ಗುರುಪ್ರಸಾದ್ ಸ್ಪೆಷಲ್ ಚಿತ್ರಕ್ಕೆ ಹೊಸ ಮುಖಗಳು
ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದ ಮುಹೂರ್ತ ಕಳೆದ ವಾರ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನೆರವೇರಿತು. ಆದರೆ ಚಿತ್ರದ ತಾರಾಗಣದ ಆಯ್ಕೆ ನಡೆಯುತ್ತಿದೆ. ಇನ್ನೊಂದು ಹದಿನೈದು ಇಪ್ಪತ್ತು ದಿನಗಳಲ್ಲಿ ತಾರಾಗಣದ ವಿವರಗಳು ನೀಡುವುದಾಗಿ ಗುರುಪ್ರಸಾದ್ ತಿಳಿಸಿದ್ದರು.
ಈ ಬಾರಿ ಗುರುಪ್ರಸಾದ್ ಯಾರಿಗೆ ಅವಕಾಶ ಕೊಡಲಿದ್ದಾರೆ ಎಂಬ ಕುತೂಹಲ ಇದ್ದೇ ಇದೆ. ಗುರು ಹೇಳುವಂತೆ ಈ ಚಿತ್ರ ಗಾಂಧಿನಗರದ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನ. ಚಿತ್ರ ವಿವಾದಾತೀತವಾಗಿರುತ್ತದೆ. ಗಾಂಧಿನಗರದ ಚಿತ್ರಗಳನ್ನು ನೋಡಿ ಬೇಸತ್ತ ಯುವಕರು ತಾವೇ ಚಿತ್ರ ಮಾಡಲು ಹೊರಡುವುದು. ಆ ಹಾದಿಯಲ್ಲಿ ಎದುರಾಗುವ ಆಸಕ್ತಿಕರ ವಿಷಯಗಳೆ ಚಿತ್ರದ ಕಥಾವಸ್ತು.
ಇವೆಲ್ಲಾ ವಿವಾದಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಕೋಮಲ್ ಚಿತ್ರದಿಂದ ಹೊರನಡೆದಿದ್ದು ಹಳೆಯ ಕಥೆ. ಗುರು ಈ ಬಾರಿ ಹೊಸ ಮುಖಗಳಿಗೆ ಅವಕಾಶ ಕೊಡುತ್ತಿದ್ದಾರೆ. ರಂಗಾಯಣದ ಒಂದಷ್ಟು ಪ್ರತಿಭೆಗಳನ್ನು ಬಳಸಿಕೊಳ್ಳುವುದಾಗಿ ಗುರು ಹೇಳಿದ್ದಾರೆ. ಉಳಿದಂತೆ ತಬಲಾ ನಾಣಿ ಸಹ ಚಿತ್ರದಲ್ಲಿರುತ್ತಾರೆ. ಅವರು ಮತ್ತೊಂದು ಪತ್ರಿಕಾಗೋಷ್ಠಿ ನಡೆಸುವ ವೇಳೆಗೆ ಅವರೆಲ್ಲಾ ಜೊತೆಯಲ್ಲಿರುತ್ತಾರೆ ಎಂಬ ನಂಬಿಕೆಯಿದೆ. ಕಾದು ನೋಡೋಣ.


Click it and Unblock the Notifications











