»   » ಪತ್ರಿಕೆಗಳು ಹಾಡಿ ಹೊಗಳಿದರೂ ಏಕಾಂಗಿ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.

ಪತ್ರಿಕೆಗಳು ಹಾಡಿ ಹೊಗಳಿದರೂ ಏಕಾಂಗಿ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ.

Posted By: Super
Subscribe to Filmibeat Kannada

ಏಕಾಂಗಿ ಸೋತಿದೆ ಎಂದು ಉದ್ಯಮ ಮಾತಾಡಿಕೊಳ್ಳುತ್ತಿದೆ. ಕಲೆಕ್ಷನ್‌ ಕೂಡ ನಿರೀಕ್ಷೆಗೆ ತಕ್ಕಂತಿಲ್ಲ . ಆದರೆ, ರವಿಚಂದ್ರನ್‌ ಇನ್ನೂ ನಿರಾಶರಾಗಿಲ್ಲ . ಏಕಾಂಗಿಯನ್ನು ಸಮರೋಪಾದಿಯಲ್ಲಿ ರೀ ಶೂಟ್‌ ಮಾಡುತ್ತಿದ್ದಾರೆ. ಪ್ರೇಕ್ಷಕರು ಮೆಚ್ಚದ ಭಾಗಗಳನ್ನು ಮರು ಚಿತ್ರೀಕರಿಸಿ ಮತ್ತೆ ತೆರೆ ಕಾಣಿಸುವುದು ರವಿ ಉದ್ದೇಶ.

ಬಹುಶಃ ಭಾರತೀಯ ಚಿತ್ರೋದ್ಯಮದಲ್ಲಿ ಚಿತ್ರವೊಂದನ್ನು ರೀಶೂಟ್‌ ಮಾಡಿ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು. ವಿಶ್ವ ಮಟ್ಟದಲ್ಲೂ ಇಂಥ ಉದಾಹರಣೆಗಳು ಇದ್ದಂತಿಲ್ಲ . ಪ್ರೇಕ್ಷಕರ ಒತ್ತಾಯದ ಮೇರೆಗೆ ಕೆಲವು ಚಿತ್ರಗಳ ಕ್ಲೈಮಾಕ್ಸ್‌ ಬದಲಾದ ಉದಾಹರಣೆಗಳುಂಟು. ರಾಜ್‌ ಅಭಿನಯದ 'ಬಿಡುಗಡೆ" ಚಿತ್ರದ ಮುಕ್ತಾಯವನ್ನು ಪ್ರೇಕ್ಷಕರ ಒತ್ತಾಯದ ಮೇರೆಗೆ ಬದಲಾವಣೆ ಮಾಡಲಾಗಿತ್ತು . ಆದರೆ, ಚಿತ್ರ ಸೋತಿದೆಯೆಂದು, ಅದನ್ನು ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ಮಾಡಿರುವ ಉದಾಹರಣೆ ಇದೇ ಮೊದಲು.

ಏಕಾಂಗಿ ಬಿಡುಗಡೆಯಾದದ್ದು ಮಾರ್ಚ್‌ 28 (ಗುರುವಾರ) ದಂದು. ಸೋಲಿನ ಸುಳಿವು ಸಿಕ್ಕ ರವಿಚಂದ್ರನ್‌ ಶನಿವಾರ ಮಧ್ಯಾಹ್ನದಿಂದಲೇ ಏಕಾಂಗಿಯ ಮರು ಚಿತ್ರೀಕರಣ ಆರಂಭಿಸಿದ್ದಾರೆ. ಡಬ್ಬಿಂಗ್‌, ರೀ ರೆಕಾರ್ಡಿಂಗ್‌ ಈಗಾಗಲೇ ಮುಗಿದಿದ್ದು ಎಡಿಟಿಂಗ್‌ ಬಾಕಿಯಿದೆ. ಪ್ರೇಕ್ಷಕರು ಒಪ್ಪದಿರುವ ಭಾಗಗಳನ್ನೆಲ್ಲಾ ಕತ್ತರಿಸಿರುವ ರವಿಚಂದ್ರನ್‌, ಏಕಾಂಗಿಗೆ ಹೊಸ ರೂಪು ಕೊಟ್ಟಿದ್ದಾರೆ. ತಮ್ಮ ಖಾಸಗಿ ಕನಸನ್ನು ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಬದಲಾವಣೆ ಮಾಡಿದ್ದಾರೆ.

ಕಂಠೀರವ ಸ್ಟುಡಿಯೋದ ಬೃಹತ್‌ ಮನೆಯ ಸೆಟ್‌ನಲ್ಲೇ ರವಿಚಂದ್ರನ್‌ ಏಕಾಂಗಿಯ ಮರು ಚಿತ್ರೀಕರಣ ನಡೆಸಿದ್ದಾರೆ. ಚೆನ್ನೈನಿಂದ ರಮ್ಯಕೃಷ್ಣ ಹಾಗೂ ಪ್ರಕಾಶ್‌ ರೈ ಹಾರಿಬಂದು ತಮ್ಮ ಪಾಲಿನ ಅಭಿನಯದಲ್ಲಿ ಭಾಗಿಯಾಗಿದ್ದಾರೆ. ಶುಕ್ರವಾರ (ಏ.5) ಏಕಾಂಗಿಯ ಹೊಸ ಅವತರಣಿಕೆ ತೆರೆಗೆ ಬರಲಿದೆ.

ಏಕಾಂಗಿ ಸುಮಾರು 5 ಕೋಟಿ ರುಪಾಯಿಗಳ ಕನಸು. ಮರು ಚಿತ್ರೀಕರಣಕ್ಕೆ ಮತ್ತೆ 50 ಲಕ್ಷ ರುಪಾಯಿ ಖರ್ಚಾಗಿದೆ. ಏಕಾಂಗಿಯ ಹೊಸ ರೂಪ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ನಂಬಿಕೆ ರವಿಚಂದ್ರನ್‌ಗಿದೆ. ಈ ನಡುವೆ ಏಕಾಂಗಿ ಹೆಸರನ್ನು ಬದಲಿಸುವ ಯೋಚನೆಯನ್ನೂ ರವಿಚಂದ್ರನ್‌ ಮಾಡಿದ್ದರು. ಆದರೆ ಹೆಸರು ಹಳೆಯದೇ ಉಳಿದುಕೊಂಡಿದೆ, ಕಥೆ ಹೊಸತಾಗಿದೆ!

ಏಕಾಂಗಿ ಗೆಲ್ಲುತ್ತಾನಾ? ಗೆಲ್ಲಲೆಂದು, ಕನಸುಗಾರನ ಏಕಾಂತದ ಧ್ಯಾನ ಫಲಿಸಲೆಂದು ಹಾರೈಸೋಣ. ಕನ್ನಡಿಗರ ಅಭಿರುಚಿ ಉತ್ತಮ ಮಟ್ಟದ್ದೆಂದು ಮತ್ತೆ ಸಾಬೀತಾಗಲಿ.ವಾರ್ತಾ ಸಂಚಯ

English summary
kannada Film Ekangi is getting reshot under the direction of Ravichandran

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada