twitter
    For Quick Alerts
    ALLOW NOTIFICATIONS  
    For Daily Alerts

    ಮೌನ ಮಾತಾದಾಗ ನೆನಪಾಗುವ ಶಂಕರ್ ನಾಗ್

    By * ಪ್ರಸಾದ ನಾಯಿಕ
    |

    Shankarnag and author Ganesh Kasargod
    'ಮೌನ ಮಾತಾದಾಗ' ದುರಂತಮಯ ಬದುಕುಗಳ ಮರೆಯಲಾಗದ ಮುಖಗಳ ಅನಾವರಣವಾದರೆ, ಶಂಕರ್ ಕುರಿತ ಪುಸ್ತಕ 'ನೆನಪಿನಂಗಳದಲ್ಲಿ ಶಂಕರ್ ನಾಗ್' ದುರಂತಮಯ ಸಾವು ಕಂಡ ಅಪ್ರತಿಮ ಕಲಾವಿದನ ಮರೆಯದ ನೆನಪುಗಳ ತೋರಣ. ಈ ಎರಡು ಪುಸ್ತಕಗಳನ್ನು ಬರೆದಿರುವುದು ಹಿರಿಯ ಸಿನೆಮಾ ಪತ್ರಕರ್ತ ಗಣೇಶ್ ಕಾಸರಗೋಡು.

    ಕನ್ನಡ ಚಿತ್ರರಂಗವಾಗಲಿ ಯಾವುದೇ ಚಿತ್ರರಂಗವಾಗಲಿ ಅವುಗಳತ್ತ ಒಮ್ಮೆ ತಲೆಯೆತ್ತಿ ನೋಡಿದಾಗ ಅಥವಾ ನೆನಪಿಸಿಕೊಂಡಾಗ ನಮ್ಮ ಕಣ್ಣೆದುರಿಗೆ ಕಂಡುಬರುವ ಚಿತ್ರ ನಟ-ನಟಿಯರ ಮರೆಯಲಾಗದ ಅಭಿನಯ, ಇಂಪಾದ ಹಾಡುಗಳು, ನೆನಪಿನಂಗಳದಲ್ಲಿ ಮಧುರ ಮಧುರ ಭಾವ. ಆದರೆ ನೆನಪಿಗೆ ಬಾರದಿರುವುದು ನಟ-ನಟಿಯರು ತೆರೆಯ ಹಿಂದೆ ಹೇಗಿರುತ್ತಾರೆ? ಹೇಗೆ ಜೀವನ ನಡೆಸುತ್ತಾರೆ? ಎಂಬುದು.

    ಅಭಿಮಾನಿಗಳು ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಸಿನೆಮಾ ಎಂದರೆ ದುಡ್ಡು, ಶ್ರೀಮಂತ ಜೀವನ, ವೈಭವೋಪೇತ ಜೀವನಶೈಲಿ ಎಂಬ ಸಾಮಾನ್ಯ ಅಭಿಪ್ರಾಯವನ್ನು ಸುಳ್ಳಾಗಿಸುವಂತಹ ಕಟುಸತ್ಯಗಳನ್ನು ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಪುಸ್ತಕರೂಪದಲ್ಲಿ ಅನಾವರಣಗೊಳಿಸಿದ್ದಾರೆ. ಮುಖಕ್ಕೆ ಹಚ್ಚಿದ ಬಣ್ಣ ಕರಗಿದನಂತರ ಕಲಾವಿದರು ಪಡುವ ಬವಣೆ, ಸಂಕಟ, ನೋವು, ಹತಾಶೆ, ದಿನದೂಡಲು ಪಡುವ ಕಷ್ಟಪಾರ್ಪಣ್ಯ, ಸದ್ದಿಲ್ಲದೆ ಹರಿಯುವ ಕಂಬನಿಗಳ ಹದ್ಯ ಕಥಾನಕವನ್ನು 'ಮೌನ ಮಾತಾದಾಗ' ಅಂಕಣ ಬರಹಗಳಲ್ಲಿ ಗಣೇಶ್ ಕಾಸರಗೋಡು ಮನೋಜ್ಞವಾಗಿ ಹಿಡಿದಿಟ್ಟಿದ್ದಾರೆ.

    ಚಿತ್ರರಂಗ ನೈಜ ಕಲಾವಿದರ ಬಗ್ಗೆ ಇಷ್ಟೊಂದೇಕೆ ಕ್ರೂರವಾಯಿತು, 'ಬೇಕಾದಾಗ ದೊರೆ ಬೇಡವಾದಾಗ ಹೊರೆ' ಎಂಬಂತೆ ಯಾಕೆ ನಡೆಸಿಕೊಂಡಿತು, ಕಲಾವಿದರ ಕುಟುಂಬದ ಕಣ್ಣೀರು ಅಳಿಸಲು ಚಿತ್ರರಂಗ ಯಾಕೆ ವಿಫವಾಯಿತು ಎಂಬ ಪ್ರಶ್ನೆಗಳ ಕುರಿತು ಓದುಗನನ್ನು ಚಿಂತಿಸುವಂತೆ ಮಾಡುವುದೇ ಈ ಬರಹಗಳ ವೈಶಿಷ್ಯ.

