»   » ಕಾದಂಬರಿಯನ್ನು ಸಿನಿಮಾ ಮಾಡೋಕೆ ಅಪ್ಪಣೆ ಕೊಟ್ಟಿದ್ದರು

ಕಾದಂಬರಿಯನ್ನು ಸಿನಿಮಾ ಮಾಡೋಕೆ ಅಪ್ಪಣೆ ಕೊಟ್ಟಿದ್ದರು

Posted By: Staff
Subscribe to Filmibeat Kannada

'ಸಿಂಗಾರೆವ್ವ" ಪ್ರಾಜೆಕ್ಟಿನಲ್ಲಿ ಮುಳುಗಿರುವ ನಾಗಾಭರಣರ 'ಹೆಜ್ಜೆ" ಕನಸಿಗೆ ಕೊಡಲಿ ಬಿದ್ದಿದೆ. ನಿರ್ಮಾಪಕ ಕುಮಾರ ಸ್ವಾಮಿ ಇವರಿಗೆ ಕೊಕ್‌ ಕೊಟ್ಟಿರುವ ಸುದ್ದಿಯನ್ನು ಖುದ್ದು ಕಾದಂಬರಿಕಾರ ಬಲ್ಲಾಳರೇ ಹೇಳಿದ್ದಾರೆ.

ಸರಿ ಸುಮಾರು ಒಂದು ವರ್ಷದ ಹಿಂದೆ ಬಲ್ಲಾಳರ 'ಹೆಜ್ಜೆ " ಕಾದಂಬರಿ ಬಿಡುಗಡೆಗೆ ಸಿದ್ಧವಾದಾಗಲೇ ಅದರ ಹಕ್ಕನ್ನು ನಾಗಾಭರಣ ಗಿಟ್ಟಿಸಿಕೊಂಡರು. 'ಸಂಯುಕ್ತ ಕರ್ನಾಟಕ"ದ ವಿಮರ್ಶೆ ನೋಡಿದ ದೇವೇಗೌಡರ ಪುತ್ರ ಕುಮಾರ ಸ್ವಾಮಿ ಕೂಡ ಬಲ್ಲಾಳರ ಮನೆಗೆ ಹೋಗಿ, ಕಾದಂಬರಿಯನ್ನು ಸಿನಿಮಾ ಮಾಡಲು ಹಕ್ಕು ಕೇಳಿ ನಿಂತರು. ಬಲ್ಲಾಳರು ನಾಗಾಭರಣರಿಗೆ ಅದನ್ನು ಕೊಟ್ಟ ವಿಷಯ ಹೇಳಿದರು. 'ಅದಕ್ಕೇನಂತೆ, ನಾಗಾಭರಣರ ಕೈಯಲ್ಲೇ ನಿರ್ದೇಶಿಸಿದರಾಯಿತು" ಅಂತ ನಿಂತಲ್ಲೇ ಹೇಳಿದ ಕುಮಾರ ಸ್ವಾಮಿ ಮಾತನ್ನು ನಾಗಾಭರಣ ನಂಬಿದರು.

ಅದಾದ ನಂತರ ಜಯಂತ ಕಾಯ್ಕಿಣಿ ಮೊದಲಾದ ಬುದ್ಧಿಜೀವಿಗಳನ್ನು ಒಂದೆಡೆ ಕೂಡಿಸಿ, ಕಾದಂಬರಿಯನ್ನು ಚಿತ್ರಕತೆಯಾಗಿಸುವ ನಿಟ್ಟಿನಲ್ಲಿ ಭರಣ ಅದೆಷ್ಟೋ ಸುತ್ತುಗಳ ಮಂಥನವನ್ನೂ ಮಾಡಿದ್ದಾಯಿತು. ಇನ್ನೇನು ಚಿತ್ರಕತೆ ನೇಯಬೇಕು ಎನ್ನುವಷ್ಟರಲ್ಲಿ ಕನಕಪುರ ಚುನಾವಣೆ ಅಖಾಡದಲ್ಲಿ ದೇವೇಗೌಡರು ನಿಂತರು. ಸಹಜವಾಗೇ ಅಪ್ಪನ ಗೆಲ್ಲಿಸುವ ಕಾಯಕದಲ್ಲಿ ಕುಮಾರ ಸ್ವಾಮಿ ಬ್ಯುಸಿಯಾದರು. 'ಹೆಜ್ಜೆ" ಮೂಡುವುದು ಮುಂದಕ್ಕೆ ಹೋಯಿತು.

