»   » ಓದುವ ಮನೆಯಿಂದ ಕಿರುತೆರೆಗೆ ತ್ರಿವೇಣಿ ಕಾದಂಬರಿಗಳು!

ಓದುವ ಮನೆಯಿಂದ ಕಿರುತೆರೆಗೆ ತ್ರಿವೇಣಿ ಕಾದಂಬರಿಗಳು!

Posted By:
Subscribe to Filmibeat Kannada


ತ್ರಿವೇಣಿ ಬದುಕಿದ್ದು ಕೇವಲ 35 ವರ್ಷ(1928-1963). ಆದರೆ ಅತ್ಯಲ್ಪ ಕಾಲದಲ್ಲಿಯೇ ಅತ್ಯಂತ ಜನಪ್ರಿಯತೆ ಪಡೆದರು. ಯುವ ಪೀಳಿಗೆಯಲ್ಲಿ ಓದುವ ಹವ್ಯಾಸ ಬೆಳೆಸಿದ್ದು, ತ್ರಿವೇಣಿ ಕಾದಂಬರಿಗಳ ಹೆಗ್ಗಳಿಕೆ. ತ್ರಿವೇಣಿ ಅವರ ಕಾದಂಬರಿಗಳನ್ನು ಕಿರುತೆರೆಯಲ್ಲಿ ಬಿಂಬಿಸುವ ಪ್ರಯತ್ನ ಈಗ ಆರಂಭ.

ಈ ಕೆಲಸಕ್ಕೆ ಮುಂದಾದವರು, ನಟ ಶ್ರೀನಿವಾಸ ಮೂರ್ತಿ. ಜ.29ರಿಂದ ಈಟೀವಿ ಚಾನೆಲ್‌ನಲ್ಲಿ ತ್ರಿವೇಣಿ ಕಾದಂಬರಿಗಳನ್ನು ಆಧರಿಸಿದ ದೈನಂದಿನ ಧಾರಾವಾಹಿ ಮೂಡಿಬರಲಿದೆ. ತ್ರಿವೇಣಿ ಅವರ ‘ಅವಳ ಮನೆ’ ಕಾದಂಬರಿಯನ್ನು ಆಧರಿಸಿ ಈಗಾಗಲೇ 37 ಕಂತುಗಳು ಸಿದ್ಧವಾಗಿವೆ.

ವಿದೇಶದಲ್ಲಿರುವ ತ್ರಿವೇಣಿ ಅವರ ಮಗಳಿಂದ ಅನುಮತಿ ಪಡೆದಿದ್ದೇನೆ. ಧಾರಾವಾಹಿಯಲ್ಲಿ ಬಳಸಿಕೊಳ್ಳಲಾಗಿರುವ ತ್ರಿವೇಣಿ ಅವರ ಮೊದಲ ಕಾದಂಬರಿಯ ಪ್ರಯೋಗ ಚೆನ್ನಾಗಿ ಮೂಡಿ ಬಂದಿದೆ. ಸು.ರುದ್ರಮೂರ್ತಿ ಶಾಸ್ತ್ರಿ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಸಿ.ಆರ್‌.ಸಿಂಹ, ಶಶಿಕಲಾ ಮತ್ತು ಶ್ಯಾಮಲ ಮುಖ್ಯಪಾತ್ರದಲ್ಲಿದ್ದಾರೆ ಎಂದು ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

‘ಅಣ್ಣ ಬಸವಣ್ಣ ’ ನಿರ್ದೇಶಿಸಿ ನಟಿಸುವ ಮೂಲಕ ನನ್ನ ಬಹುದಿನದ ಹಂಬಲ ನನಸಾಗಿತ್ತು. ನನ್ನ ಇನ್ನೊಂದು ಹಂಬಲ ಈಗ ನನಸಾಗುತ್ತಿದೆ. ನನ್ನ ಮೆಚ್ಚಿನ ಲೇಖಕಿಯನ್ನು ಈಗಿನ ಯುವಜನರಿಗೆ ಪರಿಚಯಿಸುವುದು ನನ್ನ ಉದ್ದೇಶ ಎಂದು ಮೂರ್ತಿ ಹೇಳಿದ್ದಾರೆ.

ತ್ರಿವೇಣಿ ಕಾದಂಬರಿ ಆಧಾರಿತ, ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಬೆಳ್ಳಿ ಮೋಡ, ಶರಪಂಜರ, ಹಣ್ಣೆಲೆ ಚಿಗುರಿದಾಗ, ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಹೂವು ಹಣ್ಣು ಸಿನಿಮಾಗಳಾಗಿ ಹೆಸರು ಮಾಡಿವೆ. ಕಿರುತೆರೆಯಲ್ಲಿನ್ನು ತ್ರಿವೇಣಿ ವೈಭವ.

ಒಂದು ಮಾಹಿತಿ : ತ್ರಿವೇಣಿ ಅವರ ನಿಜನಾಮ; ಅನಸೂಯ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada