»   » ಈಗ ಅಮರೀಶ್‌ ಪುರಿ ‘ಲವ್‌’!

ಈಗ ಅಮರೀಶ್‌ ಪುರಿ ‘ಲವ್‌’!

Posted By: Staff
Subscribe to Filmibeat Kannada
Amrish Puri
ಪುತ್ರಕಾಮೇಷ್ಠಿಯನ್ನು ದಡ ಮುಟ್ಟಿಸಿಯೇ ತೀರುವ ಸಂಕಲ್ಪ ತೊಟ್ಟಿರುವ ನಿರ್ದೇಶಕ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ತಮ್ಮ ಪುತ್ರನ ಚೊಚ್ಚಿಲ 'ಲವ್‌" ಗೆಲ್ಲಿಸಲು ಸಾಧ್ಯವಿರುವ ಎಲ್ಲ ಪ್ರಯತ್ನದಲ್ಲೂ ತೊಡಗಿದ್ದಾರೆ. ಈ ಪ್ರಯತ್ನದ ಫಲವಾಗಿಯೇ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ 'ಲವ್‌" ಮೂಲಕ ಕನ್ನಡಕ್ಕೆ ಬಂದಾಯಿತು. ಈಗ 'ಲವ್‌"ಗೆ ಹೊಸ ಸೇರ್ಪಡೆ ಅಮರೀಶ್‌ ಪುರಿ.

ಖ್ಯಾತ ಖಳನಟ ಅಮರೀಶ್‌ ಪುರಿಗೆ ಕನ್ನಡ ಹೊಸತೇನೂ ಅಲ್ಲ . ಕನ್ನಡದ ಗಂಡಭೇರುಂಡ, ಸಿಂಹದ ಮರಿಸೈನ್ಯ, ಕಾಡು, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ಚಿತ್ರಗಳಲ್ಲಿ ಅಮರೀಶ್‌ ಈಗಾಗಲೇ ನಟಿಸಿದ್ದಾರೆ. ಈಗ 'ಲವ್‌"!

ಮೈಸೂರು ರಸ್ತೆಯ 'ದಿ ಕ್ಲಬ್‌"ನಲ್ಲಿ ಅಮರೀಶ್‌ ಪುರಿ ಮೊನ್ನೆ ಮಾತಿಗೆ ಸಿಕ್ಕರು. ಪತ್ರಕರ್ತರೊಂದಿಗಿನ ಪುರಿ ಮುಖಾಮುಖಿ ಕಾರ್ಯಕ್ರಮವನ್ನು ಸಿಂಗ್‌ಬಾಬು ಸಾಕಷ್ಟು ಮುತುವರ್ಜಿಯಿಂದ ಏರ್ಪಡಿಸಿದ್ದರು. 'ಕನ್ನಡದಲ್ಲಿ ನಟಿಸಲೇಬೇಕೆಂಬ ಉತ್ಸಾಹವೇನೂ ಇರಲಿಲ್ಲ . ಬಾಬು ಕರೆದರು, ಬಂದಿದ್ದೇನೆ, ಅಷ್ಟೇ" ಎಂದರು ಅಮರೀಶ್‌ ಪುರಿ. ಬಾಬು ಪುತ್ರನ ಚಿತ್ರ ಗೆಲ್ಲಲಿಕ್ಕೆ ನನ್ನದೂ ಅಳಿಲು ಸೇವೆ ಎನ್ನುವ ಮಾತನ್ನೂ ಅವರು ಸೇರಿಸಿದರು.

'ಲವ್‌" ಚಿತ್ರದಲ್ಲಿ ಅಮರೀಶ್‌ ಪುರಿಗೆ ಒಳ್ಳೆಯ ಪಾತ್ರವಿದೆಯಂತೆ. ದುಬೈನಲ್ಲಿನ ಶ್ರೀಮಂತ ವ್ಯಾಪಾರಿಯ ಪಾತ್ರವದು. ಮೋಹನ್‌ ಲಾಲ್‌ಗೆ ಆಟೋ ಡ್ರೆೃವರ್‌ ಪಾತ್ರ.

ಕನ್ನಡದ ಮಾತು ಬಿಡಿ, ಬಾಲಿವುಡ್‌ನಲ್ಲಿ ನಿಮಗೆ ಅವಕಾಶಗಳು ಹೇಗಿವೆ ಎಂದಾಗ ಅಮರೀಶ್‌ ಪುರಿ ಮೊಗ್ಯಾಂಬೊ ಸ್ಟೈಲಲ್ಲಿ ಸಿಟ್ಟಾದರು. 'ಬಾಲಿವುಡ್‌ ಎಂದೇಕೆ ಕರೆಯುತ್ತೀರಿ. ಹಿಂದಿ ಚಿತ್ರರಂಗ ಎಂದರಾಗದೆ?" ಎಂದು ಅಮರೀಶ್‌ ಮರು ಪ್ರಶ್ನೆ. ಪ್ರತಿಯಾಂದಕ್ಕೂ ಹಾಲಿವುಡ್‌ನ್ನು ಅನುಕರಿಸುತ್ತಿರುವ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದರು. 'ಹಾಲಿವುಡ್‌" ಎನ್ನುವ ಒಂದು ಊರೇ ಇರುವುದರಿಂದ, ಹಾಲಿವುಡ್‌ ಎನ್ನುತ್ತಾರೆ. ಅದನ್ನು ನಾವ್ಯಾಕೆ ಅನುಕರಿಸಬೇಕು ಎಂದು ಅಮರೀಶ್‌ ಪ್ರಶ್ನಿಸಿದರು ; ಪತ್ರಕರ್ತರು ನಕ್ಕರು.

ಗಿರೀಶ್‌ ಕಾರ್ನಾಡರ ಯಯಾತಿ ಹಾಗೂ ಹಯ ವದನ ನಾಟಕಗಳಲ್ಲಿ ಅಭಿನಯಿಸಿದ್ದನ್ನು ನೆನಪಿಸಿಕೊಂಡ ಅಮರೀಶ್‌ ಪುರಿ, ಅದೊಂದು ಅವಿಸ್ಮರಣೀಯ ಅನುಭವ ಎಂದರು. ರಂಗಭೂಮಿಯ ನೆನಪಾಗುತ್ತಿದ್ದಂತೆ ಅಮರೀಶ್‌ ಪುರಿ ಅವರ ಸಿಟ್ಟು ಕರಗಿತ್ತು . ಏನೆಲ್ಲಾ ನೆನಪಾಯಿತೊ ?

English summary
Veteran bollywood actor Amrish Puri is acting in Aditya's Kannada cinema 'Love'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada