ದಾಖಲೆ ಬೆಲೆಗೆ ಪುನೀತ್ ಪರಮಾತ್ಮ ಆಡಿಯೋ ರೈಟ್ಸ್ ಸೇಲ್
ನಿರ್ದೇಶಕ ಯೋಗರಾಜ್ ಭಟ್ ಚಿತ್ರಗಳ ಪ್ರಮುಖ ಆಕರ್ಷಣೆ ಎಂದರೆ ಹಾಡುಗಳು. ಈಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪರಮಾತ್ಮ' ಚಿತ್ರದ ಬಗ್ಗೆಯೂ ಅಪಾರ ನಿರೀಕ್ಷೆಗಳಿವೆ. ಈಗಾಗಲೆ ರು.3.5 ಕೋಟಿಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಸೇಲ್ ಆಗಿದ್ದು ಈಗ ಮತ್ತೊಂದು ದಾಖಲೆ 'ಪರಮಾತ್ಮ'ನ ಪಾಲಾಗಿದೆ.
ಚಿತ್ರದ ಆಡಿಯೋ ರೈಟ್ಸ್ ದಾಖಲೆ ಬೆಲೆಗೆ ಸೇಲಾಗಿದ್ದು, ರು.77 ಲಕ್ಷಕ್ಕೆ ಅಶ್ವಿನಿ ಮೀಡಿಯಾ ನೆಟ್‌ವರ್ಕ್ ಖರೀದಿಸಿದೆ. 'ಜೋಗಯ್ಯ' ಆಡಿಯೋ ರೈಟ್ಸ್ ರು.53 ಲಕ್ಷಕ್ಕೆ ಆನಂದ್ ಆಡಿಯೋಗೆ ಮಾರಾಟವಾಗಿತ್ತು. 'ಜೋಗಯ್ಯ' ದಾಖಲೆಯನ್ನು 'ಪರಮಾತ್ಮ' ಮುರಿದಿದ್ದಾನೆ.
ಅತ್ತ ಸ್ಯಾಟಲೈಟ್ ರೈಟ್ಸ್‌ನಲ್ಲೂ 'ಜೋಗಯ್ಯ'ನ ದಾಖಲೆಯನ್ನು 'ಪರಮಾತ್ಮ' ಅಳಿಸಿಹಾಕಿರುವುದು ವಿಶೇಷ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಹಿಂದೆ ಅಭಿನಯಿಸಿದ 'ಜಾಕಿ' (ರು.42.5 ಲಕ್ಷ) ಹಾಗೂ 'ಹುಡುಗರು' (ರು.47.5) ಚಿತ್ರಗಳು ಆಡಿಯೋ, ಡಿವಿಡಿ ರೈಟ್ಸ್‌ನಲ್ಲಿ ಭರ್ಜರಿಯಾಗಿ ಬಿಕರಿಯಾಗಿದ್ದವು.
ಸದ್ದಿಲ್ಲದಂತೆ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಿರುವ 'ಪರಮಾತ್ಮ' ಚಿತ್ರ ಇಂಡಸ್ಟ್ರಿಯಲ್ಲಿ ಹೊಸ ಆಶಾಕಿರಣದಂತೆ ಭಾಸವಾಗುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ತಮ್ಮ ಹಿಂದಿನ ಚಿತ್ರಗಳಿಗಿಂತ ಈ ಚಿತ್ರ ಭಿನ್ನವಾಗಿರುತ್ತದೆ.
ತಮ್ಮ ಹಿಂದಿನ ಚಿತ್ರಗಳಲ್ಲಿ ಕತೆಗೆ ಪ್ರಾಮುಖ್ಯತೆ ನೀಡುತ್ತಿರಲಿಲ್ಲ. ಆದರೆ 'ಪರಮಾತ್ಮ' ಚಿತ್ರದಲ್ಲಿ ಮಾತ್ರ ಕತೆ ಪ್ರಮುಖ ಪಾತ್ರವಹಿಸುತ್ತದೆ. ಪುನೀತ್ ಟೆರಿಫಿಕ್ ನಟ. ಆದರೆ ಅವರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲನಾಗಿದ್ದೇನೆ ಎಂದಿದ್ದಾರೆ ಭಟ್. ವಿ ಹರಿಕೃಷ್ಣ ಮ್ಯೂಸಿಕ್ ಮ್ಯಾಜಿಕ್ 'ಪರಮಾತ್ಮ' ನನ್ನು ಹುಚ್ಚೆದ್ದು ಕುಣಿಸಿದೆ ಎಂಬ ಮಾತುಗಳು ಕೇಳಿಬಂದಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











