ಪೂಜಾ ಗಾಂಧಿ, ಸತ್ಯ ಪ್ರೀತಿಯ 'ಪಾಗಲ್' ಬಿಡುಗಡೆ
ಮೆಜೆಸ್ಟಿಕ್ ನಿರ್ದೇಶಕ ಪಿ ಎನ್ ಸತ್ಯಾ ಈಗ ನಾಯಕ ನಟರೂ ಹೌದು. ಅವರ ನಿರ್ದೆಶನ ಮತ್ತು ನಟನೆಯ 'ಪಾಗಲ್' ಚಿತ್ರ ಇಂದು (ಡಿಸೆಂಬರ್ 02) ಪ್ರದರ್ಶನ ಪ್ರಾರಂಭವಾಗಿದೆ. ಈಗಾಗಲೇ ಮೆಜೆಸ್ಟಿಕ್, ಗೂಳಿ, ಡಾನ್, ಮುಂತಾದ ಮಾಸ್ ಚಿತ್ರಗಳನ್ನು ನೀಡಿ ಸ್ಯಾಂಡಲ್ ವುಡ್ ಹಾಗೂ ಪ್ರೇಕ್ಷಕರಿಂದ 'ಮಾಸ್ ಡೈರೆಕ್ಟರ್' ಎಂಬ ಬಿರುದು ಹೊಂದಿದ್ದಾರೆ.
ಇದೀಗ ನಾಯಕಿ ಪೂಜಾ ಗಾಂಧಿ ಜೊತೆ ಪಾಗಲ್ ಚಿತ್ರದ ಮೂಲಕ ನಾಯಕ ನಟರಾಗಿ ತೆರೆಯ ಮೇಲೆ ಬರುತ್ತಿದ್ದಾರೆ, ಸತ್ಯ. ಪ್ರೇಕ್ಷಕರು ಮುಂಗಾರು ಮಳೆ ನಟಿ ಪೂಜಾ ಗಾಂಧಿ ಹಾಗೂ ಸತ್ಯರನ್ನು ಯಾವ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎಂಬುದು ಸದ್ಯವೇ ತಿಳಿಯಲಿದೆ. ಸತ್ಯರಿಗೆ ಇದು ನಾಯಕರಾಗಿ ಅಗ್ನಿಪರೀಕ್ಷೆ ಎಂಬುದು 'ಪಾಗಲ್' ಆಣೆಗೂ ಸತ್ಯ.
ಸತ್ಯಾ'ಸ್ ಕಂಪನಿ ಲಾಂಚನದಲ್ಲಿ ಕೆ. ಮುರಳಿಧರ್ ನಿರ್ಮಿಸಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸತ್ಯ ಅವರದೇ. ತಾರಾಬಳಗದಲ್ಲಿ ಪೂಜಾಗಾಂಧಿ, ತುಳಸಿ ಶಿವಮಣಿ, ಬುಲಟ್ ಪ್ರಕಾಶ್, ಮೈಕೋ ನಾಗರಾಜ್, ಬಿರಾದಾರ್, ಹರೀಶ್ ರಾಯ್ ಮುಂತಾದವರಿದ್ದಾರೆ.
ವಿ ಮನೋಹರ್ ಸಂಗೀತ, ಸ್ಪೀಡ್ ಬಾಬು ಛಾಯಾಗ್ರಹಣ, ಮಾಲೂರು ಶ್ರೀನಿವಾಸ್ ಹಾಗೂ ಮನು ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ತಿರುಪತಿ ರೆಡ್ಡಿ ಅವರ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಪ್ರೇಮಿಗಳು ಪಾಗಲ್ ಆಗಿದ್ದಾರೋ, ಅಥವಾ ಚಿತ್ರ ನೋಡಿದ ಮೇಲೆ ಪ್ರೇಕ್ಷಕರೋ?...(ಒನ್ ಇಂಡಿಯಾ ಕನ್ನಡ)


Click it and Unblock the Notifications











