twitter
    For Quick Alerts
    ALLOW NOTIFICATIONS  
    For Daily Alerts

    ‘ದ್ವೀಪ’ದಲ್ಲಿನ ಮಳೆ ನನ್ನ ಬಾಲ್ಯ ಗೆಳೆಯ - ಕಾಸರವಳ್ಳಿ

    By Super
    |

    'ನಾನು ಮಲೆನಾಡಿನಿಂದ ಬಂದವನು. ಮಳೆ ಮತ್ತು ದಟ್ಟ ಕಾಡು ಬಾಲ್ಯದಿಂದಲೂ ನನ್ನ ಮನಸ್ಸಿಗೆ ಅಂಟಿಕೊಂಡ ವಿಷಯ, ಹೃದಯಕ್ಕೆ ಹತ್ತಿರವಾದದ್ದು...ಅವು ನನ್ನ ಬಾಲ್ಯದ ಗೆಳೆಯರಿದ್ದ ಹಾಗೆ. ಈಗ ಅದು ದ್ವೀಪ ಎಂಬ ಚಿತ್ರದ ಮೂಲಕ ಹೊರ ಬಂದಿದೆ..." - ಗಿರೀಶ್‌ ಕಾಸರವಳ್ಳಿ ನಗರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

    ನಾಲ್ಕನೇ ಬಾರಿಗೆ ಸ್ವರ್ಣಕಮಲ ಗೆದ್ದ ಗಿರೀಶ್‌ ಕಾಸರವಳ್ಳಿ, ಉತ್ತಮ ಛಾಯಾಗ್ರಹಣ ಪ್ರಶಸ್ತಿ ಗಿಟ್ಟಿಸಿಕೊಂಡ ಎಚ್‌. ಎಂ. ರಾಮಚಂದ್ರ , ಉತ್ತಮ ಪ್ರಾದೇಶಿಕ ಚಿತ್ರ ಎನಿಸಿಕೊಂಡ 'ಅತಿಥಿ" ಚಿತ್ರದ ನಿರ್ದೇಶಕ ಪಿ. ಶೇಷಾದ್ರಿ ಅವರನ್ನು ರಾಜ್ಯ ಚಿತ್ರ ನಿರ್ದೇಶಕರ ಸಂಘ ಗುರುವಾರ (ಆ.1) ಸನ್ಮಾನಿಸಿತು. ದ್ವೀಪ ನಿರ್ಮಾಪಕಿ, ನಟಿ ಸೌಂದರ್ಯ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಸನ್ಮಾನದ ನಂತರ ಕಾಸರವಳ್ಳಿ ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟರು. ದ್ವೀಪ, ಮಳೆ, ಚಿತ್ರೋದ್ಯಮ ಮತ್ತು ಪ್ರಶಸ್ತಿಯ ವಿಷಯಗಳು ಅವರ ಮಾತಿನಲ್ಲಿ ಹಾದು ಹೋದವು.

    'ತಬರನ ಕತೆ ಸಿನೆಮಾ ಮಾಡಿದಂದಿನಿಂದ ನನ್ನ ಮನಸ್ಸಿನಲ್ಲಿ ಮಳೆ ಮತ್ತು ಕಾಡು ಎಂಬೆರಡು ವಿಷಯಗಳು ಕಾಡುತ್ತಲೇ ಇತ್ತು. ದ್ವೀಪ ಚಿತ್ರ ಮಾಡುವಾಗ ಕೆಲವೊಮ್ಮೆ ಶೂಟಿಂಗ್‌ಗಾಗಿ ಮಳೆಗೆಂದೇ ಗಂಟೆ ಗಟ್ಟಲೆ ಕಾಯಬೇಕಾದ ಪರಿಸ್ಥಿತಿಯೂ ಎದುರಾಗುತ್ತಿತ್ತು. ಇದು ಸಂಘರ್ಷಗಳನ್ನ ತೆರೆದಿಡುವ ಸಾಮಾಜಿಕ ಚಿತ್ರ ಮಾತ್ರವಲ್ಲ. ಇಲ್ಲಿ ಮಳೆ ಒಂದು ರೂಪಕ. ಮಳೆಯಲ್ಲಿ ಮನುಷ್ಯ ಬದುಕಿಗಾಗಿ ನಡೆಸುವ ಹೋರಾಟವಿದೆ..." ಎಂದು ಮಳೆ ಮತ್ತು ತಮ್ಮ ಸಂಬಂಧ ಹಾಗೂ ಅದು ಚಿತ್ರದಲ್ಲಿ ಮೂಡಿ ಬಂದ ರೀತಿಯ ಬಗ್ಗೆ ಗಿರೀಶ್‌ ಹೇಳಿದರು.

