»   » ‘ಅಪ್ಪು’ ಗೆದ್ದಿದ್ದಾನೆ.ಜನ ಮೆಚ್ಚುಗೆಯ ಜಯಭೇರಿ!

‘ಅಪ್ಪು’ ಗೆದ್ದಿದ್ದಾನೆ.ಜನ ಮೆಚ್ಚುಗೆಯ ಜಯಭೇರಿ!

Posted By: Staff
Subscribe to Filmibeat Kannada

ಅಪ್ಪಿಕೊಂಡಿದ್ದೀರಾ.. ಮೆಚ್ಚಿಕೊಂಡಿದ್ದೀರಾ
ಅಪ್ಪುವನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದೀರಾ
ಅಂದು ಬಾಲಕನು, ಇಂದು ನಾಯಕನು
ನಟನೆಯಲ್ಲಿ ಸದಾ ನಿಮ್ಮ ಕಂದಮ್ಮನು
ಹರಸಿ ಆಶೀರ್ವದಿಸಿ ನೀವು ಸದಾ ನನ್ನನು

ಸೆಂಚುರಿ ಸಂಭ್ರಮದಲ್ಲಿರುವ 'ಅಪ್ಪು' ತನ್ನ ಸಂಭ್ರಮವನ್ನು ಹಂಚಿಕೊಳ್ಳುವುದು ಹೀಗೆ ! ಇದು ಅಂತಿಂಥ ಸಂಭ್ರಮವಲ್ಲ , ಅಜೇಯ ಶತಕದ ಖುಷಿ ; ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸನ್ನು ಸಂಪಾದಿಸಿದ ಸಿರಿ.

'ಅಪ್ಪು' ನೂರು ದಿನದ ಸಾಧನೆಗೆ ಬೇರೆ ಬೇರೆ ಆಯಾಮಗಳೂ ಇವೆ. 'ಅಪ್ಪು' ಚಿತ್ರದ ಯಶಸ್ಸಿನ ಬೆಳಕಿನಲ್ಲಿ ಕನ್ನಡ ಚಿತ್ರರಂಗದ ಪ್ರಸಕ್ತ ಸ್ಥಿತಿಗತಿಯನ್ನೇ ನೋಡಿ :

ಜನರೆಲ್ಲಾ ಟೀವಿ ಮಂದೆ ಕೂತಿರುವ ದಿನಗಳಲ್ಲಿ ಕನ್ನಡ ಸಿನಿಮಾವೊಂದು ನೂರು ದಿನ ಓಡುವುದೇ ಅಪರೂಪ.
ಒಂದು ವೇಳೆ ಸಿನಿಮಾ ಯಶಸ್ಸು ಗಳಿಸಿದರೂ, ಆ ಯಶಸ್ಸು ಬೆಂಗಳೂರಿಗಷ್ಟೇ ಸೀಮಿತ.
ನೂರು ದಿನ ಓಡಿದ ಸಿನಿಮಾ ಒಂದೆರಡು ಥಿಯೇಟರ್‌ಗಳಲ್ಲಿ , ಅಬ್ಬಬ್ಬಾ ಎಂದರೆ ಮೂರ್ನಾಲ್ಕು ಥಿಯೇಟರ್‌ನಲ್ಲಿ ನೂರು ದಿನ ಓಡಿರುತ್ತೆ.

ಕನ್ನಡ ಚಿತ್ರರಂಗ ಇಂತಿಪ್ಪ ದಿನಗಳಲ್ಲಿ 'ಅಪ್ಪು' ದಾಖಲೆಯ ಶತದಿನ ಪೂರೈಸಿದೆ. ರಾಜ್ಯಾದ್ಯಂತ ಜನ ಮೆಚ್ಚುಗೆಯ ಜಯಭೇರಿ ಗಳಿಸಿರುವ ಅಪ್ಪು 34 ಥಿಯೇಟರ್‌ಗಳಲ್ಲಿ ನೂರು ದಿನಗಳ ಪ್ರದರ್ಶನ ಕಂಡಿದೆ. ಕನ್ನಡ ಚಿತ್ರವೊಂದು ಈ ಪಾಟಿ ಯಶಸ್ಸು ಕಂಡು ಯಾವ ದಿನವಾಗಿತ್ತು ?

