twitter
    For Quick Alerts
    ALLOW NOTIFICATIONS  
    For Daily Alerts

    ಹೀರೋ ಆಗುವ ಮುನ್ನ ಸುದೀಪ್‌ ಪಟ್ಟ ಪಡಪಾಟಲು ನೋಡಿದರೆ,

    By Super
    |

    ನಾಯಕ ಒಳಗೆಲ್ಲೋ ಹುದುಗಿರುತ್ತಾನೆ. ಬಲವಾದ ಭಾವುಕ ಸನ್ನಿವೇಶಗಳನ್ನು ಮಾಡಿದಾಗ ಮಾತ್ರ ಅವನು ಹೊರಗೆ ಬರುತ್ತಾನೆ. ಅಂಥಾ ಅವಕಾಶ ಸಿಗಬೇಕಷ್ಟೆ. ಅದನ್ನು ಪಡೆಯಲು ನಾನು ಸಾಕಷ್ಟು ಹೆಣಗಾಡಬೇಕಾಯಿತು....

    ಆತ್ಮವಿಶ್ವಾಸವನ್ನು ಬೊಗಸೆ ತುಂಬ ತುಂಬಿಕೊಂಡಿರುವ ಸುದೀಪ್‌ ಅನುಭವದ ಮೂಸೆಯಿಂದ ಬಂದ ಮಾತಿದು. ಹುಚ್ಚ, ವಾಲಿ ನಂತರ ಇನ್ನೇನು 'ಚಂದು" ಬರುತ್ತಿದ್ದಾನೆ. ಏಪ್ರಿಲ್‌ 10ರಂದು ಕೆಸೆಟ್‌ ಬಿಡುಗಡೆ. 'ಚಂದು"ವಿನ ನಡುವೆ ತುಂಟಾಟದ ಸಣ್ಣ ಪಾತ್ರದಲ್ಲಿ ಸುದೀಪ್‌ ನಟಿಸಿದ್ದಾರೆ. ಕ್ಯಾಂಪಸ್‌ ಪ್ರೇಮಕಥೆಯ ಚಂದುವಿನಲ್ಲಿ ಹೊಸ ಇಮೇಜ್‌ನೊಂದಿಗೆ ಸುದೀಪ್‌ನ ನೋಡುವ ಭಾಗ್ಯ ಅಭಿಮಾನಿಗಳದ್ದು. ಈ ಪಾತ್ರ ಗೆದ್ದೇ ಗೆಲ್ಲುತ್ತದೆಂಬ ಆತ್ಮವಿಶ್ವಾಸ ಸುದೀಪ್‌ ಅವರದ್ದು.

    ಸುದೀಪ್‌ ಸಿನಿಮಾಗೆ ಬಂದದ್ದು...
    ಹುಟ್ಟು ಶ್ರೀಮಂತ. ತಂದೆ ಹೊಟೇಲು ಹಾಗೂ ಗ್ರಾನೈಟ್‌ ಉದ್ಯಮಿ. ಬೆಂಗಳೂರಿನ ಕ್ಯಾಥೆಡ್ರಲ್‌ ಶಾಲೆಯಲ್ಲಿ ಓದು. ನಂತರ ದಯಾನಂದ ಸರಸ್ವತಿ ಕಾಲೇಜಲ್ಲಿ ಎಂಜಿನಿಯರಿಂಗ್‌ ಪದವಿ. ಆದರೆ ಗೀಳೆಲ್ಲಾ ಸಿನಿಮಾ ಕಡೆಗೆ. ಅಪ್ಪ- ಅಮ್ಮನ ಮಾತನ್ನು ಧಿಕ್ಕರಿಸಿ, ಮುಂಬಯಿಯ ರೋಷನ್‌ ತನೇಜಾ ಫಿಲ್ಮ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಸಿನಿಮಾ ತರಪೇತಿ ಪಡೆದರೂ ಟೈಂ ಸರಿಯಿರಲಿಲ್ಲ. ಅಲ್ಲಿ ಕಲಿತ ಸರ್ಟಿಫಿಕೇಟ್‌ ಅವಕಾಶಗಳನ್ನು ಬಾಗಿಲಿಗೆ ತಂದು ನಿಲ್ಲಿಸಲಿಲ್ಲ. ಕೊನೆಗೆ ಬ್ರಹ್ಮ ಎಂಬ ಚಿತ್ರದಲ್ಲಿ ಅವಕಾಶ.

