»   » ‘ಬಾಬಾ’ ಮೇಲೆ ಕಂಡಾಪಟ್ಟೆ ಹಣ ಸುರಿದ ವಿತರಕರು ಗಿಟ್ಟಲಿಲ್ಲ

‘ಬಾಬಾ’ ಮೇಲೆ ಕಂಡಾಪಟ್ಟೆ ಹಣ ಸುರಿದ ವಿತರಕರು ಗಿಟ್ಟಲಿಲ್ಲ

Posted By: *ರಮೇಶ್‌ ಪಾಂಡ್ಯನ್‌, ಚೆನ್ನೈ
Subscribe to Filmibeat Kannada

ಇವತ್ತು ವಿಷ್ಣುವರ್ಧನ್‌ ಕಾಲ್‌ಶೀಟ್‌ಗೆ ನಿರ್ಮಾಪಕರು ಯಾಕೆ ಮುಗಿಬೀಳುತ್ತಾರೆ ಹೇಳಿ? ಚಿತ್ರ ತೆಗೆದು, ವಿತರಕರಿಗೆ ಪ್ರದರ್ಶನದ ಹಕ್ಕನ್ನು ಮಾರಿದ ಕ್ಷಣವೇ ಅವರಿಗೆ ಕಂಡಾಪಟ್ಟೆ ಲಾಭ ಬಂದುಬಿಡುತ್ತದೆ. ದುರದೃಷ್ಟ ವಶಾತ್‌ ಸಿನಿಮಾ ನೆಲಕಚ್ಚಿದರೂ, ಲುಕಸಾನಾಗೋದು ಪ್ರದರ್ಶಕ/ವಿತರಕರಿಗೇ ಹೊರತು ನಿರ್ಮಾಪಕರಿಗಲ್ಲ. ಹೀಗೆ ಗೆಲ್ಲುವ ಕುದುರೆ ಮೇಲೆ ಹಾಕಿದ ದುಡ್ಡು ಎಡವಟ್ಟಾಗಿ ಠುಸ್ಸೆಂದರೆ, ವಿತರಕ ಫುಟ್‌ಪಾತಿಗೆ ಬರುವಂಥಾ ಪರಿಸ್ಥಿತಿಯೂ ಬಂದೊದಗುತ್ತದೆ. ಆಗ ವಿತರಕ ತನ್ನ ಗೋಳನ್ನು ತಾನೇ ಅನುಭವಿಸಬೇಕು. ನೆರವಿಗೆ ನಿರ್ಮಾಪಕನಾಗಲೀ, ನಾಯನಾಗಲೀ ಬಂದ ಉದಾಹರಣೆ ಪ್ರಾಯಶಃ ಸಿಗಲಿಕ್ಕಿಲ್ಲ. ಹಾಕಿದ ದುಡ್ಡಿನ ಬಡ್ಡಿ ಹಿಮಾಲಯ ಪರ್ವತದಂತೆ ಬೆಳೆದು ನಿಂತು, ತನ್ನ ನಿರ್ಮಾಣದ ಎಚ್‌ಟುಓ ಚಿತ್ರ ನಿರೀಕ್ಷಿತ ದುಡ್ಡು ತಂದುಕೊಡದಿದ್ದಾಗ ಫುಟ್‌ಪಾತಿನ ಮೇಲೆ ಧನರಾಜ್‌ ಕೂತಾಗ ಉಪ್ಪಿ ಖಂಡಿತ ನೆರವಿಗೆ ಬರಲಿಲ್ಲ.

ಇಂಥಾ 'ಇಸ್ಕಂಡೋನೇ ಕೋಡಂಗಿ" ಸನ್ನಿವೇಶದಲ್ಲಿ , ಕೊಟ್ಟೋನೇ ಕೈಹಿಡಿಯುವಂಥಾ ಅಪರೂಪದ ವ್ಯಕ್ತಿಯಾಗಿ ರಜನೀಕಾಂತ್‌ ಮಾಡಿರುವ ಕೆಲಸ ಶ್ಲಾಘನೀಯ. ರಜನಿ ಮಹತ್ವಾಕಾಂಕ್ಷೆಯ 'ಬಾಬಾ" ಚಿತ್ರದ ಮೇಲೆ ಕನಿಷ್ಠ ಗಿಟ್ಟುವ ನಿರೀಕ್ಷಿತ ಹಣವೇ ಮಿಲಿಯನ್ನುಗಟ್ಟಲೆಯಿತ್ತು. ವಿತರಕರು, ಪ್ರದರ್ಶಕರು ಕೂಡ ಇದೇ ಲೆಕ್ಕಾಚಾರದಲ್ಲಿ ರಜನಿಗೆ ಕೈತುಂಬಾ ಹಣ ಕೊಟ್ಟು ಸಿನಿಮಾ ಹಕ್ಕು ಪಡಕೊಂಡರು. ಸಿನಿಮಾ ಬಿಡುಗಡೆಯಾದ ಮೇಲೆ ರಜನಿ ಅಮೆರಿಕಾಗೆ ಹೋದರು. ಆದರಿಲ್ಲಿ ಬಿಡುಗಡೆಯಾದ ಒಂದೇ ವಾರದ ನಂತರ 'ಬಾಬಾ" ಹಾಕಿಕೊಂಡ ಚಿತ್ರಮಂದಿರಗಳು ಭಣಭಣ ! ವಿತರಕರು ಕಂಗಾಲಾದರು. ಪ್ರದರ್ಶಕರು ಬೊಂಬಡಾ ಬಜಾಯಿಸತೊಡಗಿದರು.