    ನೆನಪಿನಂಗಳದಲ್ಲಿ ಶಂಕರ್ ನಾಗ್ : 'ಮೌನ ಮಾತಾದಾಗ' ದುರಂತಮಯ ಬದುಕುಗಳ ಮರೆಯಲಾಗದ ಮುಖಗಳ ಅನಾವರಣವಾದರೆ, ಶಂಕರ್ ಕುರಿತ ಪುಸ್ತಕ 'ನೆನಪಿನಂಗಳದಲ್ಲಿ ಶಂಕರ್ ನಾಗ್' ದುರಂತಮಯ ಸಾವು ಕಂಡ ಅಪ್ರತಿಮ ಕಲಾವಿದನ ಮರೆಯದ ನೆನಪುಗಳ ತೋರಣ.

    ಬಹುಶಃ ಕನ್ನಡಿಗರು ಮಾತ್ರವಲ್ಲ ಇಡೀ ದೇಶ ನೆನಪಿಸಿಕೊಳ್ಳುವಂಥ ಕನ್ನಡ ಚಿತ್ರ ಕಲಾವಿದನೆಂದರೆ ಅವಿನಾಶ್ ಊರ್ಫ್ ಭವಾನಿ ಶಂಕರ್ ಊರ್ಫ್ ಶಂಕರ್ ನಾಗರಕಟ್ಟೆ ಊರ್ಫ್ ಶಂಕರ್ ನಾಗ್. ಶಂಕರ್ ಬಗ್ಗೆ ಎಷ್ಟೋ ಪುಸ್ತಕಗಳು ಬಂದರೂ ಪ್ರತಿ ಹೊಸ ಪುಸ್ತಕದಲ್ಲಿನ ವಿಷಯವೂ ನವನವೀನವೇ ಎಂಬಂತೆ ತೋರುವಂಥ ವ್ಯಕ್ತಿತ್ವ ಶಂಕರ್ ದಾಗಿತ್ತು. ಈ ಕಾರಣಕ್ಕಾಗಿಯೇ ನೆನಪಿನಂಗಳದಲ್ಲಿ ಶಂಕರ್ ಹೊಸದೇನನ್ನೋ ಓದುತ್ತಿದ್ದೇವೆ ಎಂಬಂತೆ ಓದಿಸಿಕೊಂಡು ಹೋಗುತ್ತದೆ.

    ಈ ಪುಸ್ತಕ ಶಂಕರ್ ಜೀವನಚರಿತ್ರೆಯಲ್ಲ. ಆದರೆ, ಶಂಕರ್ ಜೀವನದ ವಿಶಿಷ್ಟ ಮಜಲುಗಳನ್ನು ಕಾಸರಗೋಡು ಅನುಭವದ ಮೂಸೆಯಿಂದ ಎರಕಹೊಯ್ದಿದ್ದಾರೆ. ಶಂಕರ್ ಜೊತೆ ಒಡನಾಡಿದ ಅನೇಕ ಕಲಾವಿದರ ಅನುಭವಗಳನ್ನು ಗಣೇಶ್ ತೆರೆದಿಟ್ಟಿದ್ದಾರೆ. ಶಂಕರ್ ಹುಟ್ಟೂರು, ಮುಂಬೈ ಜೀವನ, ನಾಟಕ, ಸಿನೆಮಾ ಎಂಟ್ರಿ, ಪ್ರಶಸ್ತಿ, ಅಂದುಕೊಂಡಿದ್ದನ್ನು ಸಾಧಿಸುವ ಛಲ, ಸಾಹಸ, ಕನಸುಗಳು ಅತ್ಯಂತ ಜೀವಂತವಾಗಿ ಮೂಡಿಬಂದಿವೆ. ಶಂಕರ್ ನೆನಪುಗಳು ನಿಜಕ್ಕೂ ಆರದ ಗಾಯವೇ.

    ಪ್ರಕಾಶಕರ ವಿಳಾಸ : ಈ ಎರಡೂ ಪುಸ್ತಕಗಳನ್ನು ಸ್ನೇಹ ಬುಕ್ ಹೌಸ್ ಪ್ರಕಟಿಸಿದೆ. ವಿಳಾಸ : ನಂ. 34, 50 ಅಡಿ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಪಕ್ಕ, ರಾಘವೇಂದ್ರ ಬ್ಲಾಕ್, ಶ್ರೀನಗರ, ಬೆಂಗಳೂರು - 560 050. ದೂರವಾಣಿ : 080-2675 2812.

    ಶಂಕರ್ ಪುಸ್ತಕ ರು.80, ಮೌನ ಮಾತಾದಾಗ ರು.120. ಇನ್ನೂರು ರುಪಾಯಿಯಲ್ಲಿ ಎರಡು ಪುಸ್ತಕಗಳು ನಿಮ್ಮ ಕಪಾಟಿನಲ್ಲಿರುತ್ತವೆ. ಗಣೇಶ್ ಕಾಸರಗೋಡು ಅವರನ್ನು ಸಂಪರ್ಕಿಸಬೇಕಿದ್ದರೆ : 94482 43127

    Tuesday, August 3, 2010, 17:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X