    ಸತತವಾಗಿ 6 ದಿನ ಮೇಕಪ್‌ ಹಚ್ಚಿ ಕೂತರೂ ಶಾಟ್‌ಗೆ ಬುಲಾವು ಬರಲಿಲ್ಲ. ಆರೂ ದಿನ ನಿರಾಸೆಯಿಂದ ಮೇಕಪ್‌ ತೊಳೆದದ್ದಾಯಿತು. ಏಳನೇ ದಿನ ಸೆಟ್‌ಗೆ ಬುಲಾವು. ಇನ್ನೇನು ಪ್ಯಾಕ್‌ಅಪ್‌ ಮಾಡಬೇಕು ಅನ್ನುವ ಮೊದಲು ಸಿಕ್ಕ ಮೊದಲ ಶಾಟ್‌ ಅದು. ಏನು ಡೈಲಾಗ್‌ ಹೇಳಬೇಕು ಎಂಬುದನ್ನೂ ಅದುವರೆಗೆ ಯಾರೂ ಹೇಳಿರಲಿಲ್ಲ. ಅಣ್ಣನ ಕಾಲಿಗೆ ಬಿದ್ದು ಕ್ಷಮೆಯಾಚಿಸುವ ದೃಶ್ಯ ಅದು. 15 ದಿನಗಳ ಶೂಟಿಂಗ್‌ ನಂತರ ಬ್ರಹ್ಮ ಮುಂದಕ್ಕೆ ಹೋಗಲಿಲ್ಲ. ಇದರ ನಂತರ ಅವಕಾಶ ಸಿಕ್ಕ ಇನ್ನೊಂದು ಚಿತ್ರವೂ ಹೀಗೇ ಆಯಿತು. ಸಿಕ್ಕ ಸಣ್ಣ ಪುಟ್ಟ ಪಾತ್ರಗಳನ್ನೂ ಒಪ್ಪಿಕೊಂಡರು. ಆದರೆ ಎಲ್ಲೂ ಬೆಳಕು ಕಾಣಲಿಲ್ಲ.

    ಇಷ್ಟೆಲ್ಲಾ ಅನುಭವಿಸಿಯೂ ಸುದೀಪ್‌ ತಾಳ್ಮೆ ಕಳೆದುಕೊಳ್ಳಲಿಲ್ಲ, ಹತಾಶನಾಗಲಿಲ್ಲ. ಸ್ಪರ್ಶ ಚಿತ್ರದ ಅವಕಾಶ ಮರುಭೂಮಿಯ ಓಯಸಿಸ್‌ನಂತಿತ್ತು. ಸಿನಿಮಾಗೆ ಟೇಕಾಫ್‌ ಸಿಗುವ ಹೊತ್ತಿಗೆ ರಾಜ್‌ಕುಮಾರ್‌ ಅಪಹರಣವಾಯಿತು. ಆದರೆ ಸ್ಪರ್ಶ ಒಂದು ಒಳ್ಳೆ ಇಮೇಜ್‌ ಕೊಟ್ಟಿತು. ಹುಚ್ಚ ಅದನ್ನು ಬಲಪಡಿಸಿತು. ಸುದೀಪ್‌ನ ಕಂಡು ಅಭಿಮಾನಿಗಳು ಹುಚ್ಚರಾದರು ! 'ವಾಲಿ" ಪರವಾಗಿಲ್ಲ ಎನಿಸಿಕೊಂಡಿತು.ಈಗ ಸುದೀಪ್‌ಗೊಂದು ಅಭಿಮಾನಿಗಳ ಬಳಗವಿದೆ. ಪ್ರೀತಿಯ ಸಂಕೇತವಾಗಿ ಅವರು ತೊಡಿಸಿದ ಬೆಳ್ಳಿಯ ಕಿರೀಟ ಸುದೀಪ್‌ ತಲೆಯ ಮೇಲಿದೆ.

    ಕುಂತು ತಿನ್ನುವಷ್ಟು ಶ್ರೀಮಂತಿಕೆ. ಕೆಲಸ ಮಾಡಲೇಬೇಕು ಅನ್ನುವುದಾದರೆ ಮನೆಯ ಉದ್ದಿಮೆ ಕೈಬೀಸುತ್ತಿದೆ. ಆದರೆ ಸುದೀಪ್‌ ಗೀಳು ಕಲೆಯತ್ತ. ತನಗೆ ಇಷ್ಟವಾಗುವ ಕಾರು, ಮೋಟಾರ್‌ ಬೈಕು, ನಾಯಿ, ಕ್ರಿಕೆಟ್ಟು, ಹೆಂಡತಿ ಪ್ರಿಯಾ- ಎಲ್ಲಕ್ಕೂ ಮಿಗಿಲು ಕಲೆ ಎನ್ನುತ್ತಾರೆ ಅವರು. ಚಂದು ಚೆಂದವಾಗುವನೋ, ಚಿಂದಿಚಿಂದಿಯಾಗುವನೋ- ಕಾಲವೇ ಹೇಳಲಿದೆ. ಆದರೆ ಕಲೆಯ ಬಗೆಗಿನ ಸುದೀಪ್‌ ಕಳಕಳಿಯನ್ನು ಮೆಚ್ಚಲೇಬೇಕು. ಏನಂತೀರಿ?

    English summary
    Sudeep is confident about his new venture Chandu
    Tuesday, October 1, 2013, 11:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X