»   » ದುನಿಯಾ ನೆಟ್ಟಗಿಲ್ಲ; ಒಂದ್ವರ್ಷ ವಿಜಯ್ ಬಣ್ಣ ಹಚ್ಚುವಂತಿಲ್ಲ!

ದುನಿಯಾ ನೆಟ್ಟಗಿಲ್ಲ; ಒಂದ್ವರ್ಷ ವಿಜಯ್ ಬಣ್ಣ ಹಚ್ಚುವಂತಿಲ್ಲ!

Subscribe to Filmibeat Kannada

ದುನಿಯಾ ವಿಜಯ್ ಸಿನಿ ಭವಿಷ್ಯಕ್ಕೆ ಮಂಕು ಕವಿದಿದೆ. ಎಸ್.ನಾರಾಯಣ್ ದೆಸೆಯಿಂದ ಒಂದು ವರ್ಷ ಬಣ್ಣದ ಬದುಕಿನಿಂದ ದೂರ ಉಳಿಯಬೇಕಾದ ಸ್ಥಿತಿ ವಿಜಯ್ ಮುಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ, ವಿಜಯ್ ಅವರನ್ನು ಚಿತ್ರರಂಗದಿಂದ ಒಂದು ವರ್ಷ ಅಮಾನತುಗೊಳಿಸಿದೆ. ಮಂಡಳಿ ತೀರ್ಮಾನವನ್ನು ವಿಜಯ್ ಅಭಿಮಾನಿಗಳು ಗುರುವಾರ(ನ.1)ತೀವ್ರವಾಗಿ ವಿರೋಧಿಸಿದ್ದಾರೆ.

ಸಂಧಾನ ಸಮಿತಿ ಎದುರು ವಿಜಯ್ ಕ್ಷಮೆ ಕೋರಿದರೆ, ಸಮಿತಿಯ ಸದಸ್ಯರು ಸಮ್ಮತಿಸಿದರೆ ನಿರ್ಬಂಧವನ್ನು ತೆರವುಗೊಳಿಸುತ್ತೇವೆ. ಇಲ್ಲದಿದ್ದರೇ ವಿಜಯ್ ಅವರಿಗೆ ಶಿಕ್ಷೆ ತಪ್ಪುವುದಿಲ್ಲ. ಅವರನ್ನು ಹಾಕಿಕೊಂಡು ಯಾರಾದರೂ ಚಿತ್ರ ಮಾಡಿದರೆ ಅವರನ್ನೂ ಅಮಾನತುಗೊಳಿಸಲಾಗುತ್ತದೆ ಎಂದು ಮಂಡಳಿ ಸ್ಪಷ್ಟವಾಗಿ ಹೇಳಿದೆ.

ಏನಿದು ತಂಟೆ ಮತ್ತು ತಕರಾರು ? : ಎಸ್.ನಾರಾಯಣ್ ಅವರ 'ಚಂಡ'ಚಿತ್ರದಲ್ಲಿ ವಿಜಯ್ ನಾಯಕ. ಪೂರ್ವ ಒಪ್ಪಂದದಂತೆ ತಮ್ಮ ಇನ್ನೊಂದು ಚಿತ್ರ 'ಯುಗ'ಬಿಡುಗಡೆಯಾದ 50ದಿನಗಳ ನಂತರ 'ಚಂಡ'ಬಿಡುಗಡೆ ಮಾಡಬೇಕು ಎಂದು ವಿಜಯ್ ಷರತ್ತು ಹಾಕಿದ್ದರು. ಆಗ ಒಪ್ಪಿದ್ದ ನಾರಾಯಣ್, ಈಗ ತರಾತುರಿಯಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾದರು.

ವಿಜಯ್ ಡಬ್ಬಿಂಗ್ ನಡೆಸದೇ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ವಾಣಿಜ್ಯ ಮಂಡಳಿ ಸಂಧಾನದ ನಂತರ ಡಬ್ಬಿಂಗ್ ಮಾಡಲು ಒಪ್ಪಿದರು. ಆದರೆ ಡಬ್ಬಿಂಗ್ ಕಾರ್ಯಕ್ಕೆ ವಿಜಯ್ ಸಹಕಾರ ನೀಡಲಿಲ್ಲ. ಗಂಟಲು ತೊಂದರೆಯಿದೆ ಎಂದು ನೆಪ ಹೇಳಿದರು.ಹದಿನೈದು ದಿನಗಳ ವರೆಗೆ ಡಬ್ಬಿಂಗ್ ಮಾಡಲಾಗದು ಎಂದರು.ಆದರೆ ಖಾಸಗಿ ಚಾನೆಲ್ ವೊಂದಕ್ಕೆ ಈ ಅವಧಿಯಲ್ಲಿ ಅವರು ಸುದೀರ್ಘ ಸಂದರ್ಶನ ನೀಡಿದ್ದಾರೆ ಎಂದು ನಾರಾಯಣ್ ದೂರಿದರು.

ಈ ಬಗ್ಗೆ ಸಭೆ ನಡೆಸಿದ ಕರ್ನಾಟಕ ವಾಣಿಜ್ಯ ಮಂಡಳಿ, ವಿಜಯ್ ಬಗ್ಗೆ ಅಸಮಾಧಾನಗೊಂಡಿದೆ. ಮಂಡಳಿ ಆದೇಶವನ್ನು ವಿಜಯ್ ಧಿಕ್ಕರಿಸಿದ್ದಾರೆ.. ಹೀಗಾಗಿ ಶಿಕ್ಷೆ ನೀಡಲಾಗಿದೆ ಎಂದು ಮಂಡಳಿ ಸದಸ್ಯರು ಹೇಳಿದ್ದಾರೆ. ಅಮಾನತ್ತಿನಿಂದ ವಿಜಯ್ ಅವರ ಮುಂದಿನ ಚಿತ್ರಗಳಾದ 'ಅವ್ವ' ಮತ್ತು ಪತ್ರಕರ್ತ ರವಿ ಬೆಳಗೆರೆ ನಿರ್ಮಾಣದ'ಮುಖ್ಯಮಂತ್ರಿ ಇನ್ ಲವ್' ಚಿತ್ರಕ್ಕೆ ತೊಡಕಾಗಿದೆ.

ಅಂದ ಹಾಗೇ, ವಿಜಯ್ ಅಭಿನಯದ'ಯುಗ'ಚಿತ್ರವು ಶುಕ್ರವಾರ(ನ.02) ಬಿಡುಗಡೆಯಾಗಲಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada