ಗಜಾಲಾ ಎಂಬ ಗಜನಿಂಬೆ

By Staff
  • ವಿನಾಯಕ ಭಟ್‌
ಇದು ಅಕಾರಾಂತ ಸ್ತ್ರೀಲಿಂಗ ಪದ. ಅಂದಮೇಲೆ ಹುಡುಗಿಯೇ ಎಂದು ತರ್ಕಿಸಬಹುದು; ನೆನಪಿಡಿ, ಉತ್ತರ ಭಾರತದಲ್ಲಿ ಪರಮೇಶ್ವರ್‌ ಗೊದ್ರೆಜ್‌, ಸುರಿಂದರ್‌ ಕೌರ್‌ ಎಲ್ಲಾ ಹೆಣ್ಣು ಹೆಸರುಗಳೇ!

ಆದರೆ ಎಲ್ಲ ವ್ಯಾಕರಣದಾಚೆ ನಿಂತವಳು. ಅವಳೇ ಹೆಳಿಕೊಳ್ಳುವಂತೆ ಮಾತು ಖುಲ್ಲಂಖುಲ್ಲಾ ಮನಸ್ಸು ಬೆಲ್ಲಂಬೆಲ್ಲಾ. ಇಂಥಾಕೆ 15 ತೆಲುಗು, ತಮಿಳು ಚಿತ್ರಗಳ ನಂತರ ರಾಕ್ಷಸನಿಗೆ ನಾಯಕಿ.

ಗಜಾಲಾ ಎಂದರೆ ಅರೇಬಿಕ್‌ನಲ್ಲಿ ಜಿಂಕೆಯ ಕಣ್ಣುಗಳು ಎಂದರ್ಥವಂತೆ. ಆಪ್ತವಾಗುವ ಜಿಂಕೆ ಮರಿಯಂತಲ್ಲದಿದ್ದರೂ, ಸೊಬಗಿನಲ್ಲಿ ಹಿಂದೆ ಬೀಳದ ಗಜಾಲಾ, ಉತ್ತರದವರಂತೆ ಎತ್ತರ; ಮಾಲಿಶ್‌ ಮಾಡಿದಂಥಾ ನಗು, ಪಾಲಿಷ್‌ ಮಾಡಿದಂಥಾ ಮಾತು. ಎಲ್ಲವೂ ಅರಿತು ಆಡಿದಂತೆ, ಆಡುವುದು ಮಾಡುವಂತೆ; ಸ್ಪಷ್ಟ.

ದಕ್ಷಿಣದಲ್ಲಿ ನಿನ್ನೆ ಮೊನ್ನೆ ಕಣ್ಣುಬಿಡುತ್ತಿರುವ ನಾಯಕಿಯರೆಲ್ಲ ಉತ್ತರದೆಡೆ ಮುಖವೊಡ್ಡಿ ನಿಂತಾಗ ಮುಂಬಯಿಯ ಈ ಮುಸ್ಲಿಂ ಹುಡುಗಿ ನಮ್ಮೂರು ಬರಿ ಬೆಡಗು ನಿಮ್ಮೂರೇ ಸೊಬಗು ಎಂದು ದಕ್ಷಿಣದ ಭಾಷೆಗಳಿಗೆ ಅಂಟಿಕೊಳ್ಳುವ ನಿರ್ಧಾರ ತೆಗೆದುಕೊಂಡು ಅಚ್ಚರಿ ಮೂಡಿಸಿದವಳು. ಹಿಂದಿ ಸಿನಿಮಾಗಳಲ್ಲಿ ನಟಿಸುವುದೇ ನನಗೆ ಅಲರ್ಜಿ ಎಂದು ಘಂಟಾಘೋಷವಾಗಿ ಸಾರಿದವಳು.

