»   » ಪ್ರಶಸ್ತಿ ಪುರಸ್ಕೃತರಿಗೆ ಗ್ಲೋಬಲ್‌ ಸನ್ಮಾನ

ಪ್ರಶಸ್ತಿ ಪುರಸ್ಕೃತರಿಗೆ ಗ್ಲೋಬಲ್‌ ಸನ್ಮಾನ

Subscribe to Filmibeat Kannada

ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ನಟಿ, ಶ್ರೇಷ್ಠ ವಸ್ತ್ರವಿನ್ಯಾಸಕಿ ಹಾಗೂ ಶ್ರೇಷ್ಠ ಕೌಟುಂಬಿಕ ಚಿತ್ರ -ಇಷ್ಟೆಲ್ಲ ಪ್ರಶಸ್ತಿಗಳನ್ನು ಬಾಚಿಕೊಂಡ ಖ್ಯಾತ ನಿರ್ದೇಶಕ ಗಿರೀಶ್‌ ಕಾಸರವಳ್ಳಿಯವರ ನಿರ್ದೇಶನದಲ್ಲಿ ಮೂಡಿ ಬಂದ ‘ ಹಸೀನಾ’ ಮತ್ತು ಖ್ಯಾತ ನಿರ್ದೇಶಕರಾದ ಪಿ. ಶೇಷಾದ್ರಿಯವರ ನಿರ್ದೇಶನದಲ್ಲಿ ಮೂಡಿಬಂದ ‘ಬೇರು’ ಚಿತ್ರತಂಡಗಳನ್ನು ಹೃದಯಪೂರ್ವಕವಾಗಿ ಅಭಿನಂದಿಸುವ ಕಾರ್ಯಕ್ರಮ ನಗರದಲ್ಲಿ ನಡೆಯಿತು.

ಕನ್ನಡವೇ ಸತ್ಯ ಹಾಗೂ ಸಾರ್ಥಕ ಸುವರ್ಣ ಖ್ಯಾತಿಯ ದಿ ಗ್ಲೋಬಲ್‌ ಕನ್ಸಲ್ಟೆಂಟ್ಸ್‌ ಸಂಸ್ಥೆಯವರು ನಗರದ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಸಿನಿಮಾ ಮತ್ತು ಕಲ್ಜರಲ್‌ ಅಕಾಡೆಮಿಯಲ್ಲಿ ಜು.29ರಂದು ಸಂಜೆ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಖ್ಯಾತ ಕಲಾ ನಿರ್ದೇಶಕ ಅರುಣ್‌ ಸಾಗರ್‌ ಅವರ ರಂಗವಿನ್ಯಾಸ ಕಾರ್ಯಕ್ರಮಕ್ಕೆ ಮತ್ತೊಂದು ಶೋಭೆತಂದಿತ್ತು. ಈ ಸಂಜೆಯ ಕಾರ್ಯಕ್ರಮ ಶುರುವಾದದ್ದು ಮುಂಗಾರಿನ ಸಂಜೆಗೆ ಹೇಳಿಮಾಡಿಸಿದಂತೆ ತಿಂಡಿ ಮತ್ತು ಕಾಫಿಯಿಂದ. ನಂತರ ಸಭಿಕರೆಲ್ಲರೂ ಸುಚಿತ್ರದ ಆ ಭವನದಲ್ಲಿ ಆಸೀನರಾದರು.

ಕಾರ್ಯಕ್ರಮ ಸ್ವಲ್ಪ ತಡವಾಗಿ ಪ್ರಾರಂಭವಾದರೂ ಶ್ರೀನಿವಾಸಪ್ರಭುರವರ ಸಿರಿಕಂಠದಿಂದ ಕಾರ್ಯಕ್ರಮ ಕಳೆಗಟ್ಟಿತ್ತು. ಸಂಗೀತ ಹಾಗೂ ಏಕಪಾತ್ರಾಭಿನಯದಲ್ಲಿ ತನ್ನದೇ ಆದ ಚಾಪನ್ನು ಹೊಂದಿರುವ ಬಾಲ ಪ್ರತಿಭೆ ಮಾಸ್ಟರ್‌ ಮನೋಜ್‌ ನಾಡಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಥೆಯ ಛೇರ್ಮನ್‌ ಆದ ಪ್ರಭಾಕರ್‌ ಎನ್‌.ರಾವ್‌, ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ಬಿ.ಜಿ ಮಂಜುನಾಥ್‌ ಅವರು ನಟಿ ತಾರಾ, ಇಷ್ರತ್‌ ನಿಸ್ಸಾರ್‌, ಎನ್‌.ಎಸ್‌ ಲಕ್ಷ್ಮಿನಾರಾಯಣ ಭಟ್ಟ, ಗಿರೀಶ್‌ ಕಾಸರವಳ್ಳಿ ಹಾಗೂ ಪಿ. ಶೇಷಾದ್ರಿಯವರನ್ನು ವೇದಿಕೆಗೆ ಕರೆತಂದರು.

ವೇದಿಕೆಯನ್ನು ಅಲಂಕರಿಸಿದ ಗೌರವಾನ್ವಿತರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ‘ಹಸೀನಾ’ ಚಿತ್ರದಲ್ಲಿ ನಟಿಸಿ ಈ ವರ್ಷದ ಶ್ರೇಷ್ಠ ನಟಿ ಪ್ರಶಸ್ತಿ ಪಡೆದ ಶ್ರೀಮತಿ ತಾರಾರವರಿಗೆ ಗ್ಲೋಬಲ್‌ ಸಂಸ್ಥೆಯ ವತಿಯಿಂದ ತಾರಾರವರ ಭಾವಚಿತ್ರ(ಶಂಕರ್ಸ್‌ ಪೋಟ್ರೇಟ್‌ ಪೆವಿಲಿಯನ್‌ನ ಶಂಕರ್‌ ಚಿಂತಾಮಣಿ ಕ್ಲಿಕ್ಕಿಸಿದ್ದ ಕಲಾತ್ಮಕ ಭಾವಚಿತ್ರ)ವನ್ನು ಉಡುಗೊರೆಯಾಗಿ ನೀಡಿದರು.

ಅಭಿನಂದನೆ ಸ್ವೀಕರಿಸಿದ ಗಿರೀಶ್‌ ಕಾಸರವಳ್ಳಿ ಮಾತನಾಡಿ, ಹಸೀನಾ ಪಾತ್ರಕ್ಕೆ ಜೀವತುಂಬಿದ ಬಗೆಯನ್ನು ವಿವರಿಸಿದರು. ರಾಷ್ಟ್ರೀಯ ಪ್ರಾದೇಶಿಕ ಪ್ರಶಸ್ತಿ ಪಡೆದ ‘ಬೇರು’ ಚಿತ್ರದ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ತಮ್ಮ ಚಿತ್ರವನ್ನು ಮತ್ತೊಮ್ಮೆ ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿಯೂ, ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ರಂಗಣ್ಣ ಅವರ ಸ್ವಾಗತ ಭಾಷಣದೊಂದಿಗೆ ಶುರುವಾದ ಕಾರ್ಯಕ್ರಮ, ಮತ್ತವರದೇ ವಂದನಾರ್ಪಣೆಯಾಂದಿಗೆ ಮುಕ್ತಾಯವಾಯಿತು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada