ಕ್ರೇಜಿಮಾಮ ರವಿಚಂದ್ರನ್ ದಶಮುಖ ಅವತಾರ
ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಸಿಕ್ಕ ಒಂದೇ ಒಂದು ಅವಕಾಶವನ್ನೂ ಬಿಡುತ್ತಿಲ್ಲ. ಬಂದ ಚಿತ್ರಗಳಿಗೆಲ್ಲಾ ಪಟಪಟನೆ ಸಹಿ ಹಾಕುತ್ತಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ಅವರ ಮತ್ತೊಂದು ಚಿತ್ರಕ್ಕೆ ಕ್ರೇಜಿಸ್ಟಾರ್ ಇತ್ತೀಚೆಗೆ ಸಹಿಹಾಕಿದರು. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ರವಿ ಶ್ರೀವತ್ಸ.
ನಾಯಕಿಯ ಹುಡುಕಾಟ ನಡೆದಿದೆ. ಉಳಿದ ಪಾತ್ರಗಳ ಆಯ್ಕೆ ಮುಗಿದಿದ್ದು ಪಟ್ಟಿ ಹೀಗಿದೆ: ಅನಂತನಾಗ್, ಅವಿನಾಶ್, ದೇವರಾಜ್, ಸರಿತಾ ಹಾಗೂ ಜುಗಾರಿ ಖ್ಯಾತಿಯ ಅವಿನಾಶ್. ಹರಿಕೃಷ್ಣ ಸಂಗೀತ ಸಂಯೋಜನೆ, ಮ್ಯಾಥ್ಯೂ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಎಂಬತ್ತರ ದಶಕದಲ್ಲಿ ವರನಟ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಹಾಗೂ ಅನಂತನಾಗ್ ಜೊತೆ ಅಭಿನಯಿಸಿದ್ದ ಸರಿತಾ ಈ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ರಾಕ್‌ಲೈನ್ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ.
ಈ ಹಿಂದೆ ರವಿಚಂದ್ರನ್ ನೀಲಕಂಠನಾಗಿ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಬಾರಿ ಅವರು 'ದಶಮುಖ'ನಾಗಿ ಬರುತ್ತಿದ್ದಾರೆ. ದಶಮುಖ ಎಂದರೆ ರಾವಣ. ಆದರೆ ಪೌರಾಣಿಕ ರಾವಣನಿಗೂ ನಮ್ಮ ದಶಮುಖನಿಗೂ ಸಂಬಂಧವಿಲ್ಲ. ಇದೊಂದು ಸಂದೇಶಾತ್ಮಕ ಚಿತ್ರ ಎಂದಿದ್ದಾರೆ ಸೂರಪ್ಪ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











