ಪಲ್ಲವಿ ಜೊತೆ ದುನಿಯಾ ಸೂರಿ ಅನುಪಲ್ಲವಿ
ನಿರ್ದೇಶಕ ಸೂರಿ 'ಹೊಸ ದುನಿಯಾ'ಗೆ ಕಾಲಿಡಲಿದ್ದಾರೆ. ತನ್ನ ಬಹುಕಾಲದ ಗೆಳತಿ ಪಲ್ಲವಿ ಅವರನ್ನು ಡಿಸೆಂಬರ್ 8ನೇ ತಾರೀಖಿನಂದು ವರಿಸಲಿದ್ದಾರೆ. ಪಲ್ಲವಿ ಬೆಣ್ಣೆ ದೋಸೆ ಖ್ಯಾತಿಯ ದಾವಣಗೆರೆ ಹುಡುಗಿ. ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ನಮ್ಮ ಪ್ರೀತಿಯ ಸೂರಿ ದಾಂಪತ್ಯ ಜೀವನಕ್ಕೆ ಸಪ್ತಪದಿ ತುಳಿಯಲಿದ್ದಾರೆ.
ವೃತ್ತಿಯಲ್ಲಿ ಚಿತ್ರ ಕಲಾವಿದೆಯಾಗಿರುವ ಪಲ್ಲವಿಯೊಂದಿಗೆ ವಿವಾಹ ನಿಶ್ಚಯ ಮಾಡಿರುವುದು ಸೂರಿ ಕುಟುಂಬದ ಸದಸ್ಯರು. ಎರಡು ಕಡೆಯ ಕುಟುಂಬದ ಸದಸ್ಯರು ಮಾತ್ರ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಮಿಕ್ಕವರಿಗೆಲ್ಲಾ ಬೆಂಗಳೂರಿನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ.
ಪಲ್ಲವಿ ನನಗೆ ಬಹಳ ಹಿಂದಿನಿಂದಲೂ ಪರಿಚಯ. ಎರಡೂ ಕುಟುಂಬ ಒಪ್ಪಿಗೆ ಪಡೆದು ಮದುವೆಯಾಗುತ್ತಿದ್ದೇವೆ. ಮದುವೆ ಸರಳವಾಗಿ ನಡೆಯಲಿದೆ, ಆರತಕ್ಷತೆ ಬೆಂಗಳೂರಿನಲ್ಲಿ ಆಯೋಜಿಸುತ್ತೇನೆ. ಕೊಲ್ಲೂರಿನಲ್ಲಿ ಮದುವೆಯಾಗಬೇಕೆನ್ನುವುದು ನನ್ನ ತಾಯಿಯ ಆಸೆ ಎಂದು ಸೂರಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
ಜಾಕಿ ಚಿತ್ರ ಭರ್ಜರಿ ಜ್ಯಾಕ್ ಪಾಟ್ ಹೊಡೆದಿರುವ ಹಾಗೆ ಸೂರಿ - ಪಲ್ಲವಿ ಅವರ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ದಟ್ಸ್ ಕನ್ನಡ ಆಶಿಸುತ್ತದೆ.


Click it and Unblock the Notifications











