ಚಾಲೆಂಜಿಂಗ್ ಸ್ಟಾರ್‌ಗೆ ನಿಖಿತಾ ಜೊತೆ ಮದುವೆ?!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿ ನಿಖಿತಾ ಅವರನ್ನು ಮದುವೆಯಾದರಂತೆ ಎಂಬ ಸುದ್ದಿ ಕಳೆದೆರಡು ದಿನಗಳಿಂದ ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿತ್ತು. ಈ ಸುದ್ದಿ ನಿಜವೇ ಎಂದು ದರ್ಶನ್ ಅವರನ್ನು ಕೇಳಿದರೆ ಅವರು ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ.
ನಮ್ಮಿಬ್ಬರಿಗೂ ಮದುವೆಯಾಗಿದ್ದು ನಿಜ, ಆದರೆ ಇದು ತೆರೆ ಮೇಲಿನ ಮದುವೆ ಅಷ್ಟೆ. 'ಪ್ರಿನ್ಸ್ 'ಚಿತ್ರಕ್ಕಾಗಿ ನಡೆದ ಮದುವೆ ಸನ್ನಿವೇಶ ಚಿತ್ರೀಕರಣವಿದು. ತಮಗೆ ಮದುವೆಯಾಯಿತು ಎಂದು ಸುದ್ದಿ ಹಬ್ಬಿರುವ ಬಗ್ಗೆ ದರ್ಶನ್ ಸಖೇದಾಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ನಿಖಿತಾ ಅವರನ್ನು ದರ್ಶನ್ ಮುಂಬೈನಲ್ಲಿ ಮದುವೆಯಾದರಂತೆ ಎಂಬುದೇ ವದಂತಿ.
ಈ ಬಗ್ಗೆ ದರ್ಶನ್ ಪ್ರತಿಕ್ರಿಯಿಸುತ್ತಾ, ಕೆಲ ದಿನಗಳ ಹಿಂದಷ್ಟೆ ನಮ್ಮಿಬ್ಬರಿಗೂ ಮದುವೆಯಾಯಿತು. ಈ ಮದುವೆಗೆ ಕಾರಣರಾದವರು ನಿರ್ದೇಶಕ ಓಂ ಪ್ರಕಾಶ್ ರಾವ್. ಒಂದು ವೇಳೆ ಇದು ನಿಜವಾದ ಮದುವೆಯೇ ಆಗಿದ್ದರೆ ನಾನು ಎಲ್ಲರನ್ನೂ ಆಹ್ವಾನಿಸುತ್ತಿದೆ. ಆದರೆ ಇದು ಚಿತ್ರೀಕರಣಕ್ಕಾಗಿ ನಡೆದ ಮದುವೆ ಅಷ್ಟೇ ಎಂದಿದ್ದಾರೆ.
ದರ್ಶನ್ ಮತ್ತು ನಿಖಿತಾ ಮುಖ್ಯ ಭೂಮಿಕೆಯಲ್ಲಿರುವ 'ಪ್ರಿನ್ಸ್' ಚಿತ್ರೀಕರಣ ಸದ್ಯಕ್ಕೆ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದಿನಕರ್ ತೂಗುದೀಪ ಅವರು, ದರ್ಶನ್ ಅವರಿಗೆ ಈಗಾಗಲೆ ಮದುವೆಯಾಗಿದ್ದು ಅವರಿಗೆ ಮಗು ಸಹ ಇದೆ. ಅವರು ಇನ್ನೊಂದು ಮದುವೆಯಾಗುವಂತಹದ್ದೇನು ಆಗಿಲ್ಲ ಎಂದಿದ್ದಾರೆ.


Click it and Unblock the Notifications











