ಮೂರರಲ್ಲಿ ಒಂದು ಸುಳ್ಳು ಒಂದು ನಿಜಕ್ಕೆ ಹಿನ್ನೆಲೆ ಸಂಗೀತ
ದಿನೇಶ್‌ಬಾಬು ಅವರು ಸಸ್ಪೆನ್ಸ್, ಕಾಮಿಡಿ, ಥ್ರಿಲ್ಲರ್, ಫ್ಯಾಮಿಲಿ ಡ್ರಾಮಾ ಹೀಗೆ ಎಲ್ಲಾ ರೀತಿಯ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅದರಲ್ಲಿ ಅವರದೇ ಆದ ವಿಭಿನ್ನ ನಿರೂಪಣೆ ಇರುತ್ತದೆ. ಶ್ರೀ ಮೂಕಾಂಬಿಕಾ ಫಿಲಂಸ್ ಲಾಂಛನದಲ್ಲಿ ರಾಜೀವ್ ಹಾಗೂ ಪ್ರಶಾಂತ್ ನಿರ್ಮಿಸುತ್ತಿರುವ ಅವರ ನಿರ್ದೇಶನದ ಚಿತ್ರ ಮೂರು ಗುಟ್ಟು, ಒಂದು ಸುಳ್ಳು, ಒಂದು ನಿಜ.
ಇದೂ ಕೂಡ ಪೂರ್ಣ ಪ್ರಮಾಣದ ಹಾಸ್ಯ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಂಡು, ಅಂತಿಮ ಹಂತದ ಸಿದ್ಧತೆಯಲ್ಲಿದೆ. ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಸುಮಾ ಶಾಸ್ತ್ರಿ ಅವರಿಂದ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
ಅಮೃತವರ್ಷಿಣಿ ನಂತರ ರಮೇಶ್ ಅರವಿಂದ್ ಅವರ ಜೊತೆ ಹಾಗೂ ಮಿ.ಗರಗಸ ನಂತರ ಕೋಮಲ್ ಜೊತೆ ದಿನೇಶ್ ಬಾಬು ನಿರ್ದೇಶನದ ಚಿತ್ರ ಇದಾಗಿದೆ. ಕಥೆ-ಚಿತ್ರಕಥೆ ಬರೆದು ಛಾಯಾಗ್ರಹಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ದಿನೇಶ್ ಬಾಬು ಅವರೇ ಹೊತ್ತಿದ್ದಾರೆ. ಗಾಯಕ ಎಲ್.ಎನ್. ಶಾಸ್ತ್ರಿಯವರ ಪತ್ನಿ ಸುಮಾ ಶಾಸ್ತ್ರಿ ಪ್ರಥಮ ಬಾರಿಗೆ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಚಿತ್ರದಲ್ಲಿರುವುದ ಒಂದೇ ಹಾಡು ಅದೂ ಮಾಸ್ ಸಾಂಗ್ ಆಗಿರುತ್ತದೆ. ರಾಜೇಂದ್ರ ಕಾರಂತರ ಸಂಭಾಷಣೆ ಈ ಚಿತ್ರಕ್ಕಿದ್ದು, ರಮೇಶ್ ಅರವಿಂದ್, ಕೋಮಲ್, ನಂದಿನಿ, ಮಧು ಹೆಗ್ಡೆ, ಸುಧಾ ಬೆಳವಾಡಿ, ಶೃತಿ ನಾಯ್ಡು, ಶ್ರೀನಿವಾಸಮೂರ್ತಿ, ಪ್ರವೀಣ್ ಹಾಗೂ ನ್ಯಾನ್ಸಿ ಪ್ರಮುಖ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











