»   » ಬಣ್ಣದಲೋಕಕ್ಕೆ ಮಂಡ್ಯದ ಗಂಡು ರೀಎಂಟ್ರಿ

ಬಣ್ಣದಲೋಕಕ್ಕೆ ಮಂಡ್ಯದ ಗಂಡು ರೀಎಂಟ್ರಿ

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

‘ಅರ್ಜುನ್‌ ಸರ್ಜಾ ತಮಿಳಿನಲ್ಲಿ ಹೀರೋ ಆದಾಗ ಅವರ ತಂದೆ ಶಕ್ತಿ ಪ್ರಸಾದ್‌ ಮಗನಿಗೆ ಕಾರು ಕೊಡಿಸಬೇಕು ಅಂತ ಬಯಸಿದರು. ಆಗ ಅವರ ಹತ್ತಿರ ಅಷ್ಟೊಂದು ಹಣವಿರಲಿಲ್ಲ. ನನ್ನ ಸಹಾಯ ಕೇಳಿದರು. ಕೊಟ್ಟೆ. ಅರ್ಜುನ್‌ ಸರ್ಜಾ ಬೆಂಗಳೂರಿಗೆ ಬಂದಾಗ ಅಂದುಕೊಂಡಂತೆ ಕಾರನ್ನೂ ಕೊಟ್ಟರು. ಆದರೆ, ಅದಾದ ನಂತರ ಅವರು ಹೆಚ್ಚು ದಿನ ಬದುಕಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಅರ್ಜುನ್‌, ಅವರಪ್ಪ ಇಸಿದುಕೊಂಡಿದ್ದ ಹಣವನ್ನು ಕೊಡೋಕೆ ಬಂದರು. ನಾನು ಇರಲಿ, ಅದೆಲ್ಲ ಮರೆತು ಬಿಡು ಅಂತ ಎಷ್ಟೋ ಹೇಳಿದೆ. ಅರ್ಜುನ್‌ ಕೇಳಲಿಲ್ಲ. ಅಪ್ಪನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀವು ದುಡ್ಡನ್ನು ತೆಗೆದುಕೊಳ್ಳಲೇಬೇಕು ಅಂತ ಪಟ್ಟು ಹಿಡಿದ. ವಿಧಿಯಿಲ್ಲದೆ ತೆಗೆದುಕೊಂಡೆ. ಎಂಥ ಅಪ್ಪ... ಎಂಥ ಮಗ.. !’

ಅಂಬರೀಶ್‌ ಲೋಕಾಭಿರಾಮ ಮಾತಾಡುತ್ತಿದ್ದರು. ಫಾರ್‌ ಎ ಚೇಂಜ್‌ ರಾಜಕಾರಣದ ವಿಚಾರ ಬಿಟ್ಟು, ಬಣ್ಣ ಲೋಕದ ಮಜಾಗಳ ಮೆಲುಕು ಹಾಕುತ್ತಿದ್ದರು. ದರ್ಶನ್‌ ಯಶಸ್ಸನ್ನು ನೋಡೋಕೆ ಅವರಪ್ಪ ತೂಗುದೀಪ ಶ್ರೀನಿವಾಸ್‌ ಬದುಕಿರಬೇಕಿತ್ತು ಅನ್ನುತ್ತಾ , ಖಳನಾಯಕನಾಗಿ ತೂಗುದೀಪ ಪೀಕ್‌ನಲ್ಲಿದ್ದ ದಿನಗಳನ್ನು ನೆನಪಿಸಿಕೊಂಡರು.

ಈವರೆಗೆ 14 ಲೋಕಸಭಾ ಕಲಾಪಕ್ಕೆ ತಪ್ಪದೆ ಹಾಜರಾಗಿರುವ ‘ಮಂಡ್ಯದ ಗಂಡು’ ಅಂಬಿ ದೇಹದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿ ತೀರಾ ಗುಂಡಗಾದ ಕಾರಣ ಇನ್ನು ಅವರು ಬಣ್ಣ ಹಚ್ಚುವುದೇ ಇಲ್ಲವೇನೋ ಎಂಬ ಗುಮಾನಿ ಶುರುವಾಗಿತ್ತು. ಆದರೀಗ ಅಂಬಿ ಈ ಗುಮಾನಿಯನ್ನು ಬಡಿದೋಡಿಸಿದ್ದಾರೆ. 12 ವರ್ಷದ ಹಿಂದೆ ತೆರೆಕಂಡು ಸೂಪರ್‌ ಹಿಟ್‌ ಆಗಿದ್ದ ತಮಿಳು ಚಿತ್ರ ದಳಪತಿಯ ಕನ್ನಡ ರೀಮೇಕಲ್ಲಿ ಅಂಬಿ ನಟಿಸುತ್ತಿದ್ದಾರೆ.

ಕಾಲ್‌ಷೀಟಿಗೇ ಅಂಟಿಕೊಂಡು ನಂಗೆ ಕೆಲಸ ಮಾಡೋಕಾಗಲ್ಲ. ಇದನ್ನು ಮೊದಲೇ ನಿರ್ಮಾಪಕರಿಗೆ ಹೇಳಿದ್ದೇನೆ. ನನ್ನ ಟೈಮಿಗೆ ಹೊಂದಿಸಿಕೊಂಡೇ ಶೂಟಿಂಗ್‌ ನಡೆಸಬೇಕಾಗುತ್ತದೆ ಅನ್ನೋದಕ್ಕೂ ಅವರು ಒಪ್ಪಿದ್ದಾರೆ. ಹಾಗಂತ ನಾನು ಅವರಿಗೆ ನಷ್ಟ ಆಗೋಹಾಗೆ ಮಾಡಲ್ಲ ಅಂತ ಅಂಬಿ ಇರುವ ವಿಚಾರವನ್ನು ಮುಚ್ಚುಮರೆ ಮಾಡದೆ ಬಿಚ್ಚಿಟ್ಟರು.

ಎಂ.ಸಿ.ದಯಾನಂದ್‌ ನಿರ್ಮಿಸಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಎನ್ನೆಸ್‌ ರಾವ್‌ ಸುತ ಓಂಪ್ರಕಾಶ್‌ ರಾವ್‌ ಚಿತ್ರದ ನಿರ್ದೇಶಕರಾಗಿ ಗೊತ್ತಾಗಿದ್ದಾರೆ. ದರ್ಶನ್‌ ಜೊತೆ ಅಂಬಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದು, ದರ್ಶನ್‌ ಪುಳಕಿತರಾಗಿದ್ದರು. ಚಿತ್ರದ ಮೊದಲ ಶಾಟ್‌ಗೆ ಕ್ಲಾಪ್‌ ಮಾಡಿದ ಸುಮಲತಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಮ್ಮ ಸೂರ್ಯ ಶಿಕಾರಿಯ ಸಾರಥಿ ರವಿ ಬೆಳಗೆರೆ ಅಭಿನಯಿಸುತ್ತಿರುವುದು ಒಂದೂವರೆ ಕೋಟಿ ರುಪಾಯಿ ಬಂಡವಾಳದ ಈ ಅದ್ಧೂರಿ ಚಿತ್ರದ ಇನ್ನೊಂದು ಸೆಳಕು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada