪಿ ನಂದಿತಾ, ಇದೇ ವರ್ಷ ಮದುವೆಯಾಗುತ್ತಿದ್ದಾರೆ. ಫಿಲಿಪ್ಸ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ರಮೇಶ್‌ ಎಂಬಾತ ವರ. ಡಿಸೆಂಬರ್‌ 18ನೇ ತಾರೀಕು ಬೆಂಗಳೂರಿನ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಮದುವೆ.

ನಿಶ್ಚಿತಾರ್ಥವಿಲ್ಲದೆ ನೇರ ಮದುವೆ ಮಾಡಿಕೊಳ್ಳಲು ನಂದಿತಾ ಹೊರಟಿರುವುದಕ್ಕೆ ಯಾವುದೇ ಬೇರೆ ಕಾರಣಗಳಿಲ್ಲವಂತೆ. ಮದುವೆಯಾದ ಮೇಲೂ ಹಾಡು ವೃತ್ತಿಯನ್ನು ಬಿಡೋದಿಲ್ಲ ಎಂದು ನಂದಿತಾ ನಕ್ಕರು. ರಮೇಶ್‌ ನೆನಪಾಗುತ್ತಾರಾ ಅಂದಾಗ, ಅವರ ಕೆನ್ನೆ ಇನ್ನಷ್ಟು ಕೆಂಪಾಯಿತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada