»   » ಧಮ್‌, ನಿನಗೋಸ್ಕರ, ದಿಲ್‌ ಚಿತ್ರಗಳ ಕಲೆಕ್ಷನ್‌ ತೋಪೋ ತೋಪು

ಧಮ್‌, ನಿನಗೋಸ್ಕರ, ದಿಲ್‌ ಚಿತ್ರಗಳ ಕಲೆಕ್ಷನ್‌ ತೋಪೋ ತೋಪು

Posted By: Super
Subscribe to Filmibeat Kannada

ಕಾವೇರಿ ಗಲಾಟೆ ಹಿನ್ನೆಲೆಯಲ್ಲಿ ಪದೇ ಪದೇ ನಡೆಯುತ್ತಿರುವ ಪ್ರತಿಭಟನೆ/ಬಂದ್‌ ಒಂದು ಕಡೆ. ಬೆಂಗಳೂರಲ್ಲಿ ಉಗ್ರರ ಭಯ ಇನ್ನೊಂದು ಕಡೆ. ಇನ್ನು ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಜನ ನಿರಾತಂಕವಾಗಿ ಓಡಾಡೋ ಹಾಗೇ ಇಲ್ಲ. ಒಟ್ಟಾರೆಯಾಗಿ ಬಯಲು ಸೀಮೆಯಲ್ಲಿ ಸಿನಿಮಾ ಬಿಸಿನೆಸ್ಸು ಠುಸ್ಸೋ ಠುಸ್ಸು.

ಬೆಂಗಳೂರಲ್ಲೇ ಒಂದು ಸುತ್ತು ಬನ್ನಿ... ಗೊತ್ತಾಗುತ್ತದೆ
ಪ್ಲಾಜಾ ಚಿತ್ರಮಂದಿರದಲ್ಲಿ ಲಕಿ ಅಲಿ ನಟನೆಯ 'ಸುರ್‌" ಎಂಬ ಹಿಂದಿ ಚಿತ್ರವಿದೆ. ಕೆಂಪೇಗೌಡ ರಸ್ತೆಯ ಸಾಗರ್‌ ಥಿಯೇಟರ್‌ನಲ್ಲಿ ರಾಮ್‌ಗೋಪಾಲ್‌ ವರ್ಮಾ ನಿರ್ಮಾಣದ 'ರೋಡ್‌". ಇದೇ ರಸ್ತೆಯಲ್ಲಿ ಮುಂದೆ ಹೋದರೆ, ನಿನಗೋಸ್ಕರ, ಧಮ್‌, ದಿಲ್‌, ಅಪ್ಪು, ಸಿಂಹಾದ್ರಿಯ ಸಿಂಹ... ಸಾಲುಸಾಲು ಚಿತ್ರಗಳು. ಈ ಎಲ್ಲಾ ಚಿತ್ರಮಂದಿರಗಳ ಪಾರ್ಕಿಂಗ್‌ ಲಾಟಲ್ಲಿ ಸಂಜೆ ಒಂದು ಸುತ್ತುಬಂದರೆ, ಅಬ್ಬಬ್ಬಾ ಅಂದರೆ 10 ಸ್ಕೂಟರ್‌/ಮೋಟಾರ್‌ ಬೈಕುಗಳು ಕಾಣಬಹುದು. ಜನರಿಗೆ ಗಲಾಟೆಯ ಭಯ. ರಿಸ್ಕು ತೆಗೆದುಕೊಳ್ಳಲು ಸಿದ್ಧರಿಲ್ಲ. ಫಸ್ಟ್‌ ಶೋ ಮತ್ತು ಸೆಕೆಂಡ್‌ ಶೋ ನೋಡುವವರನ್ನು ನಿಮಿಷದಲ್ಲೇ ಎಣಿಸಿಬಿಡಬಹುದು.

ಬೆಂಗಳೂರೊಂದರಲ್ಲೇ ಸ್ಯಾಂಡಲ್‌ವುಡ್‌ ಚಿತ್ರಗಳ ಪ್ರದರ್ಶನ ಮಾಡುತ್ತಿರುವ ಚಿತ್ರಮಂದಿರಗಳೆಲ್ಲಕ್ಕೆ ಪ್ರತಿ ದಿನ ಕನಿಷ್ಠ 50 ಲಕ್ಷ ರುಪಾಯಿ ನಷ್ಟವಾಗುತ್ತಿದೆ. ಮಂಡ್ಯ, ಮೈಸೂರು, ಹಾಸನ ಪ್ರಾಂತಗಳಲ್ಲಂತೂ ಸಿನಿಮಾ ಪ್ರದರ್ಶನ ನಿಂತು ತಿಂಗಳೇ ಆಗಿದೆ. ತಮಿಳು ಚಿತ್ರಗಳಿರುವ ಚಿತ್ರಮಂದಿರಗಳಲ್ಲಿ ಜನರಿಗಿಂತ ನೊಣಗಳೇ ಹೆಚ್ಚಾಗಿವೆಯಂತೆ. ಮೊನ್ನೆ ಒಂದು ಪ್ರದರ್ಶನದಲ್ಲಿ ರಜನೀಕಾಂತ್‌ರ 'ಬಾಬಾ" ಚಿತ್ರಕ್ಕೆ ಮೂರೇ ಜನ ಪ್ರೇಕ್ಷಕರಿದ್ದರು !

ಸಿನಿಮಾ ಬಿಸಿನೆಸ್ಸು ಪ್ರತಿಶತ 75ರಷ್ಟು ಬಿದ್ದು ಹೋಗಿದೆ. ನಿನಗೋಸ್ಕರ, ಧಮ್‌ ಮತ್ತು ದಿಲ್‌ ಚಿತ್ರಗಳು ಕಲೆಕ್ಷನ್‌ನಲ್ಲಿ ಸ್ವಲ್ಪ ಚೇತರಿಕೆ ತಂದುಕೊಡಬಹುದು ಅಂದುಕೊಂಡಿದ್ದವು. ನಮ್ಮ ಲೆಕ್ಕಾಚಾರಗಳೆಲ್ಲ ಸುಳ್ಳಾಗಿವೆ. ಶಿವಣ್ಣ ಅಭಿನಯದ 'ತವರಿಗೆ ಬಾ ತಂಗಿ", ಉಪ್ಪಿ ನಾಯಕತ್ವದ 'ನಾನು ನಾನೆ" ಮತ್ತು ಜಗ್ಗೇಶ್‌ ಮಹತ್ವಾಕಾಂಕ್ಷೆಯ 'ಮೇಕಪ್‌" ಚಿತ್ರಗಳ ಬಿಡುಗಡೆಯನ್ನು ಕಾವೇರಿ ಗಲಾಟೆ ಕಾರಣಕ್ಕೇ ಅಕ್ಟೋಬರ್‌ 11ಕ್ಕೆ ಮುಂದೂಡಲಾಗಿದೆ. ಆದರೆ, ಸುಪ್ರಿಂಕೋರ್ಟು ಕಾವೇರಿ ಸಮಸ್ಯೆ ಬಗ್ಗೆ ಸೂಕ್ತ ಪರಿಹಾರವನ್ನು ಇನ್ನೂ ಕೊಟ್ಟಿಲ್ಲ. ಕನಿಷ್ಠ ಇನ್ನೊಂದು ತಿಂಗಳು ಇದೇ ಪರಿಸ್ಥಿತಿ ಮುಂದುವರೆಯುವ ಹಾಗಿದೆ. ಸಿನಿಮಾ ಉದ್ದಿಮೆ ಅಲ್ಲಿಯವರೆಗೆ ಉತ್ತರ ಕರ್ನಾಟಕದತ್ತ ಮುಖ ಮಾಡಿ ಹ್ಯಾಪುಮೋರೆ ಹಾಕಿಕೊಳ್ಳಬೇಕಿರುವುದು ಅನಿವಾರ್ಯ ಎನ್ನುತ್ತಾರೆ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ ಕುಮಾರ್‌ ಪಾಟೀಲ್‌.

English summary
Cauvery Protest : Movie theatre collections fall steeply in Mysore/Bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada