»   » ಇ-ಪ್ರೀತಿ ಚಿತ್ರದ ನಿರ್ದೇಶಕಿ ಎನ್ಆರ್ಐ ಪ್ರಿಯಾ ಭಾರತಿ

ಇ-ಪ್ರೀತಿ ಚಿತ್ರದ ನಿರ್ದೇಶಕಿ ಎನ್ಆರ್ಐ ಪ್ರಿಯಾ ಭಾರತಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಚಿತ್ರ ನಿರ್ದೇಶಕಿಯರಿದ್ದಾರೆ. ಉದಾಹರಣೆಗೆ ಫಣಿಯಮ್ಮ ಖ್ಯಾತಿಯ ಪ್ರೇಮಾಕಾರಂತ್, ಅರುಣ ರಾಜೆ (ಪತಿತ ಪಾವನಿ), ಜಯಶ್ರೀ ದೇವಿ(ಕೋಣ ಈದೈತೆ, ಭವಾನಿ), ಕವಿತಾ ಲಂಕೇಶ್ (ದೇವೀರಿ, ಬಿಂಬ, ಪ್ರೀತಿ ಪ್ರೇಮ ಪ್ರಣಯ, ತನನಂ ತನನಂ, ಅವ್ವ) ವಿಜಯಲಕ್ಷ್ಮಿ ಸಿಂಗ್(ಈ ಬಂಧನ), ಪೂರ್ಣಿಮಾ ಮೋಹನ್(ಜೂಲಿ), ಪ್ರಿಯಾ ಹಾಸನ್(ಜಂಬದ ಹುಡುಗಿ) ಮತ್ತು ತೀರಾ ಇತ್ತೀಚೆಗಷ್ಟೆ 'ಮುಖಪುಟ' ಎಂಬ ಅಂತಾರಾಷ್ಟ್ರೀಯ ಚಿತ್ರವನ್ನು ರೂಪಾ ಅಯ್ಯರ್ ಕೈಗೆತ್ತಿಕೊಂಡಿದ್ದಾರೆ.

ಈಗ ಇವರ ಸಾಲಿಗೆ ಹೊಸ ತಲೆಮಾರಿನ ಅಮೆರಿಗನ್ನಡತಿ ಪ್ರಿಯಾ ಭಾರತಿ ಸೇರ್ಪಡೆಯಾಗಿದ್ದಾರೆ. ಅವರು ನಿರ್ದೇಶಿಸುತ್ತಿರುವ ಚಿತ್ರ ಇ-ಪ್ರೀತಿ. ಇದು ಆನ್ ಲೈನ್ ಮುಖಾಂತರ ಹುಡುಗ ಹುಡುಗಿ ಪ್ರೇಮಪಾಶಕ್ಕೆ ಬಿದ್ದು, ಜೀವನದ ಪಾಠ ಕಲಿಯುವ ಕಥೆಯನ್ನು ಒಳಗೊಂಡಿದೆ.

ಪ್ರಿಯಾ ಭಾರತಿ ಅವರಿಗೆ ಮುಂಚಿನಿಂದಲೂ ಚಿತ್ರರಂಗದೊಂದಿಗೆ ಒಡನಾಟವಿದೆ. ಅವರು ಈ ಹಿಂದೆ 2001ರಲ್ಲಿ 'ಗುಟ್ಟು' ಎಂಬ ಚಿತ್ರವನ್ನು ಕಿರುತೆರೆಗಾಗಿ ಮಾಡಿದ್ದರು. ವಿಶೇಷವೆಂದರೆ ಈ ಕಿರುಚಿತ್ರದ ಮೂಲಕವೇ ಕಾಮಿಡಿ ಟೈಮ್ ಗಣೇಶ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು. ಆಗ ತಾನೇ ಗಣೇಶ್ ಆದರ್ಶ ಫಿಲ್ಮ್ ಸಂಸ್ಥೆಯಿಂದ ನಟನೆಯ ಪಟ್ಟುಗಳನ್ನು ಕಲಿತು ಹೊರಬಂದಿದ್ದರು. ತಮ್ಮ ಕಿರುಚಿತ್ರಕ್ಕಾಗಿ ಪ್ರಿಯಾ ಭಾರತಿ ಪಾತ್ರದ ಅನ್ವೇಷಣೆಯಲ್ಲಿದ್ದರು. ಗಣೇಶ್ ಕಣ್ಣಿಗೆ ಬಿದ್ದಿದ್ದೇ ತಡ ಅವರನ್ನು ಆಯ್ಕೆ ಮಾಡಿಕೊಂಡಿದ್ದರು.

ಪ್ರತಿಭಾ ಪಲಾಯನ ಮಾಡುತ್ತಿರುವ ಯುವಕರ ಕಥೆಯನ್ನು 'ಇ-ಪ್ರೀತಿ' ಹೊಂದಿದೆ. ಅಮೆರಿಕಾದಲ್ಲಿನ ತಮ್ಮ ಗೆಳೆಯರ ನಿಜಜೀವನದಲ್ಲಿ ನಡೆದ ಕಥೆಯನ್ನು ಪ್ರಿಯಾ ಭಾರತಿ ಬೆಳ್ಳಿತೆರೆಗೆ ತರುತ್ತಿದ್ದಾರೆ. ಕಥೆಯಲ್ಲಿ ಹಾಸ್ಯ, ಪ್ರೀತಿ, ಪ್ರೇಮ, ತಂತ್ರಜ್ಞಾನ ಎಲ್ಲವೂ ಹದವಾಗಿ ಮಿಳಿತವಾಗಿವೆಯಂತೆ. ನಾಯಕ ಇಂಜಿನಿಯರಿಂಗ್ ಮುಗಿಸಿ ವಿದೇಶಕ್ಕೆ ಹೋಗಿರುತ್ತಾನೆ. ಅಲ್ಲೊಬ್ಬ ಬೆಡಗಿ ಅವನ ಹೃದಯವನ್ನು ಕದಿಯುತ್ತಾಳೆ. ಅವಳೊಂದಿಗೆ ಬೆರೆತು, ನಲಿಯುತ್ತಾನೆ. ಕೊನೆಗೆ ಅವನಿಗೆ ಜ್ಞಾನೋದಯವಾಗಿ ನಮಗೆ ನಮ್ಮ ದೇಶವೇ ಚಂದ ಎಂದುಕೊಳ್ಳುತ್ತಾನೆ.

ಗಾಳಿಪಟ ಚಿತ್ರದಲ್ಲಿ ನಟಿಸಿದ್ದ ದಿಗಂತ್ 'ಇ-ಪ್ರೀತಿ' ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆಯಾಗಿದ್ದಾರೆ. ಯುಎಸ್‍ಎ ಮೂಲದ ನೀನಾ ಮಹೇಶ್ ಮತ್ತು ತೇಜಸ್ವಿನಿ ನಾಯಕಿಯರು.

(ದಟ್ಸ್‌ಕನ್ನಡ ಸಿನಿವಾರ್ತೆ)

ಪೂರಕ ಓದಿಗೆ
ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು!!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada