»   » ಒಂದೆಡೆ ಮದುವೆ ಇನ್ನೊಂದೆಡೆ ಸಿನಿಮಾ ನಿರ್ದೇಶನ

ಒಂದೆಡೆ ಮದುವೆ ಇನ್ನೊಂದೆಡೆ ಸಿನಿಮಾ ನಿರ್ದೇಶನ

By: ವಿಘ್ನೕಶ್ವರ ಕುಂದಾಪುರ
Subscribe to Filmibeat Kannada
Soundarya
ಬೆಂಗಳೂರಿನಲ್ಲಿ ಪರವಾಗಿಲ್ಲ . ಮೈಸೂರಿನಲ್ಲೇಕೊ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಸಿಕ್ಕಿಲ್ಲ . 'ದ್ವೀಪ" ಚಿತ್ರದ ನಾಡಿಮಿಡಿತವನ್ನು ನಟಿ, ನಿರ್ಮಾಪಕಿ ಸೌಂದರ್ಯ ಬಣ್ಣಿಸಿದ್ದು ಹೀಗೆ.

ಬೆಂಗಳೂರಿನ ಸಪ್ನ ಥಿಯೇಟರ್‌ನಲ್ಲಿ ಎರಡೂ ಕಾಲು ಗಂಟೆ ಕೂತು ಚಿತ್ರ ನೋಡಿ ಬಂದಿರುವ ಸೌಂದರ್ಯ ಅವರಿಗೆ ಚಿತ್ರಮಂದಿರದ ಧ್ವನಿ ವ್ಯವಸ್ಥೆ ಸರಿಯಿಲ್ಲ ಅನ್ನಿಸಿದೆ. ಜನ ಕೂಡ ಥಿಯೇಟರ್‌ನ ಸೌಂಡ್‌ ಸಿಸ್ಟಂ ಬಗ್ಗೆ ದೂರುತ್ತಿದ್ದಾರೆ. 'ಅವ್ಯವಸ್ಥೆ ಕುರಿತು ಥಿಯೇಟರ್‌ನ ಆಡಳಿತ ವರ್ಗದೊಂದಿಗೆ ಮಾತನಾಡಿದ್ದೇನೆ. ಎಲ್ಲ ಸರಿಯಾಗಬಹುದೆನ್ನುವ ನಂಬಿಕೆ ನನ್ನದು" ಎಂದು ಥೇಟ್‌ ನಾಗಿಯಂತೆಯೇ ಸೌಂದರ್ಯ ಹೇಳಿದರು.

'ದ್ವೀಪ" ಚಿತ್ರದ ಬಗ್ಗೆ ಎಷ್ಟು ಮಾತಾಡಿದರೂ ಸೌಂದರ್ಯ ಅವರಿಗೆ ದಣಿವಿಲ್ಲ . 'ದ್ವೀಪ ನನ್ನನ್ನು ಎತ್ತರಕ್ಕೆ ಬೆಳಗಿಸಿದೆ. ಅದರ ಯಶಸ್ಸಿನ ನಂತರ ನನ್ನ ಜವಾಬ್ದಾರಿಯೂ ಜಾಸ್ತಿಯಾಗಿದೆ" ಎನ್ನುತ್ತಾರೆ ಸೌಂದರ್ಯ. ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ಸಿನಿಮಾಗಳನ್ನು ನಿರ್ಮಿಸುವ ಕನಸು ಆಕೆಯದು.

ಮುಂದಿನ ಚಿತ್ರವನ್ನೂ ಕಾದಂಬರಿ ಆಧರಿಸಿಯೇ ಮಾಡುವ ಆಸೆಯಿದೆ. ಕಥೆ ಯಾವುದಾದರೂ ಅದು ನನ್ನ ಟೇಸ್ಟ್‌ಗೆ ಹೊಂದಲೇ ಬೇಕು ಎಂದು ಸೌಂದರ್ಯ ಸ್ಪಷ್ಟವಾಗಿ ಹೇಳುತ್ತಾರೆ. ಸೌಂದರ್ಯ ಟೇಸ್ಟ್‌ ಎಂಥಾದ್ದು ಅನ್ನುವುದು 'ದ್ವೀಪ" ಚಿತ್ರದ ಮೂಲಕ ಈಗಾಗಲೇ ರುಜುವಾತಾಗಿರುವುದರಿಂದ- ಆಕೆಯ ಹೊಸ ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್‌ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು.

