»   » ವೆಂಕಟ ಇನ್ ಸಂಕಟನಾಗಿ ರಮೇಶ್

ವೆಂಕಟ ಇನ್ ಸಂಕಟನಾಗಿ ರಮೇಶ್

Subscribe to Filmibeat Kannada

ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶಸಿ ಜಾಣ ನಿರ್ದೇಶಕ, ಮಧ್ಯಮ ವರ್ಗ ಪ್ರೇಕ್ಷಕರ ಡಾರ್ಲಿಂಗ್ ಎಂದೇ ಹೆಸರಾಗಿರುವ ರಮೇಶ್ ಅರವಿಂದ್ ತಮ್ಮ ನಾಲ್ಕನೆಯ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸೋಮವಾರದಿಂದ ಅವರ ನಿರ್ದೇಶನದ 'ವೆಂಕಟ ಇನ್ ಸಂಕಟ'ಚಿತ್ರೀಕರಣ ಶುರುವಾಗಿದೆ. ಪೊಲೀಸ್ ಪಾತ್ರದಲ್ಲಿ ರಮೇಶ್ ಅಭಿನಯಿಸಿದ್ದು ಈ ಚಿತ್ರವನ್ನು ಬೆಂಗಳೂರಿನ ಸಿನಿಮಾ ಹೌಸ್ ಕಾರ್ಪೊರೇಟ್ ಸಂಸ್ಥೆಗಾಗಿ ಮಾಡಿಕೊಡುತ್ತಿದ್ದಾರೆ.

ವಶಿಷ್ಠ ಪ್ರೊಡಕ್ಷನ್ಸ್ ಗಾಗಿ ರಮೇಶ್ ನಿರ್ದೇಶಿಸಿದ 'ಆಕ್ಸಿಡೆಂಟ್' ಚಿತ್ರ ಅಷ್ಟಾಗಿ ದುಡ್ಡು ಗಳಿಸದೇ ಇದ್ದರೂ ಉತ್ತಮ ವಿಮರ್ಶೆಗೆ ಪಾತ್ರವಾಗಿತ್ತು. ಈ ಹಿಂದೆ ನಿರ್ದೇಶಿಸಿದ ಹಾಸ್ಯ ಚಿತ್ರಗಳಾದ'ರಾಮ ಶಾಮ ಭಾಮ' ಹಾಗೂ 'ಸತ್ಯವಾನ್ ಸಾವಿತ್ರಿ' ಬಾಕ್ಸಾಫೀಸ್ ಗಳಿಕೆಯಲ್ಲಿ ಗೆದ್ದಿದ್ದವು.

ಈಗ ಅಂತಹದ್ದೇ ಮತ್ತೊಂದು ಹಾಸ್ಯ ಪ್ರಧಾನ ಚಿತ್ರ 'ವೆಂಕಟ ಇನ್ ಸಂಕಟ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಪೊಲೀಸ್ ಪೇದೆಯಾಗಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುವ ಪಾತ್ರ ರಮೇಶ್ ಅವರದ್ದು. ಸಾಮಾನ್ಯ ಪೊಲೀಸ್ ಪೇದೆಯಾಗಿದ್ದುಕೊಂಡು ಪೊಲೀಸ್ ಕಮೀಷನರ್ ಆಗಬೇಕೆಂಬ ದೊಡ್ಡ ಕನಸು ಕಟ್ಟಿರುತ್ತಾನೆ. ಹಾಗೆ ಆಗಲು ಹೊರಡುವ ವೇಳೆಯಲ್ಲಿ ಎದುರಾಗುವ ಹಾಸ್ಯಮಯ ಸನ್ನಿವೇಶಗಳನ್ನು ರಮೇಶ್ ತನ್ನದೇ ಆದ ಶೈಲಿಯಲ್ಲಿ ತೆರೆಗೆ ತರಲಿದ್ದಾರೆ.

ತುಂಬುಗೆನ್ನೆಯ, ನೀಳ ಕಾಲ್ಗಳ ನಟಿ ಶರ್ಮಿಳಾ ಮಾಂಡ್ರೆ ನಾಯಕಿ ಪಾತ್ರದಲ್ಲಿ 'ವೆಂಕಟ ಇನ್ ಸಂಕಟ' ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಿಕೆ ಎಚ್ ದಾಸ್ ಛಾಯಾಗ್ರಹಣ, ಆಕ್ಸಿಡೆಂಟ್ ಚಿತ್ರದಲ್ಲಿ ಉತ್ತಮ ಸಂಗೀತ ನೀಡಿದ ರಿಕಿ ಕೇಜ್ ಈ ಚಿತ್ರಕ್ಕ್ಕೂ ಸಂಗೀತವನ್ನು ಧಾರೆ ಎರೆದಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada