ಕಿಟ್ಟಿ, ಶರ್ಮಿಳಾ 'ಸ್ವಯಂವರ'ಮುಕ್ತಾಯ
ಶ್ರೀನಗರ ಕಿಟ್ಟಿ, ದಿಗಂತ್ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯದ ಸ್ವಯಂವರ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಚಿತ್ರದ ನಿರ್ಮಾಪಕ ಎಂ.ಚಂದ್ರು ತಿಳಿಸಿದ್ದಾರೆ. ಶ್ರೀ ಸಾಯಿ ಕಂಬೈನ್ಸ್ ಲಾಂಛನದಲ್ಲಿ ಚಂದ್ರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ವಿಭಿನ್ನ ಶೀರ್ಷಿಕೆಯ ಈ ಕಥಾನಕದ ವೈಶಿಷ್ಟವೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರುಗಳು ಚಿತ್ರಕ್ಕೆ ಹಾಡುಗಳನ್ನು ಬರೆದಿರುವುದು. ಈ ಪೈಕಿ ತುಷಾರ್ ರಂಗಾನಾಥ ರಚಿಸಿರುವ 'ಶುರುವಾಯ್ತು ನಿನ್ನ ಪ್ರೀತಿ ಹುಡುಕಾಟ ಎದೆಯಲ್ಲಿ ಏರುಪೇರು ತೊಳಲಾಟ' ಎಂಬ ಗೀತೆಯ ಚಿತ್ರೀಕರಣ ಶರ್ಮಿಳಾ ಅವರ ಅಭಿನಯದಲ್ಲಿ ಪುಕೇಟ್‌ನಲ್ಲಿ ನೆರವೇರಿದೆ.
ಯೋಗರಾಜ್ ಭಟ್ ರಚನೆಯ 'ಒಂದು ಊರು. ಅಲ್ಲಿ ಒಬ್ಬ ರಾಜ ಆರಾಮಗಿದ್ದ ರಾಣಿ ಜೊತೆಗೆ ಒಮ್ಮೆ ವಾಕಿಂಗ್ ಹೋದ' ಎಂಬ ಗೀತೆ ಬ್ಯಾಂಕಾಕ್ ಹಾಗೂ ಮೈಸೂರಿನಲ್ಲಿ ಚಿತ್ರೀಕರಣಗೊಂಡಿದೆ. ಶ್ರೀನಗರ ಕಿಟ್ಟಿ ಹಾಗೂ ಶರ್ಮಿಳಾ ಈ ಹಾಡಿಗೆ ಹೆಜ್ಜೆ ಹಾಕಿದರು.
ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ರಚಿಸಿರುವ 'ಕಿಸಲ್ಲೂ ಕಿಂಗು ನಾ ಕಿಕ್ಕಲ್ಲೂ ಕಿಂಗು ನಾ' ಎಂಬ ಗೀತೆಯ ಚಿತ್ರೀಕರಣ ದಿಗಂತ್ ಹಾಗೂ ನೃತ್ಯಗಾರರ ಅಭಿನಯದಲ್ಲಿ ಹಾಗೂ ಎ.ಪಿ.ಅರ್ಜುನ್ ರಚನೆಯ 'ಅಂಬಾರಿ ನನ್ನ ಹೃದಯ ಅಲ್ಲೇ ಕೂಡ್ಸಿ ಪ್ರೀತೆ ಮಾಡ್ತೀನಿ ಬಾಬಾರೇ' ಗೀತೆ ದಿಗಂತ್, ಶ್ರೀನಗರ ಕಿಟ್ಟಿ ಹಾಗೂ ಶರ್ಮಿಳಾ ಅವರ ಪಾಲ್ಗೊಳುವಿಕೆಯಲ್ಲಿ ದೂರದ ಬ್ಯಾಂಕಾಕ್ ಹಾಗೂ ಪಟ್ಟಾಯ ದೇಶಗಳಲ್ಲಿ ನಡೆದಿದೆ.
ಈ ಗೀತೆಗಳ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರೀಕರಣೇತರ ಚಟುವಟಿಕೆಗಳು ಆರಂಭವಾಗಿದೆ ಎಂದು ನಿರ್ದೇಶಕ ಅನಂತರಾಜು ನುಡಿದಿದ್ದಾರೆ. ನಿರ್ದೆಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ನಾಯಕರಾಗಿ ನಟಿಸುತ್ತಿದ್ದಾರೆ.
ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿರುವ 'ಸ್ವಯಂವರ'ದ ಉಳಿದ ತಾರಾಬಳಗದಲ್ಲಿ ತಾರಾ, ಓಂಪ್ರಕಾಶ್‌ರಾವ್, ಅರುಣ್‌ಸಾಗರ್ ಮುಂತಾದವರಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ತುಷಾರ ರಂಗನಾಥ್ ಸಂಭಾಷಣೆ, ಹರ್ಷ ನೃತ್ಯ ಹಾಗೂ ಪಳನಿರಾಜ್ ಅವರ ಸಾಹಸ ಈ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