ಸೌಂದರ್ಯ ಮದುವೆಯಂತೆ, ನಿಜವಾ ?
'ಹಾಗೇನೂ ಇಲ್ಲಪ್ಪ . ಯಾವ ಹುಡುಗನೂ ಗೊತ್ತಾಗಿಲ್ಲ " ಎಂದು ಸೌಂದರ್ಯ ಮದುವೆ ಸುದ್ದಿಯನ್ನು ಪಕ್ಕಕ್ಕಿರಿಸಿದರು. ಆದರೆ, ಕಳೆದ ವರ್ಷದ ಡಿಸೆಂಬರ್‌ ಕೊನೆಯಲ್ಲಿ ಸೌಂದರ್ಯ ಅವರ ನಿಶ್ಚಿತಾರ್ಥ ಗುಟ್ಟಾಗಿ ನೆರವೇರಿರುವುದೂ, ಭಾವೀ ಪತಿ ಚಿತ್ರರಂಗಕ್ಕೆ ಸೇರಿದ ವ್ಯಕ್ತಿ ಅಲ್ಲವೆನ್ನುವುದೂ ಈಗ ಗುಟ್ಟಾಗಿ ಉಳಿದಿಲ್ಲ . ಮಾಹಿತಿಗಳನ್ನು ನಂಬುವುದಾದರೆ ಇದೇ ವರ್ಷ ಸೌಂದರ್ಯ ಗಟ್ಟಿಮೇಳ ಗ್ಯಾರಂಟಿ.

ಮದುವೆಯ ವಿಷಯವನ್ನು ಸೌಂದರ್ಯ ಮಾತಿನಲ್ಲಿ ಪಕ್ಕಕ್ಕಿರಿಸುತ್ತಾರಾದರೂ, ಅವರ ನಡವಳಿಕೆಯೆಲ್ಲಾ ಮದುವೆಗೆ ಸಿದ್ಧವಾಗುತ್ತಿರುವ ಹುಡುಗಿಯಂತೆಯೇ ಇದೆ. 'ಇನ್ನು ಮುಂದೆ ಕಮರ್ಷಿಯಲ್‌ ಚಿತ್ರಗಳನ್ನು ಕಡಿಮೆ ಮಾಡಬೇಕು. ಒಳ್ಳೆಯ ಚಿತ್ರಗಳನ್ನು ನಿರ್ಮಿಸಬೇಕು. ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕು" ಎನ್ನುವ ಕನಸುಗಳು ಸೌಂದರ್ಯ ಅವರ ಜೊತೆಗೂಡಿವೆ. ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುವುದನ್ನೀಗ ಸೌಂದರ್ಯ ನಿಲ್ಲಿಸಿದ್ದಾರೆ.

ಸದ್ಯಕ್ಕೆ ಸೌಂದರ್ಯ ಅವರ ದಿನಚರಿಯೇನಿದ್ದರೂ 'ಗೃಹಭಂಗ" ಧಾರಾವಾಹಿ ಸೆಟ್‌ಗೆ ಭೇಟಿ ಕೊಡುವುದು. ನಿರ್ಮಾಪಕಿಯಾಗಿ ಅಥವಾ ಕಾಲಕ್ಷೇಪಕ್ಕಾಗಿ ಸೌಂದರ್ಯ ಸೆಟ್‌ಗೆ ಹೋಗುತ್ತಿಲ್ಲ . ಸೆಟ್‌ನಲ್ಲಿ ಗಿರೀಶ್‌ ಕಾಸರವಳ್ಳಿಯವರ ಕೆಲಸವನ್ನು ಸೌಂದರ್ಯ ನಿಗಾ ಇಟ್ಟು ಗಮನಿಸುತ್ತಿದ್ದಾರೆ. ನಿರ್ದೇಶನದ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳುವುದು ಆಕೆಯ ಉದ್ದೇಶ.

'ಸದ್ಯಕ್ಕಂತೂ ಸಿನಿಮಾ ನಿರ್ದೇಶಿಸುವ ಉದ್ದೇಶ ಇಲ್ಲ . ಅಸಲಿಗೆ, ಸಿನಿಮಾ ನಿರ್ದೇಶಿಸುವ ಆತ್ಮ ವಿಶ್ವಾಸವೇ ಇಲ್ಲ" ಎನ್ನುತ್ತಾರೆ ಸೌಂದರ್ಯ. ಆಕೆಯೇನಿದ್ದರೂ ಭವಿಷ್ಯದ ನಿರ್ದೇಶಕಿ.

English summary
Inspired by Dweepa, Soundarya to do more good films. By the way, sources close to her confirm that she is engaged with non filmy man.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada