ಜೋಗಯ್ಯನ ಕೈಹಿಡಿಯಲಿದ್ದಾರೆ ಕಂಗನಾ ರನಾವತ್
ಬಾಲಿವುಡ್ ನಟಿ ಕಂಗನಾ ರನಾವತ್ 'ಜೋಗಯ್ಯ'ನ ಕೈಹಿಡಿಯುವುದು ಬಹುತೇಕ ಖಚಿತವಾಗಿದೆ. ಚಿತ್ರದ ಅದ್ದೂರಿ ಮುಹೂರ್ತದಿಂದ ಹಿಡಿದು ಇಲ್ಲಿಯವರೆಗೂ ಬಾಲಿವುಡ್ ನ ಹಲವು ನಟಿಯರ ಹೆಸರುಗಳು ಕೇಳಿಬಂದಿದ್ದವು. ಅವರಲ್ಲಿ ಮುಖ್ಯವಾಗಿ ರಾಣಿ ಮುಖರ್ಜಿ, ಅಮೃತಾ ರಾವ್, ನಯನತಾರಾ 'ಜೋಗಯ್ಯ'ನ ಜೊತೆ ನಟಿಸಲಿದ್ದಾರೆ ಎನ್ನಲಾಗಿತ್ತು.
'ಜೋಗಯ್ಯ'ನ ಕೊರಳಿಗೆ ಮಾಲೆ ಹಾಕುವ ಅದೃಷ್ಟ ಕಡೆಗೆ ಕಂಗನಾ ರನಾವತ್ ಪಾಲಾಗಿದೆ ಎನ್ನುತ್ತವೆ ಗಾಂಧಿನಗರ ಮೂಲಗಳು. ಚಿತ್ರದ ನಾಯಕಿ ಪಾತ್ರಕ್ಕೆ ಮತ್ತೊಬ್ಬ ಬಾಲಿವುಡ್ ನಟಿ ಪ್ರಚಿ ದೇಸಾಯಿ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಆದರೆ ಎಲ್ಲೂ ಸ್ಪಷ್ಟವಾದ ಮಾಹಿತಿ ಇಲ್ಲ.
ಪ್ರೇಮ್ ಬರೀ ಗಾಳಿಪಟ ಹಾರಿಸುತ್ತಿದ್ದಾರಾ ಹೇಗೆ? ಎಂದು ತಲೆ ಕೆರೆದುಕೊಳ್ಳುವವರಿಗೆ ಉತ್ತರ ನಿಗೂಢವಾಗಿದೆ. ಪ್ರೇಮ್ ಈಗಾಗಲೆ ಹಲವು ಬಾಲಿವುಡ್ ತಾರೆಯರನ್ನು ಕನ್ನಡಕ್ಕೆ ಕರೆತಂದಿದ್ದಾರೆ. ಮಲ್ಲಿಕಾ ಶೆರಾವತ್, ಯಾನಾ ಗುಪ್ತ ಹೀಗೆ. ಈಗ ಕಂಗನಾರನ್ನು ಕರೆತರಲಿದ್ದಾರೆ ಎಂಬ ಮಾತನ್ನು ತಳ್ಳಿಹಾಕಲು ಸಾಧ್ಯವೆ? ಎಂಬುದು ಗಾಂಧಿನಗರದ ಪ್ರಶ್ನೆ.
ಜೋಗಯ್ಯ ಚಿತ್ರೀಕರಣ ಆಗಸ್ಟ್ 16ರಿಂದ ಆರಂಭವಾಗಲಿದೆ. ಒಟ್ಟು 70 ದಿನಗಳ ಕಾಲ ಚಿತ್ರೀಕರಣ. ಬಹುತೇಕ ಚಿತ್ರೀಕರಣ ಕರ್ನಾಟಕ ಹಾಗೂ ಮುಂಬೈನಲ್ಲಿ ನಡೆಯಲಿದೆ. ಈ ಚಿತ್ರದಲ್ಲಿ ಶಿವಣ್ಣ ಹಲವಾರು ಅವತಾರಗಳಲ್ಲಿ ಕಾಣಿಸಲಿದ್ದಾರೆ. ಪ್ರಮುಖ ರಾಜಕಾರಣಿಯೊಬ್ಬರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅವರು ಯಾರು ಎಂಬುದನ್ನು ಚಿತ್ರದ ನಿರ್ದೇಶಕ ಪ್ರೇಮ್ ಗುಟ್ಟು ಬಿಟ್ಟು ಕೊಟ್ಟಿಲ್ಲ.


Click it and Unblock the Notifications











