'ಐತಲಕ್ಕಡಿ' ಐಟಂ ಸಾಂಗ್ ನಲ್ಲಿ ಸುದೀಪ್
ಪ್ರಪಂಚದಲ್ಲಿ ಎಲ್ಲದಕ್ಕಿಂತ ದೊಡ್ದದು ವಿಶ್ವಾಸ. ವಿಶ್ವಾಸಕ್ಕೆ ಮಣಿಯದವರಾರೂ ಇಲ್ಲ. ನಟನಾಗಿ ಎಲ್ಲರನ್ನು ನಗಿಸುವ ಬುಲೆಟ್ ಪ್ರಕಾಶ್ ಈಗ ನಿರ್ಮಾಪಕರಾಗಿದ್ದಾರೆ. ಅವರು ನಿರ್ಮಿಸುತ್ತಿರುವ 'ಐತಲಕ್ಕಡಿ' ಚಿತ್ರವನ್ನು ಛಾಯಾಗ್ರಾಹಕ ಜೆ.ಜಿ.ಕೃಷ್ಣ ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕ-ನಿರ್ದೇಶಕರ ಮೇಲಿನ ವಿಶ್ವಾಸಕ್ಕಾಗಿ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರೆಲ್ಲಾ ಅಭಿನಯಿಸುತ್ತಿದ್ದಾರೆ.
ನವರಸ ನಾಯಕ ಜಗ್ಗೇಶ್, ಕ್ರೇಜಿಸ್ಟಾರ್ ರವಿಚಂದ್ರನ್, ಸುದೀಪ್ ಹಾಗೂ ವಿಜಯರಾಘವೇಂದ್ರ ಸೇರಿದಂತೆ ಪ್ರಮುಖ ನಟರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.ನಗರದ ಹೊರವಲಯದ ರಾಕ್‌ಲೈನ್ ಸ್ಟೂಡಿಯೋದಲ್ಲಿ ನಟ ಸುದೀಪ್ ಅಭಿನಯಿಸಿದ್ದಹಾಡೊಂದರ ಚಿತ್ರೀಕರಣ ಅದ್ದೂರಿಯಾಗಿ ನೆರವೇರಿತು. ತುಷಾರ್ ರಂಗನಾಥ್ ರಚಿಸಿರುವ 'ನೋಡಾಯ್ತು ಬ್ಯುಸಿ ಬ್ಯುಸಿ- ಬಿಸಿಬಿಸಿ ಬಿಗ್ ಬಾಲಿವುಡ್- ಹುಡ್ಗೀರ ಮನಸಿಗೆ ಹುಚ್ಚು ಹಿಡಿಸೋ ಮೆಚ್ಚಿನ ನಾಯಕ ಎಂಬ ಗೀತೆ ಕಲಾ ನಿರ್ದೇಶಕ ಮೋಹನ್ ಬಿ ಕೆರೆ ನಿರ್ಮಿಸಿರುವ ವಿವಿಧ ಸೆಟ್‌ಗಳಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣಗೊಂಡಿತು.
ಫೈವ್‌ಸ್ಟಾರ್ ಗಣೇಶ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರಕುಟೀರ ಸಂಸ್ಥೆಯ ನಿರ್ಮಾಣದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಜೆ.ಜಿ.ಕೃಷ್ಣ ಅವರು ಛಾಯಾಗ್ರಹಣ ನೀಡುವುದರೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಾಧುಕೋಕಿಲಾರ ಸಂಗೀತ ಸಂಯೋಜನೆ, ತುಷಾರ ರಂಗನಾಥ್ ಸಂಭಾಷಣೆ, ಆರ್.ಡಿ.ರವಿ ಸಂಕಲನವಿರುವ 'ಐತಲಕ್ಕಡಿ ಚಿತ್ರಕ್ಕಿದೆ.
ತಾರಾಬಳಗದಲ್ಲಿ ಜಗ್ಗೇಶ್, ರವಿಚಂದ್ರನ್, ಸುದೀಪ್, ವಿಜಯರಾಘವೇಂದ್ರ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ನೀತು, ಶೋಭ್‌ರಾಜ್, ಜೈಜಗದೀಶ್, ಕೋಮಲ್, ಶರಣ್, ಗಿರಿಜಾ ಲೋಕೇಶ್, ಪದ್ಮಜಾರಾವ್, ಕರಿಬಸವಯ್ಯ, ಮೋಹನ್ ಜುನೇಜಾ, ಬ್ಯಾಂಕ್ ಜನಾರ್ದನ್, ಎಂ.ಎಸ್.ಉಮೇಶ್, ಶಂಕರ್‌ರಾವ್, ದೊಡ್ಡಣ್ಣ, ಹರೀಶ್‌ರಾಯ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