ಅಪ್ಪು' ಯಶಸ್ಸು ಅಣ್ಣಾವ್ರ ಚಿತ್ರಗಳ ಯಶಸ್ಸನ್ನು ನೆನಪಿಸುತ್ತದೆ. ಶಿವರಾಜ್‌ಕುಮಾರ್‌ಗೆ ಮೊದಲ ಚಿತ್ರ 'ಆನಂದ್‌' ನಲ್ಲಿ ಇಂಥದ್ದೇ ಸ್ವಾಗತ ಸಿಕ್ಕಿದ್ದನ್ನು ಬಿಟ್ಟರೆ, ನಾಯಕ ನಟನೊಬ್ಬನ ಮೊದಲ ಚಿತ್ರಕ್ಕೆ ಈ ಪರಿಯ ಸ್ವಾಗತ ಸಿಕ್ಕ ಉದಾಹರಣೆ ಕನ್ನಡ ಚಿತ್ರರಂಗದಲ್ಲಿ ಇನ್ನೊಂದಿಲ್ಲವೆನ್ನುವಷ್ಟು ಅಪರೂಪ.

ವಜ್ರೇಶ್ವರಿಗೆ ಜೀವ !
'ಅಪ್ಪು' ಚಿತ್ರದ ಯಶಸ್ಸು ಗಾಂಧಿನಗರದ ಗರ್ಭಗುಡಿ ವಜ್ರೇಶ್ವರಿ ಕಂಬೈನ್ಸ್‌ಗೂ ಜೀವ ತಂದಿದೆ. ಇತ್ತೀಚಿನ ದಿನಗಳಲ್ಲಿ ವಜ್ರೇಶ್ವರಿ ಕಂಬೈನ್ಸ್‌ ಪಾಲಿಗೆ ಚಿತ್ರ ನಿರ್ಮಾಣ ಹೂವಿನ ಹಾಸಿಗೆಯೇನೂ ಆಗಿರಲಿಲ್ಲ . ರಾಜ್‌ ವಿಶ್ರಾಂತಿ ತೆಗೆದುಕೊಳ್ಳಲಾರಂಭಿಸಿದ ನಂತರ- ವಜ್ರೇಶ್ವರಿ ನಿರ್ಮಿಸಿದ ಅನೇಕ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ . ಇಂಥ ದಿನಗಳಲ್ಲಿ ವಜ್ರೇಶ್ವರಿಗೆ ಜೀವ ತುಂಬುವಂತೆ 'ಅಪ್ಪು' ಗೆದ್ದಿದೆ.

'ಅಪ್ಪು' ಯಶಸ್ಸಿನಿಂದ ಮತ್ತೆ ಮೂರು ಚಿತ್ರಗಳ ನಿರ್ಮಾಣಕ್ಕೆ ವಜ್ರೇಶ್ವರಿ ಸಿದ್ಧತೆ ನಡೆಸುತ್ತಿದೆ. ಆ ಮೂರರಲ್ಲಿ ಶಿವಣ್ಣ ನಾಯಕನಾಗಿ ನಟಿಸುವ, ಶಿವರಾಮ ಕಾರಂತರ ಕಾದಂಬರಿಯಾಧಾರಿತ 'ಚಿಗುರಿದ ಕನಸು' ಚಿತ್ರವೂ ಸೇರಿದೆ. ನಿರ್ದೇಶಕ ನಾಗಾಭರಣ ಚಿತ್ರಕಥೆಯನ್ನು ಸಿದ್ಧಪಡಿಸುತ್ತಿದ್ದಾರೆ.

ಸದ್ಯಕ್ಕೆ 'ಅಪ್ಪು' ನಾಯಕ ಪುನೀತ್‌ ಯಾವುದೇ ಹೊಸ ಚಿತ್ರದಲ್ಲಿ ನಟಿಸುತ್ತಿಲ್ಲ . ತೆಲುಗಿನಿಂದ ಕೂಡ ಪುನೀತ್‌ಗೆ ಆಫರ್‌ಗಳು ಬಂದಿವೆ. ಆದರೆ ನಮ್ಮೂರೇ ಚಂದ ಅನ್ನುತ್ತಾರೆ ಪುನೀತ್‌. 'ನಾವು ಬೇರೆ ಭಾಷೆಗಳಲ್ಲಿ ಅಭಿನಯಿಸುವುದಕ್ಕಿಂಥ, ನಮ್ಮ ಚಿತ್ರಗಳು ಬೇರೆ ಭಾಷೆಗಳಿಗೆ ಡಬ್‌ ಆಗುವುದು ಒಳ್ಳೆಯದಲ್ಲವಾ? ಆಗ ನಾವೇನು ಅಂಥ ಅವರಿಗೂ ಗೊತ್ತಾಗುತ್ತದೆ' ಎನ್ನುತ್ತಾರೆ.

