»   » ಮುಕ್ತಾಯ ಹಂತಕ್ಕೆ ವಿಜಯ್ ನಟನೆಯ ಸ್ಲಂ ಬಾಲ

ಮುಕ್ತಾಯ ಹಂತಕ್ಕೆ ವಿಜಯ್ ನಟನೆಯ ಸ್ಲಂ ಬಾಲ

Posted By:
Subscribe to Filmibeat Kannada

'ದುನಿಯಾ' ಖ್ಯಾತಿ ವಿಜಯ್ ನಟಿಸಿರುವ, ಸುಮನಾ ಕಿತ್ತೂರು ನಿರ್ದೇಶನದ 'ಸ್ಲಂ ಬಾಲ' ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಪತ್ರಕರ್ತೆಯಾಗಿದ್ದ ಸುಮನಾ ಈ ಚಿತ್ರದ ಮೂಲಕ ನಿರ್ದೇಶಕಿಯಾಗಿದ್ದಾರೆ. ಚಿತ್ರದ ಟೈಟಲ್ ಹೇಳುವ ಹಾಗೆ ಈ ಚಿತ್ರ ಸ್ಲಂನಲ್ಲಿರುವ ನಾಯಕ ಹಾಗೂ ನರ್ತಕಿಯೊಬ್ಬಳ ಜೀವನ ಆಧರಿಸಿ ಈ ಕಥೆಯನ್ನು ಹೆಣೆಯಲಾಗಿದೆ.

ಕಳೆದ ಎರಡು ವಾರಗಳಿಂದ ಮುಂಬೈಯಲ್ಲಿ ಚಿತ್ರೀಕರಣಕ್ಕಾಗಿ ತೆರಳಿದ್ದ 'ಸ್ಲಂ ಬಾಲ' ಚಿತ್ರ ತಂಡ ವಿಶಿಷ್ಟ ಅನುಭವ ಹೊತ್ತುಕೊಂಡು ನಗರಕ್ಕೆ ಮರಳಿದೆ. ಪ್ರಥಮ ಬಾರಿಗೆ ಮಹಿಳಾ ನಿರ್ದೇಶಕಿಯೊಬ್ಬರು ನಗರದ ಆಚೆಗೆ ಚಿತ್ರೀಕರಣ ನಡೆಸಿದ ಹೆಗ್ಗಳಿಕೆಗೆ ಸುಮನಾ ಕಿತ್ತೂರು ಪಾತ್ರವಾಗಿದ್ದಾರೆ

ಮುಂಬೈನಲ್ಲಿರುವ ಸ್ಲಂಗಳು ನಮ್ಮ ಚಿತ್ರಕ್ಕೆ ಹೇಳಿ ಮಾಡಿಸಿದ ಸ್ಥಳಗಳು. ಆ ಊರಿನ ವಿಭಿನ್ನತೆಯೇ ಅಂಥದ್ದು, ವೈಶಿಷ್ಟವೇ ಹಾಗೆ. ಆದರೆ ಮುಂಬೈಯಲ್ಲಿ ಚಿತ್ರಿಸುವುದು ಹರಸಾಹಸದ ಕೆಲಸ, ಚಿತ್ರೀಕರಣ ಪರವಾನಗಿ ಪಡೆದರೂ ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂಥಾದ್ದರಲ್ಲಿ ಅಲ್ಲಿಯ ಪ್ರಸಿದ್ಧ ದರ್ಗಾ, ಶಾರೂಕ್ ಖಾನ್ ಮನೆ ಎದುರಿನ ಕಡಲ ಕಿನಾರೆ, ಗೇಟ್ ವೇ ಆಫ್ ಇಂಡಿಯಾ ಹೀಗೆ ನಾನಾ ಸ್ಥಳಗಳಲ್ಲಿ ದೃಶ್ಯಗಳನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದುಕೊಂಡು ಬಂದಿದ್ದಾರೆ ಸುಮನಾ ಕಿತ್ತೂರು.

ಈ ಮೊದಲೇ ರೂಪಗೊಂಡ ಚಿತ್ರಕಥೆ ಹಾಗು ಇಂಥಲ್ಲಿಯೇ ಚಿತ್ರೀಕರಿಸಬೇಕೆನ್ನುವ ಯೋಜನೆ ರೂಪಿಸಿದ ಕಾರಣ ನಿರ್ದೇಶನ ಕೆಲಸವೂ ಸುಸೂತ್ರವಾಗಿ ನಡೆಯಿತು ಅನ್ನುವ ಸುಮನಾ, ಚಿತ್ರದ ನಿರ್ಮಾಪಕ ರವೀಂದ್ರ ಬಜೆಟ್ ವಿಷಯದಲ್ಲಿ ಧಾರಾಳತನ ತೋರಿದ್ದಾರೆ ಎಂದು ಹೇಳುವುದನ್ನು ಮರೆಯಲ್ಲಿಲ್ಲ.

'ಸ್ಲಂ ಬಾಲ' ತಾರಾಗಣದಲ್ಲಿ ದುನಿಯಾ ವಿಜಯ್, ಶುಭಾ ಪೂಂಜಾ, ಶಶಿಕುಮಾರ್, ಉಮಾಶ್ರೀ, ಬಿ.ಸುರೇಶ್, ಅಚ್ಯುತ್ ನಟಿಸಿದ್ದಾರೆ. 'ಚಂಡ' ಚಿತ್ರದಲ್ಲಿ 'ನೀ ಅಂದಾನೆ ನಿನ್ನಂತ ಚಂದಾನೆ' ಎಂದು ಹಾಡಿ ಕುಣಿದಿದ್ದ ಶುಭಾ ಪೂಂಜಾ 'ಸ್ಲಂ ಬಾಲ' ಚಿತ್ರದಲ್ಲಿ ಮತ್ತೆ ವಿಜಯ್ ಜೊತೆಯಾಗಿದ್ದಾರೆ. 'ಯುಗ' ಮತ್ತು 'ಚಂಡ' ಚಿತ್ರಗಳ ಸೋಲಿನಿಂದ ಕಂಗೆಟ್ಟಿರುವ ವಿಜಯ್‌ಗೆ ಸ್ಲಂಬಾಲ ಗೆಲುವು ತಂದುಕೊಡುತ್ತಾ ಎನ್ನುವುದನ್ನು ಕಾಲ ನಿರ್ಧರಿಸಲಿದೆ.

(ದಟ್ಸ್‌ಸಿನಿ ವಾರ್ತೆ)

ಮಂಗಳೂರಿನ ಬೆಡಗಿ ಶುಭಾ ಪೂಂಜಾ ಚಿತ್ರಪಟ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada