ಕನ್ನಡ ಶಾಲೆಗೆ ರಜನಿಕಾಂತ್ ರು.25 ಲಕ್ಷ ಕೊಡುಗೆ
ಕನ್ನಡ ಶಾಲೆಗಳನ್ನು ಸರಕಾರವೇ ಮುಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಯ ನಡುವೆ ಒಂದು ನಿರಾತಂಕ ಸುದ್ದಿಯೊಂದು ತೇಲಿಬಂದಿದೆ. ಬೆಂಗಳೂರು ಗವಿಪುರಂನ ಸರ್ಕಾರಿ ಮಾದರಿ ಕನ್ನಡ ಶಾಲೆ ಇನ್ನೇನು ಮುಚ್ಚುವ ಹಂತ ತಲುಪಿತ್ತು. ಈಗ ಆ ಶಾಲೆಗೆ ಸೂಪರ್ ಸ್ಟಾರ್ ರಜನಿಕಾಂತ್ ರು.25 ಲಕ್ಷ ಕೊಡುಗೆ ನೀಡಲು ಮುಂದಾಗಿದ್ದಾರೆ.
ಈ ಶಾಲೆಗೆ ನೂರು ವರ್ಷಗಳ ಇತಿಹಾಸವಿದೆ. ವಿಶೇಷ ಎಂದರೆ ಈ ಶಾಲೆಯಲ್ಲೇ ರಜನಿಕಾಂತ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ್ದರು. ಆದರೆ ಈ ಶಾಲೆಗೆ ಮೂಲ ಸೌಲಭ್ಯಗಳಿಲ್ಲದೆ ಬಾಗಿಲು ಮುಚ್ಚುವ ಹಂತ ತಲುಪಿದೆ. ಈ ಪಾಠಶಾಲೆಯನ್ನು ಅಭಿವೃದ್ಧಿ ಮಾಡಲು ರಜನಿ ಅಭಿಮಾನಿಗಳು ಕೈಜೋಡಿಸಬೇಕು ಎಂದು ಕರ್ನಾಕಟ ರಾಜ್ಯ ರಜನಿಜೀ ಸೇವಾ ಸಮಿತಿ ಮನವಿ ಮಾಡಿಕೊಂಡಿತ್ತು.
ನೂರು ವರ್ಷಗಳ ಇತಿಹಾಸವಿರುವ ಈ ಶಾಲೆಯನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಅಧ್ಯಕ್ಷ ಜಿ ಮುರುಗನ್ ಮನವಿ ಮಾಡಿದ್ದರು. 2009-10ರಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ನಿಧಿ ಬಿಡುಗಡೆಯಾಗಿದ್ದರೂ ಶಾಲಾ ಕಟ್ಟಡದ ಕಾಮಗಾರಿ ಮಾತ್ರ ಇನ್ನೂ ಆರಂಭವಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ ಮುರುಗನ್.
ಶಿಥಿಲಾವಸ್ಥೆಯಲ್ಲಿರುವ ಈ ಶಾಲೆಯ ಕೊಠಡಿಗಳು ವಿದ್ಯಾರ್ಥಿಗಳು ಕುಳಿತುಕೊಳ್ಳಲಾಗದಂತಹ ಸ್ಥಿತಿಯಲ್ಲಿವೆ. ರಜನಿಕಾಂತ್ ಈ ಶಾಲೆಯಲ್ಲಿ ಓದಿದ ಕಾರಣ ಈ ಶಾಲೆಗೆ ಒಂದು ಗೌರವ, ಘನತೆ ಬಂದಿತ್ತು. ಈ ಶಾಲೆಯನ್ನು ಅಭಿವೃದ್ಧಿ ಮಾಡಬೇಕು ಎಂದು ಅವರು ಕರೆಕೊಟ್ಟಿದ್ದರು. ಶಾಲೆಯ ಅಭಿವೃದ್ಧಿಗೆ ಈಗ ಸ್ವತಃ ರಜನಿಕಾಂತ್ ಅವರೇ ಮುಂದಾಗಿರುವುದು ಅವರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. (ಒನ್‍ಇಂಡಿಯಾ ಕನ್ನಡ)


Click it and Unblock the Notifications