'ಅಪ್ಪು' ಶತದಿನ ಸಂದರ್ಭದಲ್ಲಿ ಅಭಿಮಾನಿಗಳ ಉತ್ಸಾಹವೂ ಗರಿ ಕೆದರಿದೆ. ರಾಜ್ಯದ ವಿವಿಧ ಭಾಗಗಳಲ್ಲಿ 'ಅಪ್ಪು' ಅಭಿಮಾನಿಗಳು ಸಿಹಿ ಹಂಚಿಕೆ, ಬ್ಯಾನರ್‌- ನಕ್ಷತ್ರಗಳ ಸಂಭ್ರಮ ಮುಂತಾಗಿ ಅಭಿಮಾನಕ್ಕೆ ನೂರು ಮುಖ. ಒಂದೆರಡು ಸ್ಯಾಂಪಲ್‌ ನೋಡಿ:

ದೇವತಾ ಮನುಷ್ಯ ಡಾ।ರಾಜ್‌ ಅಭಿಮಾನಿಗಳ ಸಂಘದಿಂದ- ಆಗಸ್ಟ್‌ 4 ರಂದು ನವರಂಗ್‌ ಚಿತ್ರಮಂದಿರದಲ್ಲಿ ಅಪ್ಪು ಕಟೌಟ್‌ಗೆ ಭಾರಿ ಹೂವಿನ ಹಾರ. ಸಿಡಿಮದ್ದು ಸಡಗರ. ಸಿಹಿ ಹಂಚಿಕೆ ಹಾಗೂ'ಪಣವಿಡು..' ಹಾಡಿಗೆ ಕಾಸಿನ ಸುರಿಮಳೆ.
ಆಗಸ್ಟ್‌ 3 ರಂದು ಮಂಡ್ಯದ ಸಿದ್ಧಾರ್ಥ ಚಿತ್ರಮಂದಿರದಲ್ಲಿ 'ಅಪ್ಪು' ಭಾವಚಿತ್ರಕ್ಕೆ ಭಾರೀ ಹೂವಿನ ಹಾರ. 'ತಾಲಿಬಾನ್‌' ಹಾಡಿಗೆ ಕಾಸಿನ ಸುರಿಮಳೆ.
ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ 'ಕಲಾ ಕಂಠೀರವ ಶಿವರಾಜ್‌ಕುಮಾರ್‌ ಅಭಿಮಾನಿಗಳು' ವತಿಯಿಂದ ಪವರ್‌ಸ್ಟಾರ್‌ ಪುನೀತ್‌ ಭಾವಚಿತ್ರಕ್ಕೆ ಭರ್ಜರಿ ದೀಪಾಲಂಕಾರ.
ಬೆಂಗಳೂರಿನ ಸಿದ್ಧೇಶ್ವರ ಚಿತ್ರಮಂದಿರದಲ್ಲಿ ಆಗಸ್ಟ್‌ 3 ರಂದು ಶತ ದಿನೋತ್ಸವ ಸಮಾರಂಭ. ಚಿತ್ರದ ನಟ ನಟಿಯರು ಹಾಗೂ ರಾಜ್‌ ಪರಿವಾರ ಕಾರ್ಯಕ್ರಮದಲ್ಲಿ ಭಾಗವಹಿಸುವರೆಂದು ಚಿತ್ರಮಂದಿರದ ಪ್ರಕಟಣೆ ತಿಳಿಸಿದೆ.

English summary
Nadina Janathege Nanna Vandanegalu : Puneeth Rajkumar say thanks to kannada film lovers on the occasion of Appu running successfully for 100 days in 34 theatres of Karnataka

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada