»   » ಫಲಾನುಭವಿಗಳ ಲಿಸ್ಟಿನಲ್ಲಿ ಶಿವಣ್ಣ-ಸಾಯಿ-ಆರೆಸ್ಸ್‌ ಗೌಡ

ಫಲಾನುಭವಿಗಳ ಲಿಸ್ಟಿನಲ್ಲಿ ಶಿವಣ್ಣ-ಸಾಯಿ-ಆರೆಸ್ಸ್‌ ಗೌಡ

Posted By: Super
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಹಣತೆಗಳ ಮಾಸ ಕಾರ್ತೀಕ ಸ್ಯಾಂಡಲ್‌ವುಡ್‌ ಪಾಲಿಗೆ ಕತ್ತಲೆ ಮಾಸವಾಗಿದೆ. ಸಾಲು ಸಾಲಾಗಿ ಬಂದ ಚಿತ್ರಗಳು ಪ್ರೇಕ್ಷಕರ ಒಲವಿನಿಂದ ವಂಚಿತವಾಗಿ ಥಿಯೇಟರ್‌ಗಳು ಭಣಭಣ ಅನ್ನುತ್ತಿದ್ದರೆ, 'ತವರಿಗೆ ಬಾ ತಂಗಿ" ಸಿನಿಮಾ ಮಾತ್ರ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ.

ಒಂದು ರೀತಿಯಲ್ಲಿ 'ತವರಿಗೆ ಬಾ ತಂಗಿ" ಕೆಲವರಿಗೆ ಪುನರ್ಜನ್ಮ ಕೊಟ್ಟ ಚಿತ್ರ. ಕನ್ನಡ ಚಿತ್ರರಂಗದ ನಕ್ಷೆಯಿಂದ ಮರೆಯಾಗಿದ್ದ ಸಾಯಿಪ್ರಕಾಶ್‌ ಎನ್ನುವ ನಿರ್ದೇಶಕ ತಂಗಿಯ ಮೂಲಕ ಮರಳಿ ಲಯ ಕಂಡುಕೊಂಡರೆ, ಸತತ ಸೋಲಿನಿಂದ ಕಂಗಾಲಾಗಿದ್ದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಮೊಗದಲ್ಲಿ ನಗೆ ಮರಳಿದೆ. ತಂಗಿಯ ಯಶಸ್ಸು ರಾಧಿಕಾ ಹಾಗೂ ಅನು ಪ್ರಭಾಕರ್‌ಗೂ ನೆರವಾಗಿದೆ.

ಸಾಯಿ ಹಾಗೂ ಶಿವಣ್ಣ ಪುನರ್ಜನ್ಮದ ಪುಳಕದಲ್ಲಿ ಮುಳುಗಿಹೋಗಿದ್ದರೆ, ನಿರ್ಮಾಪಕ ಆರ್‌.ಎಸ್‌.ಗೌಡ ಲಕ್ಷ್ಮಿ ಕಟಾಕ್ಷದ ರೋಮಾಂಚನದಲ್ಲಿ ತೇಲುತ್ತಿದ್ದಾರೆ. ಗೌಡರ ಕೈಯಲ್ಲೀಗ ಸದಾ ರಿಂಗಣಿಸುವ ಮೊಬೈಲು. ಕಿವಿಗೆ ಮೊಬೈಲು ತಗುಲಿಸಿದರೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ತಂಗಿಯ ಜಯಭೇರಿಯ ಸಮಾಚಾರ. ಸಿನಿಮಾ ಕಲೆಕ್ಷನ್‌ ಅಂಕಿಅಂಶಗಳ ಚೀಟಿ ಅವರ ಜೇಬಲ್ಲಿದೆ. ಸಿಕ್ಕವರಿಗೆಲ್ಲ ಈ ಸಿನಿಮಾ ಲಕ್ಷ್ಮಿ ಕಟಾಕ್ಷದ ಪಟ್ಟಿಯನ್ನು ಗೌಡರು ತೋರಿಸುತ್ತಿದ್ದಾರೆ.

ಬೆಂಗಳೂರು, ಮೈಸೂರು ಯಶಸ್ಸನ್ನು ಪಕ್ಕಕ್ಕಿಡಿ. ಉತ್ತರ ಕರ್ನಾಟಕದಲ್ಲಂತೂ ತಂಗಿ ಬೊಂಬಾಟಾಗಿ ಓಡುತ್ತಿದ್ದಾಳೆ. ತವರು, ತಂಗಿ, ಸಂಸಾರ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಒಂಥರಾ ಅಟ್ಯಾಚ್‌ಮೆಂಟ್‌ ಅನ್ನುವುದು ಮತ್ತೆ ಸಾಬೀತಾಗಿದೆ. ತಂಗಿ ಇದೇ ಸ್ಪೀಡಿನಲ್ಲಿ ಮುಂದುವರಿದರೆ ಹಳೆಯ ದಾಖಲೆಗಳೆಲ್ಲ ಚಿಂದಿಯಾಗುವುದು ಖಂಡಿತ ಎಂದು ಗೌಡ ಹೇಳುತ್ತಾರೆ.

ತಂಗಿ ನಂತರ ಮುಂದೇನು ?

ಸದ್ಯಕ್ಕೆ ಗೌಡರ ಬಳಿ ಎರಡು ಪ್ರಾಜೆಕ್ಟ್‌ ಇವೆ. ಮೊದಲನೆಯದು ತಂಗಿಯನ್ನು ತೆಲುಗಿಗೆ ರಿಮೇಕ್‌ ಮಾಡುವುದು. ತೆಲುಗಿಗೆ ರಿಮೇಕ್‌ ಮಾಡುವುದಾದರೆ ನಾನು ಪಾರ್ಟ್ನರ್‌ ಆಗ್ತೇನೆ ಎಂದು ಸಾಯಿಪ್ರಕಾಶ್‌ ದುಂಬಾಲು ಬಿದ್ದಿದ್ದಾರಂತೆ. ಎರಡನೆಯದಾಗಿ, ಇನ್ನೊಂದು ಕಣ್ಣೀರು- ಕರ್ಚೀಪು ಚಿತ್ರವನ್ನು ಮಾಡುವ ಆಸೆ ಗೌಡರಿಗಿದೆ.

ಶಿವಣ್ಣನ ನಾಯಕತ್ವದಲ್ಲೇ 'ತುಂಬಿದ ಸಂಸಾರ" ಎನ್ನುವ ಚಿತ್ರವನ್ನು ನಿರ್ಮಿಸುವ ಕನಸನ್ನು ಗೌಡರು ಕಾಣುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ- 2003 ರ ಫೆಬ್ರವರಿಯಲ್ಲಿ ತುಂಬಿದ ಸಂಸಾರ ಸೆಟ್ಟೇರುತ್ತದೆ.

English summary
Tavarige Ba Thangi fetching more money

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada