»   » ರಾಜಕೀಯ ಬೇಡ-ಕಮಲ್‌, ತವರತ್ತ ಅರ್ಜುನ್‌

ರಾಜಕೀಯ ಬೇಡ-ಕಮಲ್‌, ತವರತ್ತ ಅರ್ಜುನ್‌

Subscribe to Filmibeat Kannada

*ಪ್ರೇಮ್‌, ಚೆನ್ನೈ

‘ಯಾವ ರಾಜಕಾರಣಿ ಜಾತಿ ರಾಜಕಾರಣ ಮಾಡೋದಿಲ್ಲವೋ ಅಂಥವರಿಗೆ ನನ್ನ ಸಪೋರ್ಟ್‌ ಇರುತ್ತದೆ. ದುರದೃಷ್ಟವಶಾತ್‌ ಅಂಥ ರಾಜಕಾರಣಿಯೇ ಇವತ್ತು ಇಲ್ಲ. ಹಾಗಂತ ರಾಜಕೀಯಕ್ಕೆ ಬರಬೇಕೆಂಬ ಕಿಂಚಿತ್ತೂ ಆಸೆ ನನಗಿಲ್ಲ’- ಕಾರ್ಮಿಕರ ದಿನಾಚರಣೆ ದಿನ ಕಮಲ ಹಾಸನ್‌ ವೇದಿಕೆ ಮೇಲೆ ನಿಂತು ಸುಮಾರು ಅರ್ಧ ತಾಸು ಕೊಚ್ಚಿದ ಭಾಷಣದ ಸಾರವಿದು.

ರಾಜಕೀಯದ ಕೊಳಕನ್ನು ಮೆತ್ತಿಕೊಳ್ಳಲು ತಾವು ಸರ್ವಥಾ ಸಿದ್ಧರಿಲ್ಲ ಎಂದು ಘೋಷಿಸುವ ಮೂಲಕ ಈವರೆಗೆ ಸಾಮಾಜಿಕ ಸೇವೆಯ ಕೆಲಸದಲ್ಲಿ ತೊಡಗಿದ್ದ ಅವರ ಅಭಿಮಾನಿ ಬಳಗಕ್ಕೆ ಕಮಲ್‌ ನಿರಾಸೆ ಉಂಟು ಮಾಡಿದ್ದಂತೂ ನಿಜ. ಬಡವರಿಗೆ ಬಟ್ಟೆ ಹಂಚುವುದರಿಂದ ಹಿಡಿದು ಉಚಿತ ರಕ್ತ ದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿರುವ ಕಮಲ್‌ ಅಭಿಮಾನಿಗಳ ಸಂಘ ಮುಂದೊಂದು ದಿನ ಅದರ ರಾಜಕೀಯ ಲಾಭ ಪಡೆಯುವ ವೇದಿಕೆಯನ್ನು ವ್ಯವಸ್ಥಿತವಾಗಿ ರಚಿಸುತ್ತಿತ್ತು. ಈ ಬಗ್ಗೆ ಚಿತ್ರೋದ್ಯಮದಲ್ಲಿ ಜೋರು ಮಾತುಕತೆ ನಡೆದಿತ್ತು. ಆದರೆ, ಕಮಲ್‌ ಥಟ್ಟನೆ ವರಸೆ ಬದಲಿಸಿದ್ದು ಯಾಕೆ ಅನ್ನೋದು ಮಾತ್ರ ಹತ್ತಿರದವರಿಗೂ ಗುಟ್ಟು.

ಭಾಷಣದ ನಂತರ ಯಾರೋ ಅಭಿಮಾನಿ, ರಜನಿಕಾಂತ್‌ ಏನಾದರೂ ನಿಮ್ಮ ಸಪೋರ್ಟ್‌ ಕೇಳಿದರೆ ಏನ್ಮಾಡ್ತೀರಿ ಅಂತ ಪ್ರಶ್ನೆ ಎಸೆದೇಬಿಟ್ಟ. ಅದಕ್ಕೆ ನುಣುಚಿಕೊಂಡ ಕಮಲ ಹಾಸನ್‌, ‘ರಾಜಕೀಯ ಗೊತ್ತಿರುವಂಥವರ ಸಹಾಯ ಪಡೆಯಲು ರಜನಿ ಈಗಾಗಲೇ ಮುಂದಾಗಿದ್ದಾರೆ ಅನ್ನೋದಷ್ಟೆ ನನಗೆ ಗೊತ್ತು. ಇನ್ನೇನೂ ಗೊತ್ತಿಲ್ಲ ’ ಅಂದುಬಿಟ್ಟರು.

ಚೆನ್ನೈ ಅಂಗಳದ ಇನ್ನೊಂದು ಬೋನಸ್‌ ಸುದ್ದಿ : ನೈವೇಲಿ ರ್ಯಾಲಿಯಲ್ಲಿ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಂಡೇ ತಿರುಗುತ್ತಿದ್ದ ಕನ್ನಡಿಗ ಶಕ್ತಿ ಪ್ರಸಾದ್‌ ಅವರ ಪುತ್ರ ಹಾಗೂ ತಮಿಳಿನ ಖ್ಯಾತ ನಟ ಅರ್ಜುನ್‌ ಸರ್ಜಾ ಸದ್ಯದಲ್ಲೇ ಬೆಂಗಳೂರಿಗೆ 1 ಕೋಟಿ ರುಪಾಯಿ ಸಮೇತ ಬಂದಿಳಿಯಲಿದ್ದಾರೆ. ‘ತುತ್ತಾ ಮುತ್ತಾ’ ಎಂಬ ಸದಭಿರುಚಿಯ ಹಿಟ್‌ ಚಿತ್ರ ಕೊಟ್ಟು, ಗುಂಡಿನ ಗುಂಗಲ್ಲಿ ಕಳೆದು ಹೋಗಿರುವ ಸೋದರ ಕಿಶೋರ್‌ ಸರ್ಜಾ ಜೀವನದ ಪುನರ್‌ ನಿರ್ಮಾಣದ ಹೊಣೆ ಹೊತ್ತು ಅರ್ಜುನ್‌ ಸರ್ಜಾ ಇಲ್ಲಿಗೆ ಬರುತ್ತಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada