ಉದ್ಯಾನನಗರಿಯಲ್ಲಿ 'ಯಕ್ಷ' ನರ್ತನ
'ದುನಿಯಾ' ಚಿತ್ರದ ಲೂಸ್‌ಮಾದ ಪಾತ್ರವನ್ನು ನಿರ್ವಹಣೆ ಮಾಡಿ, 'ನಂದಾ ಲವ್ಸ್ ನಂದಿತಾ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಯೋಗೀಶ್ ನಂತರದ ದಿನಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರು. ಈಗ ಅವರ ಅಭಿನಯದಲ್ಲಿ ಸಿದ್ದವಾಗುತ್ತಿರುವ ಚಿತ್ರ 'ಯಕ್ಷ'.
ರಮೇಶ್‌ಭಾಗವತ್ ನಿರ್ದೇಶಿಸುತ್ತಿರುವ 'ಯಕ್ಷ' ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ವಿ.ನಾಗೇಂದ್ರಪ್ರಸಾದ್ ರಚನೆಯ 'ಆಂಟಿ ಕೇಳು ಅಂಟಾಪುರ ಅಂಕಲ್ ಕೇಳು ಬೆಂಟಾಪುರ...' ಎಂಬ ಹಾಡಿಗೆ ಕಲೈ ಅವರ ನೃತ್ಯ ನಿರ್ದೇಶನದಲ್ಲಿ ಯೋಗೀಶ್ ಹಾಗೂ ರೂಬಿ ಹೆಜ್ಜೆ ಹಾಕಿದರು.
ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿರುವ ಈ ಚಿತ್ರಕ್ಕೆ ಮೂರು ಹಾಡಿನ ಚಿತ್ರೀಕರಣ ಬಾಕಿಯಿದೆ ಎನ್ನುತ್ತಾರೆ ನಿರ್ದೇಶಕರು. ಶ್ಯಾಮಿ ಅಸೋಸಿಯೇಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.
ಅನುಪ್‌ಸೀಳಿನ್ ಸಂಗೀತ, ಚಂದ್ರಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಕಲೈ, ಇಮ್ರಾನ್, ಹರ್ಷ ನೃತ್ಯ, ರವಿವರ್ಮ, ಮಾಸ್‌ಮಾದ ಸಾಹಸ, ಮಂಜುಮಾಂಡವ್ಯ ಸಂಭಾಷಣೆ ಮತ್ತು ಮಧುಗಿರಿಪ್ರಕಾಶ್ ಅವರ ನಿರ್ಮಾಣನಿರ್ವಹಣೆಯಿದೆ. ಚಿತ್ರದ ತಾರಾಬಳಗದಲ್ಲಿ ಯೋಗೀಶ್, ರೂಬಿ, ನಾನಾಪಾಟೇಕರ್, ಅತುಲ್‌ಕುಲಕರ್ಣಿ, ಮಾಸ್ಟರ್ ಹಿರಣ್ಣಯ್ಯ, ಮಹೇಶ್, ಗಿರೀಶ್‌ಮಟ್ಟಣ್ಣನವರ್, ಶರಣ್, ಅಂಬುಜಾಕ್ಷಿ ಮುಂತಾದವರಿದ್ದಾರೆ.


Click it and Unblock the Notifications











