»   » ಶಿವರಾಮು ಸದ್ದಿಲ್ಲದೆ ‘ಗೇಮು...’

ಶಿವರಾಮು ಸದ್ದಿಲ್ಲದೆ ‘ಗೇಮು...’

Posted By: ಎಂ. ವಿನೋದಿನಿ
Subscribe to Filmibeat Kannada

'ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ" ಎಂಬ ಹಾಡಲ್ಲಿ ಕಂಡ ನಾಯಕನ ನೆನಪಿದೆಯೇ ? ಇಲ್ಲಾಂದ್ರೆ ಬಿಡಿ, ಮೊನ್ನೆ ಮೀನಾ ಜೊತೆ ಕುಣಿದ 'ಗೇಮ್‌" ನಾಯಕ ! ಅಂದ್ಹಾಗೆ ನೀವು ದಾವಣಗೆರೆಯವರಾದರೆ ನಿಮಗೆ ಚಲೋ ಪರಿಚಯವಿರುತ್ತದೆ. ಅದೇ ಕನ್ನಡದಲ್ಲಿ ಐಎಎಸ್‌ಬರೆದು ಪಾಸಾದ ಜಿಲ್ಲಾಧಿಕಾರಿ. ಸರಕಾರಿ ಯೋಜನೆಯಲ್ಲಿ ಬಡವರಿಗೆ ನೂರಾರು ಮನೆ ನಿರ್ಮಿಸಿದಾತ.... ಇತ್ಯಾದಿ ಘೋಷಿತ ಖ್ಯಾತಿಯ ಶಿವರಾಮು.... ಅದೇ ಶಿವರಾಮು ಮತ್ತೆ ನಿಮ್ಮ ಮುಂದೆ ಸಿನಿಮಾ ಸ್ಕೋಪ್‌ನಲ್ಲಿ ಬರಲಿದ್ದಾರೆ.

ಐಎಎಸ್‌ ಅಧಿಕಾರಿಗಳು ಸೇರಿದಂತೆ ಯಾವ ಸರಕಾರಿ ಅಧಿಕಾರಿಗಳೂ ಸಿನಿಮಾದಲ್ಲಿ ನಟಿಸಬಾರದೂಂತ ಇತ್ತೀಚೆಗಷ್ಟೇ ನಿಯಮಾವಳಿ ಜಾರಿಗೆ ಬಂದಿದೆ. ಸರ್ಕಾರಿ ನೌಕರಿಯೂ ಬೇಡ, ಕಿರಿಕಿರಿಯೂ ಬೇಡ ಎಂದು ಬಿ.ಎಸ್‌. ಪಾಟೀಲ್‌ ತಮ್ಮ ಪೊಲೀಸ್‌ ನೌಕರಿ ಬಿಟ್ಟು ಸಿನಿಮಾ ಅಪ್ಪಿಕೊಂಡರಲ್ಲ , ಈಗ ರಾಜಕಾರಣಕ್ಕೂ ಗಂಟುಬಿದ್ದರಲ್ಲ ! ಆದ್ರೆ ಶಿವರಾಮು ಪಾಟೀಲರಂತಲ್ಲ . ಇವ್ರು ಐಎಎಸ್ಸು . ನಿಯಮಾವಳಿ ಸಾಮಾನ್ಯರಿಗೆ ಎಂದು ಐಎಎಸ್ಸು ಭಾವಿಸಿದರೋ ಏನೋ ? ಹಾಗಾಗಿ ಹೊಸ ಸಿನಿಮಾದಲ್ಲಿ ನಟಿಸಿದ್ದಾರೆ. ವಿದೇಶಕ್ಕೂ ಹೋಗಿಬಂದಿದ್ದಾರೆ.

ಶಿವರಾಮ್‌ರ 'ಗೇಮ್‌" ಸ್ವಲ್ಪ ಪರವಾಗಿಲ್ಲ ಎನ್ನುವಂತಿತ್ತು. ಆದರೆ ಈ ಚಿತ್ರದ ನಿರ್ದೇಶಕ ಶ್ರಿಧರ್‌ಗೆ ಹೊಸ ಚಿತ್ರದಲ್ಲಿ ಔಟ್‌ಪಾಸ್‌ ನೀಡಿ ಹಳೇ ಗೆಳೆಯ ದಾಸ್‌ನನ್ನು ಶಿವರಾಮು ನೆಚ್ಚಿಕೊಂಡಿದ್ದಾರೆ. ಇದೇ ದಾಸ್‌ ನಿರ್ದೇಶನದ 'ಶಿವರಾಮ್‌" ನಟನೆಯ 'ಸುಭಾಷ್‌" ಎಂಬ ಚಿತ್ರ ತಯಾರಿಯ ಅರ್ಧದಲ್ಲಿಯೇ ನಿಂತಿದೆ. ಇವ್ರದ್ದು 'ಅದನ್ನ್‌ ಬಿಟ್ಟು ಇದು" ಸಂಪ್ರದಾಯ.

ಇನ್ನೂ ನಾಮಕರಣವಾಗದ ಹೊಸ ಚಿತ್ರಕ್ಕೆ ಇಬ್ಬರು ನಾಯಕಿಯರು. ಒಬ್ಬಾಕೆ'ಕನಸು" ಎಂಬ ಚಿತ್ರದಲ್ಲಿ ಕಾಣಿಸಿಕೊಂಡ ಪ್ರಿಯಾಂಕ ಪಂಡಿತ್‌, ಮತ್ತೊಬ್ಬಾಕೆ 'ಮೋಕ್ಷೇಂದ್ರ" ಖ್ಯಾತಿಯ ರೇಖಾ ದೇಸಾಯಿ.

ಇದು ಶಿವರಾಮು ಗೇಮು ; ತಮಾಷೆ ಅಂದ್ರೆ ಸರ್ಕಾರಕ್ಕೆ ಇದ್ಯಾವುದರ ಅರಿವೇ ಇಲ್ಲ . ಚುನಾವಣಾ ಜ್ವರದಲ್ಲಿ ಬೇಯುತ್ತಿರುವ ಆಡಳಿತ ಯಂತ್ರಕ್ಕೆ, ಒಬ್ಬ ಐಎಎಸ್‌ ಅಧಿಕಾರಿಯ ಸಿನಿಮಾ ಖಯಾಲಿಯ ಕುರಿತು ಗಮನ ಹರಿಸಲಿಕ್ಕೆ ಸಮಯ ಎಲ್ಲಿರ್ತದೆ ?

English summary
IAS cadre Shivaram makes another film

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada