ಪೋನಿ ವರ್ಮಾ ನನ್ನ ಆಪ್ತ ಗೆಳತಿ ಅಷ್ಟೆ: ಪ್ರಕಾಶ್ ರೈ
ಚಿತ್ರನಟ ಹಾಗೂ ನಿರ್ದೇಶಕ ಪ್ರಕಾಶ್ ರೈ ತಮ್ಮ ಹಾಗೂ ಪೋನಿ ವರ್ಮಾ ಸಂಬಂಧದ ಬಗ್ಗೆ ಉಲ್ಟಾ ಹೊಡೆದಿದ್ದಾರೆ! ಆಕೆ ನನ್ನ ಆಪ್ತ ಗೆಳತಿ ಅಷ್ಟೆ ಎಂದು ಹೇಳುವ ಮೂಲಕ ಪ್ರಕಾಶ್ ರೈ ಅಚ್ಚರಿ ಮೂಡಿಸಿದ್ದಾರೆ. ಪೋನಿ ಹಾಗೂ ಪ್ರಕಾಶ್ ರೈ ಇಬ್ಬರೂ ಆಗಸ್ಟ್ 24ರಂದು ನೂತನ ದಾಂಪತ್ಯಕ್ಕೆ ಅಡಿಯಿಡಲಿದ್ದಾರೆ ಎನ್ನಲಾಗಿತ್ತು.
ಪ್ರಕಾಶ್ ರೈ ಅವರ ಮೊದಲ ಪತ್ನಿ ಲಲಿತಾ ಕುಮಾರಿ ಅವರಿಂದ ವಿವಾಹ ವಿಚ್ಛೇದನ ಪಡೆದ ಬಳಿಕ ಪ್ರಕಾಶ್ ರೈ ಮರು ಮದುವೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರು ತಮ್ಮ ಬಹುಕಾಲದ ಗೆಳತಿ ಹಾಗೂ ಬಾಲಿವುಡ್ ನೃತ್ಯ ನಿರ್ದೇಶಕಿ ಪೋನಿ ವರ್ಮಾರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ವಿಷಯ ಹೀಗಿದ್ದರೂ ಪೋನಿ ಮತ್ತು ನಾನು 'ಜಸ್ಟ್ ಫ್ರೆಂಡ್ಸ್ ' ಅಷ್ಟೆ ಎನ್ನುತ್ತಾರೆ ಪ್ರಕಾಶ್ ರೈ. ಚೆನ್ನೈನಲ್ಲಿ ಧ್ವನಿಸುರುಳಿ ಬಿಡುಗಡೆ ಸಮಾರಂಭ ಒಂದಕ್ಕೆ ಪ್ರಕಾಶ್ ರೈ ಹಾಗೂ ಪೋನಿ ಜೊತೆ ಜೊತೆಯಾಗಿ ಆಗಮಿಸಿದ್ದರು. ಈ ನವ ಜೋಡಿಯನ್ನು ಕಂಡ ಕೂಡಲೆ ಪತ್ರಕರ್ತರು ಮಾತಿಗಿಳಿದರು. ಆಗ ಪ್ರಕಾಶ್ ರೈ ನಾವಿಬ್ಬರೂ ಆಪ್ತ ಸ್ನೇಹಿತರಷ್ಟೆ ಎಂದು ಹೇಳಿ ಅಲ್ಲಿಂದ ಜಾರಿಕೊಂಡಿದ್ದಾರೆ.
ಪತ್ರಕರ್ತರೊಂದಿಗೆ ಹೆಚ್ಚಾಗಿ ಮಾತನಾಡಲು ಇಷ್ಟಪಡದ ಪ್ರಕಾಶ್ ರೈ ಆದಷ್ಟು ಬೇಗನೆ ಅಲ್ಲಿಂದ ಜಾಗ ಕಾಲಿ ಮಾಡಿದ್ದಾಗಿ ನಮ್ಮ ಚೆನ್ನೈ ಪ್ರತಿನಿಧಿ ತಿಳಿಸಿದ್ದಾರೆ. ಇಬ್ಬರೂ ಒಂದೇ ಕಾರಿನಲ್ಲಿ ಕೂತು ಅಲ್ಲಿಂದ ಜಾಗ ಖಾಲಿ ಮಾಡಿದ್ದಾಗಿ ತಿಳಿದು ಬಂದಿದೆ.ಒಟ್ಟಿನಲ್ಲಿ ಪ್ರಕಾಶ್ ರೈ ಮತ್ತು ಪೋನಿ ವರ್ಮಾ ಮದುವೆ ವಿಚಾರ ಗುಪ್ತ್ ಗುಪ್ತ್ ಆಗಿ ನಡೆಯುತ್ತಿದೆ.


Click it and Unblock the Notifications