ತಂದೆ-ತಾಯಿ ದೂರದ ಮಸ್ಕತ್‌ನಲ್ಲಿರುವುದರಿಂದ ಮುಂಬಯಿಯಲ್ಲಿ ಒಬ್ಬಂಟಿಯಾಗಿ ಕಸಿನ್‌ ಜತೆ, ಹಾಸ್ಟೆಲ್‌ಗಳಲ್ಲಿ ಓದಿ ಬೆಳೆದಿದ್ದೇ ಈಕೆ ಆತ್ಮವಿಶ್ವಾಸದ ಪ್ರತಿಮೆಯಾಗಲು ಕಾರಣವಾಗಿರಬಹುದು. ಪಿಯುಸಿ ಮುಗಿಯುವ ಹೊತ್ತಿಗೆ ಗೆಳತಿಯರ ಒತ್ತಾಯದ ಮೇರೆಗೆ ಮಾಡೆಲಿಂಗ್‌ ಪ್ರವೇಶಿಸಿ ಒಂದೆರಡು ಜಾಹಿರಾತುಗಳಲ್ಲಿ ನಟಿಸಿದಾಗಲೂ ಚಿತ್ರರಂಗದಿಂದ ದೂರ ಉಳಿದಾಕೆ. ಕೊನೆಗೂ ತೆಲುಗು ಚಿತ್ರರಂಗ ಈಕೆಯನ್ನು ಕರೆಯಿತು. ಸ್ಟುಡೆಂಟ್‌ ನಂ.1, ಅಲ್ಲರಿ ರಾಮುಡು. ಅದೃಷ್ಟಂ, ಸೀತಾ ವೆಡ್ಸ್‌ ಶ್ರೀರಾಮ... ಹೀಗೆ ಸಾಲು ಸಾಲು ಹಿಟ್‌ ಚಿತ್ರಗಳು. ತಮಿಳಿನಲ್ಲೂ ಕರೆ. ಅಲ್ಲೂ ಯುನಿವರ್ಸಿಟಿ, ಸರ್ವಾಧಿಕಾರಿ ಚಿತ್ರಗಳ ನಂತರ, ಕನ್ನಡಕ್ಕೆ. ಅಲ್ಲಿಯವರೆಗೆ ಸಂದಿದ್ದು ಎರಡು ವರ್ಷಗಳು. ಮಸ್ಕತ್‌ನಲ್ಲಿರುವ ತಂದೆ-ತಾಯಿಯರಿಗೆ ವಿಸ್ಮಯ. ಸ್ವತಃ ಗಜಾಲಾ ಸಹ ತಾನು ಚಿತ್ರರಂಗದಲ್ಲಿ ಇಷ್ಟು ದೂರ ಕ್ರಮಿಸುತ್ತೇನೆ ಎಂದುಕೊಂಡಿರಲಿಲ್ಲ ಎನ್ನುತ್ತಾಳೆ.

ರಾಕ್ಷಸ ಚಿತ್ರದಲ್ಲಿ ಆಕೆಯದು ವೈದ್ಯೆಯ ಪಾತ್ರ. ಇದುವರೆಗೆ ಇಂಥ ತೂಕದ ಪಾತ್ರದಲ್ಲಿ ನಟಿಸಿರಲಿಲ್ಲ. ಎಲ್ಲ ಕಾಲೇಜು ತಿರುಗು, ಮರಸುತ್ತು ಇಂಥ ಪಾತ್ರಗಳೇ ಆಗಿದ್ದವು; ಈ ಪಾತ್ರ ಚೆನ್ನಾಗಿದೆ, ಒಪ್ಪಿಕೊಂಡೆ ಅನ್ನುತ್ತಾಳೆ. ಜಾಹೀರಾತಿನಲ್ಲಿ ಹೆಚ್ಚು ದುಡ್ಡು ಸಿಕ್ಕರೂ ಸಿನಿಮಾ ನಟನೆಯೇ ಆಕೆಗೆ ಇಷ್ಟವಂತೆ; ಹಣ ನಗಣ್ಯ, ಆತ್ಮತೃಪ್ತಿ ಮುಖ್ಯ ಎಂಬುದು ಆಕೆಯ ನೀತಿ. ದೇವರನ್ನು ನಂಬು; ಎಲ್ಲಾ ಅವನೆಣಿಸಿದಂತೆ ಆಗುತ್ತದೆ ಎಂಬುದು ಆಕೆ ನಂಬಿದ ತತ್ವ.

