ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಜಂಗಮ!
'ಜ'ಕಾರಕ್ಕೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೂ ಏನೋ ಒಂಥರಾ ಬಿಡಿಸಲಾರದ ನಂಟು. ಅವರ ಅಭಿನಯದ 'ಜೋಗಿ' ಚಿತ್ರ ಬಾಕ್ಸಾಫೀಸಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಈಗ ಬರುತ್ತಿರುವ 'ಜೋಗಯ್ಯ' ಚಿತ್ರದ ಬಗೆಗೂ ಅಂಥಹದ್ದೇ ಆದ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಈಗ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಶಿವಣ್ಣ. ಚಿತ್ರದ ಹೆಸರು 'ಜಂಗಮ'.
ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ಮಳವಳ್ಳಿ ಸಾಯಿಕೃಷ್ಣ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.ಚಿತ್ರಕ್ಕೆ ಶೀರ್ಷಿಕೆಯೇನೋ ಕೊಟ್ಟಾಗಿದೆ. ಆದರೆ ಈ ಶೀರ್ಷಿಕೆ 'ಜೋಗಿ' ಚಿತ್ರದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಬಳಿ ಇದೆಯಂತೆ. ಹೇಗಾದರೂ ಮಾಡಿ ಆ ಶೀರ್ಷಿಕೆಯನ್ನು ಪಡೆದೇ ತೀರುತ್ತೇನೆ ಎಂಬ ದೃಢ ವಿಶ್ವಾಸದಲ್ಲಿದ್ದಾರೆ ಮಳವಳ್ಳಿ.
ಒಂದು ವೇಳೆ ಆ ಶೀರ್ಷಿಕೆ ಸಿಗದಿದ್ದರೆ ತಮ್ಮ ಚಿತ್ರಕ್ಕೆ 'ಬೀರ' ಎಂದು ಹೆಸರಿಡಲು ಮುಂದಾಗಿರುವುದಾಗಿ ಮಳವಳ್ಳಿ ತಿಳಿಸಿದ್ದಾರೆ. ವರನಟ ಡಾ.ರಾಜ್ ಕುಮಾರ್ ಅಭಿನಯದ ಸಾರ್ವಕಾಲಿಕ ಶ್ರೇಷ್ಠ 'ಕವಿರತ್ನ ಕಾಳಿದಾಸ' ಚಿತ್ರದಲ್ಲಿ ಅವರ ಹೆಸರು ಬೀರ. ಈಗ ಶಿವಣ್ಣ 'ಜಂಗಮ'ನೋ ಅಥವಾ 'ಬೀರ'ನೋ ಎಂಬುದು ಇನ್ನೂ ತೀರ್ಮಾನವಾಗಿಲ್ಲ.
ಈಗಾಗಲೆ ಶಿವಣ್ಣನಿಗೆ ಚಿತ್ರಕತೆಯನ್ನು ಹೇಳಿರುವುದಾಗಿ ಮಳವಳ್ಳಿ ತಿಳಿಸಿದ್ದಾರೆ. ಗುರುಕಿರಣ್ ಅವರ ಸಂಗೀತ ಹಾಗೂ ಎಂ ಆರ್ ಶ್ರೀನು ಅವರ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. ಜೋತಿಷ್ಯವನ್ನು ಅಪಾರವಾಗಿ ನಂಬುವ ಮಳವಳ್ಳಿ ಅವರು ಜೂನ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಿದರೆ ಒಳಿತು ಎಂದು ಭಾವಿಸಿದ್ದಾರೆ. ಈ ಹಿಂದೆ ಮಳವಳ್ಳಿ ಸಾಯಿಕೃಷ್ಣ ಅವರಿಗೆ 'ಭಾಗ್ಯದ ಬಳೆಗಾರ' ಚಿತ್ರದಲ್ಲಿ ಕಹಿ ಘಟನೆಯೊಂದು ಎದುರಾಗಿತ್ತು. ಅದನ್ನೂ ಓದಿ ನೋಡಿ!


Click it and Unblock the Notifications