    ಪ್ರಶಸ್ತಿ ಹೊಸಬರ ತೆಕ್ಕೆಗೆ ಬೀಳಬೇಕು !
    'ಕನ್ನಡ ಚಿತ್ರೋದ್ಯಮದಲ್ಲಿರುವ ಹೊಸಬರಿಗೂ ಪ್ರಶಸ್ತಿ ಬರಬೇಕು. ಪ್ರಶಸ್ತಿ ಪಟ್ಟಿಯಲ್ಲಿ ಈಗೀಗ ಹೊಸಬರ ಹೆಸರೇ ಕಾಣಿಸುತ್ತಿಲ್ಲ. ಹೊಸ ನಿರ್ದೇಶಕರೂ ಕೂಡ ಅಷ್ಟೆ...ಒಳ್ಳೊಳ್ಳೆಯ ಚಿತ್ರಗಳನ್ನು ಮಾಡಲು ಪ್ರಯತ್ನಿಸುತ್ತಲೇ ಇಲ್ಲ. ಮಲಯಾಳಂನಲ್ಲಾದರೆ ನೋಡಿ, ಹೊಸ ನಿರ್ದೇಶಕರು ಹೊಸ ದೃಷ್ಟಿಕೋನಗಳಿರುವ ಒಳ್ಳೆ ಚಿತ್ರಗಳನ್ನು ಮಾಡುತ್ತಾರೆ. ಅವರಿಗೆ ಪ್ರಶಸ್ತಿಗಳು ಬರುತ್ತವೆ. ಹಾಗೆಂದ ಮೇಲೆ ಅಂತಹ ಕೆಲಸ ಕನ್ನಡದಲ್ಲಿ ಆಗಬಾರದೇಕೆ ?"- ಎಂಬುದು ಗಿರೀಶ್‌ ಪ್ರಶ್ನೆ.

    ಭಾರತೀಯ ಚಿತ್ರಗಳಿಗೇಕೆ ಈವರೆಗೆ ಆಸ್ಕರ್‌ ಬಂದಿಲ್ಲ ?
    ಸತ್ಯಜಿತ್‌ ರೇ ನಿರ್ದೇಶಿಸಿದ 'ಚಾರುಲತಾ" ಚಿತ್ರಕ್ಕೆ ಆಸ್ಕರ್‌ ಬರಬೇಕಿತ್ತು. ಹಾಗೆ ನೋಡಿದರೆ ಭಾರತದ ಒಟ್ಟು ಆರು ಚಿತ್ರಗಳಿಗೆ ಆಸ್ಕರ್‌ ಬರಬೇಕಿತ್ತು ಅಂತ ನನಗೆ ಅನಿಸುತ್ತದೆ. ಕೆಲವೇ ಕೆಲವು ಚಿತ್ರಗಳು ಮಾತ್ರ ಆಸ್ಕರ್‌ಗೆ ಶಿಫಾರಸುಗೊಳ್ಳುವ ತಾಕತ್ತು ಪಡೆದಿರುತ್ತವೆ. ಆದಾಗ್ಯೂ 'ಸಲಾಂ ಬಾಂಬೆ", 'ಮದರ್‌ ಇಂಡಿಯಾ" ಮತ್ತು 'ಲಗಾನ್‌" ಚಿತ್ರಗಳು ಆಸ್ಕರ್‌ನ ಅಂತಿಮ ಸುತ್ತಿನವರೆಗೂ ಹೋಗಿರುವುದೇ ಭಾರತೀಯ ಚಿತ್ರೋದ್ಯಮಕ್ಕೆ ಸಲ್ಲುವ ಗೌರವ ಎಂದ ಗಿರೀಶ್‌, ಆಸ್ಕರ್‌ಗೆ ಕಳುಹಿಸುವ ಚಿತ್ರಗಳ ಆಯ್ಕೆ ಸರಿಯಾಗಿರುವುದಿಲ್ಲ ಎನ್ನುವ ಬೇಜಾರಿನ ಬಗ್ಗೆ ಹೇಳಿಕೊಂಡು ಮಾತು ಮುಗಿಸಿದರು.

    ಹಿರಿಯ ಚಿತ್ರ ನಿರ್ಮಾಪಕ ವಾದಿರಾಜ್‌, ಗಿರೀಶ್‌ರನ್ನು ಅಭಿನಂದಿಸಿದರು. ಸತ್ಯಜಿತ್‌ ರೇ ಆರು ಸ್ವರ್ಣ ಕಮಲ ಗೆದ್ದಿದ್ದಾರೆ. ಆ ದಾಖಲೆಯನ್ನು ಗಿರೀಶ್‌ ಮುರಿಯಲಿ ಎಂದು ಹಾರೈಸಿದರು. ಗಿರೀಶ್‌ ಗೆದ್ದ ಪ್ರಶಸ್ತಿಗಳು ಯುವ ನಿರ್ದೇಶಕರಿಗೆ ಸ್ಫೂರ್ತಿಯಾಗಿರಬೇಕು ಅಂತ ಅಶಿಸಿದವರು ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು.

    ಕನ್ನಡ ಚಿತ್ರೋದ್ಯಮದಲ್ಲಿಯೂ ಒಳ್ಳೆಯ ತಂತ್ರಜ್ಞರಿದ್ದಾರೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ಕೆ. ಜಿ. ರಸ್ತೆಯ ಥಿಯೇಟರುಗಳಲ್ಲಿ ಇಂತಹ ಉತ್ತಮ ಚಿತ್ರಗಳ ಪ್ರದರ್ಶನಕ್ಕೆ ಸರಕಾರ ನೆರವಾಗಬೇಕು ಎಂದು ಸಿಂಗ್‌ ಬಾಬು ಸರಕಾರಕ್ಕೆ ಮನವಿ ಮಾಡಿಕೊಂಡರು. ವಾರ್ತಾ ಸಂಚಯ

    English summary
    Dweepa director Kasaravalli speaks about his award winning movie and the present situation of kannada filmdom
    Wednesday, July 10, 2013, 14:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X