ಅಮೆರಿಕಾದಿಂದ ವಾಪಸ್ಸಾದದ್ದೇ ತಡ, ರಜನಿ ತಮಿಳುನಾಡಿನ ಮುಖ್ಯ ವಿತರಕರನ್ನೆಲ್ಲಾ ಕರೆಸಿ ಮಾತಿಗೆ ಕೂತರು. ಆಗಿರುವ ಲುಕಸಾನು ಏನಿದೆ, ಅದನ್ನು ತಾವೇ ಭರಿಸಿಕೊಡುವುದಾಗಿ ಅಭಯ ಹಸ್ತ ನೀಡಿದರು. ಈ ಸಭೆಯಿಂದ ಹೊರ ಬಂದಾಗ ಎಷ್ಟೋ ವಿತರಕರ ಕಣ್ಣಲ್ಲಿ ನೀರು ತುಂಬಿತ್ತು !

ಸಭೆಯಿಂದ ಹೊರ ಬಂದ ನಂತರ ತಮಿಳುನಾಡಿನ ಫೇಮಸ್‌ ವಿತರಕ ತಿರುಪ್ಪೂರು ಸುಬ್ರಮಣಿಯನ್‌ ಏನಂದರು ಗೊತ್ತಾ-
'ನಾವು ವರ್ಷಗಟ್ಟಲೆಯಿಂದ ಈ ಕೆಲಸ ಮಾಡ್ತಿದೀವಿ. ಚರಿತ್ರೇಲೇ ಒಬ್ಬರೂನೂ ಲುಕಸಾನು ಭರಿಸಿ ಕೊಟ್ಟಿದ್ದಿಲ್ಲ. ಕೊನೆ ಪಕ್ಷ ನಷ್ಟ ತುಂಬಿಕೊಳ್ಳಲು ನಮಗೆ ಬೇರೆ ಥರದ ಸಹಾಯಾನೂ ಮಾಡಿಕೊಟ್ಟಿಲ್ಲ. ರಜನಿಕಾಂತ್‌ ಸೂಪರ್‌ ಸ್ಟಾರ್‌ ಅಷ್ಟೇ ಅಲ್ಲ, ಒಬ್ಬ ಮಾನವೀಯ ಮೂರ್ತಿ. ಅವರಿಗೆ ಹ್ಯಾಟ್ಸಾಫ್‌". ಇಷ್ಟು ಹೇಳುವಷ್ಟರಲ್ಲಿ ಸುಬ್ರಮಣಿಯನ್‌ ಗದ್ಗದಿತರಾಗಿದ್ದರು.

ರಜನಿ ಕಟ್ಟಿಕೊಟ್ಟಿರುವ ಲುಕಸಾನಿನ ಮೊತ್ತದಲ್ಲೇ ಇನ್ನೂ ಹತ್ತಾರು ಚಿತ್ರಗಳನ್ನು ತೆಗೆದುಬಿಡಬಹುದು. ಕಾಂಪೆನ್ಸೇಷನ್‌ ಅಂತ ಅವರು ಕೊಟ್ಟಿರುವ ಮೊತ್ತ ಹದಿನೈದರಿಂದ ಹದಿನಾರು ಕೋಟಿ ರುಪಾಯಿ! ಇನ್ನೊಂದು ಚಿತ್ರ ಮಾಡಿ, ಆಗಿರುವ ನಷ್ಟ ತುಂಬಿಕೊಡುವ ಪ್ರಸ್ತಾವನೆಗೂ ಮೀರಿ ಸ್ಪಂದಿಸಿರುವ ರಜನಿ, ಸಿನಿಮಾ ಉದ್ದಿಮೆದಾರರ ವ್ಯಾಪಾರಿ ಧೋರಣೆ ನಡುವೆ ಮಾದರಿ ಮಾನವೀಯ ಮನುಷ್ಯನಾಗಿ ನಿಂತಿದ್ದಾರೆ. ಬೇರೆ ಚಿತ್ರೋದ್ಯಮದವರಿಗೂ ನಡಾವಳಿ ಮಾದರಿಯಾಗಲಿ. ಪೂರಕ ಓದಿಗೆ-

English summary
In an unprecedented and historic gesture, the living legend of Tamil cinema Rajnikanth, established beyond doubt that he is not only the real superstar but also the 'demi God' to the film trade in Tamil Nadu. He has compensated all the exhibitors and distributors of his much hyped Baba

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada