'ಲಿಫ್ಟ್ ಕೊಡ್ಲಾ' ಟಾಕಿ ಮುಗೀತು 3 ಹಾಡು ಬಾಕಿ
ನವರಸ ನಾಯಕ ಜಗ್ಗೇಶ್ ಹಾಗೂ ಕೋಮಲ್ ನಾಯಕರಾಗಿ ಅಭಿನಯಿಸುತ್ತಿರುವ 'ಲಿಫ್ಟ್ ಕೊಡ್ಲಾ' ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದೆ.
ಬೆಂಗಳೂರು, ಕೊಡಚಾದ್ರಿ ಮತ್ತು ಸಾಗರದಲ್ಲಿ 22ದಿನಗಳ ಅವಧಿಯಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆದರೆ, ಫೆಬ್ರವರಿ 10ರಿಂದ ಹಾಡುಗಳ ಚಿತ್ರೀಕರಣಕ್ಕೆ ಚಾಲನೆ ದೊರೆಯಲಿದೆ. ಈ ಪೈಕಿ ಒಂದು ಗೀತೆಯ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದ್ದು, ಇನ್ನೆರಡು ಗೀತೆಗಳು ಕಳಸ ಹಾಗೂ ಹೊರನಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ನಿರ್ದೇಶಕ ಅಶೋಕ್ ಕಶ್ಯಪ್ ತಿಳಿಸಿದ್ದಾರೆ.
ಸಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ ಎಂ ಆರ್ ಶಂಕರ್‌ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ರಾಂನಾರಾಯಣ್ ಸಂಭಾಷಣೆ ಬರೆದಿದ್ದಾರೆ. ನಿರ್ದೇಶಕರೇ ಛಾಯಾಗ್ರಹಣದ ನಿರ್ವಹಣೆ ಮಾಡುತ್ತಿದ್ದಾರೆ. ಜಗ್ಗೇಶ್, ಕೋಮಲ್, ಶಶಿಕುಮಾರ್, ಅರ್ಚನಾಗುಪ್ತಾ, ಸುದರ್ಶನ್, ರಾಜುತಾಳಿಕೋಟೆ, ಕಿಲ್ಲರ್‌ವೆಂಕಟೇಶ್, ಕಿಶೋರ್, ಶೋಭ್‌ರಾಜ್, ವಿ.ಮನೋಹರ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್ ಮುಂತಾದವರು ಚಿತ್ರದ ತಾರಾಗಣದಲಿದ್ದಾರೆ. ಸಚಿವ ಕಟ್ಟಾಸುಬ್ರಹ್ಮಣ್ಯನಾಯ್ಡು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