ಅಮ್ಮಂದಿರು ಚಿತ್ರೀಕರಣದ ಸೆಟ್‌ಗೆ ಬರುವುದನ್ನು ಇಷ್ಟಪಡದ ಅಪರೂಪದ ನಾಯಕಿ ಈಕೆ. ಅಮ್ಮ ಬಂದರೆ ನನಗೆ ಒಂಥರಾ ಫ್ರೀಯಾಗಿ ನಟಿಸಲು ಆಗುವುದಿಲ್ಲ. ಆಕೆ ಇಡೀ ದಿನ ಕಾಯಬೇಕು. ಅವಳ ಕಡೆಗೆ ನನ್ನ ಲಕ್ಷ್ಯವಿರುತ್ತದೆ. ಹೀಗಾಗಿ ಭಾರತಕ್ಕೆ ಬಂದಾಗ ಈಕೆ ಎಲ್ಲೋ ಒಂದು ಸಲವಷ್ಟೇ ಶೂಟಿಂಗ್‌ ಜಾಗಕ್ಕೆ ಬಂದು ಹೋಗುತ್ತಾಳೆ. ಸಂಭಾವನೆ ಮುಂತಾದ ವ್ಯವಹಾರಗಳನ್ನೂ ನಾನೇ ನೋಡಿಕೊಳ್ಲುತ್ತೇನೆ. ಕೆಲವೊಮ್ಮೆ ಕಸಿನ್‌ ಸಹಾಯ ಮಾಡುತ್ತಳೆ. ನನ್ನ ಎಲ್ಲಾ ನಿರ್ಧಾರಗಳೂ ನನ್ನವೇ. ಇದೇ ನನಗೆ ಇಷ್ಟ ಎಂಬುದಾಕೆಯ ನಡೆ.

ಬಿಚ್ಚು ನಾಯಕಿಯಾಗಲು ಇಷ್ಟಪಡೆ ಎನ್ನುವ ಈ ಬಿಚ್ಚು ಮನಸ್ಸಿನ ಹುಡುಗಿ, ಸ್ವಿಮ್ಮಿಂಗ್‌ ಸೂಟ್‌ ಬಿಲ್‌ಕುಲ್‌ ಧರಿಸಲಾರೆ. ನನ್ನ ದಿರಿಸುಗಳ ಬಗ್ಗೆ ನಿರ್ದೇಶಕರ ಜತೆ ಚರ್ಚಿಸಿ ಒಮ್ಮತಕ್ಕೆ ಬರುತ್ತೇನೆ. ಇದುವರೆಗೂ ನನ್ನ ಮನಸ್ಸಿಗೆ ವಿರುದ್ಧವಾಗಿ ಯಾವ ನಿದೇಶಕರೂ ನಡೆದುಕೊಂಡಿಲ್ಲ ಎನ್ನುತ್ತಾಳೆ.

ಇಂತಿಪ್ಪ ಗಜಾಲಾ ಹತ್ತು ವರ್ಷಗಳಾಚೆ ಚಿಂತಿಸಿದ್ದಾಳೆ. ಮದುವೆಯಾದ ಮೇಲೆ ನಟಿಸುವುದಿಲ್ಲ, ಮನೆ ಕಡೆ ಗಮನ ಕೊಡಬೇಕು ಎನ್ನುತ್ತಾಳೆ.

ಹಾಲಿ ಆ ಚಿಂತೆ ಇಲ್ಲ. ಮಲಯಾಳಂ ಚಿತ್ರದಲ್ಲೂ ನಟಿಸಿ ಚತುರ್ಭಾಷಾ ತಾರೆ ಎನ್ನಿಸಿಕೊಳ್ಳುವುದು ಸದ್ಯದ ಗುರಿ.

(ಸ್ನೇಹಸೇತು : ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X