For Quick Alerts
  ALLOW NOTIFICATIONS  
  For Daily Alerts

  ರಜನಿ ‘ಜಗ್ಗೂಭಾಯಿ’ ಅವತಾರ

  By Staff
  |
  • ದಟ್ಸ್‌ಕನ್ನಡ ಬ್ಯೂರೊ
  ತಮಿಳುನಾಡೆಂಬ ತಮಿಳುನಾಡು ಚುನಾವಣೆಯ ಉರಿಯಲ್ಲಿ ಬೇಯುತ್ತಿರುವ ಸಮಯದಲ್ಲಿ ರಜನಿಕಾಂತ್‌ ತಮ್ಮ ಹೊಸಚಿತ್ರದ ಕುರಿತು ಪ್ರಕಟಣೆ ನೀಡಿದ್ದಾರೆ. ಈಗ ತಮಿಳುನಾಡಿನಲ್ಲೆಲ್ಲ ಒಂದೇ ಮಾತು- ಜಗ್ಗೂಭಾಯಿ !

  ‘ಬಾಬಾ’ ಚಿತ್ರದ ನಂತರ ರಜನಿಕಾಂತ್‌ ಹೊಸ ಚಿತ್ರದ ಕುರಿತು ತಮಿಳು ಚಿತ್ರರಂಗದಲ್ಲಿ ಭಾರೀ ಕುತೂಹಲವಿತ್ತು . ಚಿತ್ರದ ಪ್ರಕಟಣೆ ಆಗ ಹೊರಬೀಳುತ್ತದೆ, ಈಗ ಹೊರಬೀಳುತ್ತದೆ ಎನ್ನುವ ಊಹಾಪೋಹಗಳು ಕೇಳುತ್ತಲೇ ಇದ್ದವು. ರಜನಿ ಇನ್ನು ನಟಿಸುವುದಿಲ್ಲ ಎನ್ನುವ ವದಂತಿಗಳೂ ಇದ್ದವು. ಎಲ್ಲ ವದಂತಿಗಳಿಗೂ ತೆರೆ ಎಳೆದಿರುವ ರಜನಿಕಾಂತ್‌- ಹೊಸ ಚಿತ್ರದ ಕುರಿತು ಈಗ ಪ್ರಕಟಣೆ ನೀಡಿದ್ದಾರೆ.

  ರಜನಿಕಾಂತ್‌ರ ಹೊಸಚಿತ್ರ ‘ಜಗ್ಗೂಭಾಯಿ’ ಶೂಟಿಂಗ್‌ ಜುಲೈನಲ್ಲಿ ಪ್ರಾರಂಭವಾಗಲಿದೆ. ಸ್ವತಃ ರಜನಿ ನಿರ್ಮಿಸುತ್ತಿರುವ ಈ ಚಿತ್ರ ದೀಪಾವಳಿ ವೇಳೆಗೆ ತೆರೆ ಕಾಣಲಿದೆ. ಕೆ.ಎಸ್‌.ರವಿಕುಮಾರ್‌ಗೆ ಚಿತ್ರವನ್ನು ನಿರ್ದೇಶಿಸುವ ಭಾಗ್ಯ!

  ಎ.ಆರ್‌. ರೆಹಮಾನ್‌ ಸಂಗೀತ, ವೈರಮುತ್ತು ಸಾಹಿತ್ಯ, ಜೀವಿ ಛಾಯಾಗ್ರಹಣ- ‘ಜಗ್ಗೂಭಾಯಿ’ ಚಿತ್ರಕ್ಕಿದೆ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ . ಪ್ಯಾರಾಗಾನ್‌ ಖ್ಯಾತಿಯ ಜ್ಯೋತಿಕಾ ಹಾಗೂ ತೃಷಾ ಹೆಸರುಗಳು ಕೇಳಿಬರುತ್ತಿವೆ.

  ಅಂದಹಾಗೆ, ಜುಲೈನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿರುವ ಚಿತ್ರಕ್ಕೆ ಈಗಲೇ ಪ್ರಕಟಣೆ ನೀಡಿರುವ ಉದ್ದೇಶವಾದರೂ ಏನು ? ಗೊತ್ತಿಲ್ಲ . ಆದರೆ ರಜನಿಯ ರಾಜಕಾರಣದ ಒಲವುನಿಲುವುಗಳಿಗೂ ಹೊಸಚಿತ್ರದ ಕುರಿತ ಪ್ರಕಟಣೆಗೂ ಸಂಬಂಧ ಕಲ್ಪಿಸುವ ಮಾತುಗಳು ಚೆನ್ನೈನಿಂದ ಕೇಳಿಬರುತ್ತಿವೆ.

  ಇತ್ತೀಚೆಗಷ್ಟೇ ತಾವು ಬಿಜೆಪಿಗೆ ವೋಟು ಹಾಕುವುದಾಗಿ ರಜನಿಕಾಂತ್‌ ಬಹಿರಂಗ ಹೇಳಿಕೆ ನೀಡಿದ್ದರು. ಆದರೆ, ತಮ್ಮ ಅಭಿಮಾನಿಗಳು ಅವರ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಬಹುದು ಎಂದು ರಜನಿ ಹೇಳಿದ್ದರು. ನದಿಜೋಡಣೆ ಪ್ರಸ್ತಾವನೆ ಎನ್‌ಡಿಎ ಅಜೆಂಡಾದಲ್ಲಿರುವುದೇ ರಜನಿಕಾಂತ್‌ ಬಿಜೆಪಿ ಪರ ವಾಲಲಿಕ್ಕೆ ಕಾರಣವಾಗಿತ್ತು . ಇದೆಲ್ಲ ಬಹಿರಂಗ. ಆದರೆ ಅಂತರಂಗದ ಸಮಾಚಾರಗಳೇ ಬೇರೆ.

  ಜಯಲಲಿತಾ ಹಾಗೂ ಪಿಎಂಕೆಯ ರಾಮದಾಸ್‌ ಜೊತೆ ರಜನಿಗೆ ವೈಮನಸ್ಸಿರುವುದು ಅನೇಕ ಸಂದರ್ಭಗಳಲ್ಲಿ ರುಜುವಾತಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಪಿಎಂಕೆ ವಿರುದ್ಧ ರಜನಿ ಅಭಿಮಾನಿಗಳು ಪ್ರಚಾರ ಕೂಡ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಅಭಿಮಾನಿಗಳಲ್ಲಿ ಹೊಸ ಹುರುಪು ತುಂಬುವುದು ರಜನಿಯ ಉದ್ದೇಶವಾ ? ಈ ನಿಟ್ಟಿನಲ್ಲಿ ‘ಜಗ್ಗೂಭಾಯಿ’ ಚಿತ್ರದ ಪ್ರಕಟಣೆ ರಜನಿ ಅಭಿಮಾನಿಗಳಲ್ಲಿ ಸಂಚಲನೆ ಉಂಟು ಮಾಡುತ್ತದಾ? ಈ ಸಂಚಲನೆ ರಾಜಕೀಯವಾಗಿ ಪರಿಣಾಮ ಬೀರುತ್ತದಾ ? ಉತ್ತರಗಳು ಕಾಲಗರ್ಭದಲ್ಲಿವೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X