ಡಿಸೆಂಬರ್ 1ರಿಂದ ಕನ್ನಡ ಚಿತ್ರೋದ್ಯಮ ಬಂದ್
ರಾಜ್ಯದಲ್ಲಿ ಪರಭಾಷಾ ಚಿತ್ರಗಳನ್ನು ನಿಯಂತ್ರಿಸಲು ಹಾಗೂ ಡಬ್ಬಿಂಗ್ ಸಂಸ್ಕೃತಿಗೆ ಬ್ರೇಕ್ ಹಾಕಲು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಕೆಲ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಕೆಎಫ್ ಸಿಸಿ ರೂಪಿಸಿರುವ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಕ್ರಮ ಖಂಡಿಸಿ ಡಿ.1ರಿಂದ ಚಿತ್ರರಂಗದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಬಂದ್ ಆಚರಿಸಲು ಚಿತ್ರೋದ್ಯಮ ನಿರ್ಧರಿಸಿದೆ.
ಪರಭಾಷಾ ವಿತರಕರು, ಡಬ್ಬಿಂಗ್ ಚಿತ್ರ ಪ್ರದರ್ಶಿಸುವ ಟಿವಿ ವಾಹಿನಿಗಳು ಹಾಗೂ ಕನ್ನಡ ಚಿತ್ರಗಳನ್ನು ಕಡೆಗಣಿಸುತ್ತಿರುವ ಮಲ್ಟಿಫ್ಲೆಕ್ಸ್‌ಗಳು ಮಂಡಳಿ ನಿಯಮದಂತೆ ನಡೆದುಕೊಳ್ಳುತ್ತಿಲ್ಲ. ಈ ಧೋರಣೆ ಖಂಡಿಸಿ ಚಿತ್ರೋದ್ಯಮ ಬಂದ್‌ಗೆ ಕರೆ ನೀಡುತ್ತಿರುವುದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ತಿಳಿಸಿದ್ದಾರೆ.
ಯಾವುದೇ ಟಿವಿ ವಾಹಿನಿಗಳು ಡಬ್ಬಿಂಗ್ ಕಾರ್ಯಕ್ರಮವಾಗಲಿ, ಡಬ್ ಆದ ಚಿತ್ರಗಳನ್ನು ಪ್ರಸಾರ ಮಾಡುವಂತಿಲ್ಲ. ಅನ್ಯಭಾಷಾ ಚಿತ್ರಗಳನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವಂತಹವರು ಕಡ್ಡಾಯವಾಗಿ ಮಂಡಳಿ ಸದಸ್ಯತ್ವ ಪಡೆಯಬೇಕು. ಮಲ್ಟಿಫೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳ ಮೂರು ಪ್ರದರ್ಶನಕ್ಕೆ ಅವಕಾಶ ಕೊಡಬೇಕು. ಈ ಸಂಬಂಧ ನವೆಂಬರ್ 30ರೊಳಗೆ ವಾಣಿಜ್ಯ ಮಂಡಳಿಗೆ ಮುಚ್ಚಳಿಕೆ ಬರೆದುಕೊಡಬೇಕು.
ಒಂದು ವೇಳೆ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದರೆ ಡಿ.1ರಂದು ಚಿತ್ರೋದ್ಯಮ ಬಂದ್ ಮಾಡಲು ನಿರ್ಣಯಿಸಲಾಗಿದೆ ಎಂದು ಪಾಟೀಲ್ ಹೇಳಿದರು. ರಾಜ್ಯ ಚಲನಚಿತ್ರ ನಿರ್ಮಾಪಕರ ಸಂಘ, ಛಾಯಾಗ್ರಾಹಕರ ಸಂಘ, ನಿರ್ದೇಶಕರ ಸಂಘ, ಟಿವಿ ಮತ್ತು ಕಿರುತೆರೆ ಅಸೋಸಿಯೇಷನ್, ತಂತ್ರಜ್ಞರ ಒಕ್ಕೂಟಗಳು ಬಂಗ್‌ಗೆ ಬೆಂಬಲ ವ್ಯಕ್ತಪಡಿಸಿವೆ.


Click it and Unblock the Notifications