ಚುನಾವಣೆ ಮುಗಿದರೂ ನಾಗಾಭರಣರಿಗೆ ಕುಮಾರ ಸ್ವಾಮಿ ಒಂದು ಫೋನೂ ಮಾಡಲಿಲ್ಲ. ಭರಣಾರೇ ಪದೇಪದೇ ಕುಮಾರ ಸ್ವಾಮಿಗೆ 'ಹೆಜ್ಜೆ" ನೆನಪಿಸುವ ಯತ್ನ ಮಾಡಿದರು. ಯಾವಾಗಲೂ ಏನಾದರೊಂದು ನೆಪವೊಡ್ಡಿ ಮುಹೂರ್ತವನ್ನು ಮುಂದೂಡುತ್ತಲೇ ಬಂದ ಕುಮಾರ ಸ್ವಾಮಿ ಈಗ ನಾಗಾಭರಣರನ್ನು ಪ್ರಾಜೆಕ್ಟಿನಿಂದ ಬಿಟ್ಟಿರುವ ಸುದ್ದಿಯನ್ನು ಬಲ್ಲಾಳರಿಗೆ ಹೇಳಿದ್ದಾರೆ.

ಅಂದಹಾಗೆ, ಬಲ್ಲಾಳರು ನಾಗಾಭರಣರ ಮುಖ ನೋಡಿಕೊಂಡು 'ಹೆಜ್ಜೆ"ಯ ಹಕ್ಕನ್ನು ದಯಪಾಲಿಸಿದ್ದರು. ಅದನ್ನೀಗ ಬೇರೆ ಯಾರೋ ನಿರ್ದೇಶಿಸುವಂತಾಗಿದೆ. ಈ ಕುರಿತು ಬಲ್ಲಾಳರು ಈಗ ಏನೂ ಮಾಡುವ ಹಾಗಿಲ್ಲ.

ಈ ಬಗ್ಗೆ ಕೆಣಕಿದರೆ, ಭರಣ ನಗುತ್ತಲೇ ಹೇಳುತ್ತಾರೆ- 'ಹೆಜ್ಜೆ ಕಾದಂಬರಿ ಯಾವುದೇ ಕಾಲಕ್ಕೂ ಸಲ್ಲುವಂಥಾ ವಸ್ತು ಹೊಂದಿದೆ. ಅದನ್ನು ಯಾರೇ ಮಾಡಲಿ, ಚೆನ್ನಾಗಿ ಮಾಡಲಿ ಅನ್ನೋದು ನನ್ನ ಹಾರೈಕೆ".

ಈ ಪ್ರಕಾರವಾಗಿ- ಭರಣಾರ ಕಾದಂಬರಿ, ಕಥೆಗಳ ಹಕ್ಕು ಭಂಡಾರದಿಂದ 'ಹೆಜ್ಜೆ" ಮಾಯವಾದಂತಾಗಿದೆ. ಇದರಿಂದಲಾದರೂ ಭರಣಾರ ಹಕ್ಕು ಸ್ಟಾಕ್‌ ಸಿಂಡ್ರೋಮ್‌ ಶಮನವಾಗಲಿ. ಏನಂತೀರಿ?

English summary
T.S.Nagabharana not to direct Vyasaraya Ballas novel based film Hejje

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada