»   » ಕುಮಾರಣ್ಣನ ಟೀವಿಯಲ್ಲಿ ರಮೇಶಣ್ಣನ ಪತ್ತೇದಾರಿ ಸೀರಿಯಲ್ಲು!

ಕುಮಾರಣ್ಣನ ಟೀವಿಯಲ್ಲಿ ರಮೇಶಣ್ಣನ ಪತ್ತೇದಾರಿ ಸೀರಿಯಲ್ಲು!

Posted By:
Subscribe to Filmibeat Kannada


ನಾನು ಯಾವ ಪಾತ್ರ ಮಾಡಲಿ? ಮುದುಕನ ಪಾತ್ರ ಮಾಡಿದರೆ ಅಭಿಮಾನಿಗಳು ಒಪ್ಪೋದಿಲ್ಲ.. ಹುಡುಗನ ಪಾತ್ರ ಮಾಡೋದಿಕ್ಕೆ ಆಗೋದಿಲ್ಲಎಂದಿದ್ದ ನಟ ಡಾ.ರಾಜ್ ಕುಮಾರ್, ತಮ್ಮ ಸಂದಿಗ್ಧತೆಯನ್ನು ಒಂದು ಸಲ ತೋಡಿಕೊಂಡಿದ್ದರು. ಒಂದು ಹಂತ ದಾಟಿದ ಮೇಲೆ ಎಲ್ಲ ನಟರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಈ ತಾಕಲಾಟಗಳಿಂದಾಗಿಯೇ ಕಮಲ್ ಹಾಸನ್ ರಂತವರು,ಪ್ರತಿಚಿತ್ರದಲ್ಲೂ ಏನೇನೋ ಕಸರತ್ತು ಮಾಡುತ್ತಾರೆ. ಈ ಸಂದಿಗ್ಧ ಅರ್ಥವಾಗದವರು ಪದೇಪದೇ ಸೋಲುತ್ತಿರುತ್ತಾರೆ. ರವಿಚಂದ್ರನ್, ಉಪೇಂದ್ರ, ಶಿವರಾಜ್ ಕುಮಾರ್ ಮತ್ತಿತರ ನಟರ ಚಿತ್ರಗಳ ಸೋಲಿಗೆ ಇದೇ ಕಾರಣ. ನಾನು ಇಂದಿಗೂ ಪ್ರಸ್ತುತ ಎಂದು ಸಾಬೀತು ಮಾಡುವ ಅನಿವಾರ್ಯತೆ ನಮ್ಮ ಹೀರೋಗಳಿಗೆ ಇದ್ದೇ ಇದೆ. ಕನ್ನಡದ ರಮೇಶ್ ಅರವಿಂದ್, ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಜಾಣರು.

ತ್ಯಾಗರಾಜನ ಪಾತ್ರ ಬೋರ್ ಆಯ್ತು ಗುರುವೇ..ಎಂದು ಪ್ರೇಕ್ಷಕರು ಗೊಣಗುತ್ತಿದ್ದಂತೆಯೇ, ಒಂದಷ್ಟು ಕಾಮಿಡಿ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅಭಿನಯದ ಜೊತೆ ತೆರೆಹಿಂದೆ ನಿಂತುಕೊಂಡು ನಿರ್ದೇಶನ ಮಾಡಿದರು. ರಮೇಶ್ ಗೆದ್ದರು. ರವಿ ಬೆಳಗೆರೆ ಹೇಳುವಂತೆ ಗೆಲುವಿನ ಓಟ ನಿರಂತರ. ರಮೇಶ್ ವಾಟ್ ನೆಕ್ಸ್ಟ್ ಎನ್ನುವುದಕ್ಕೆ ಮುನ್ನವೇ ಕಿರುತೆರೆಗೆ ಅವರು ನುಗ್ಗಿದ್ದಾರೆ. ಅಲ್ಲೊಂದು ಮ್ಯಾಜಿಕ್ ಮಾಡಲು ತಲೆ ಕೆಡಿಸಿಕೊಂಡಿದ್ದಾರೆ.

ಪಾರ್ವತಿ, ಅಂಬಿಕಾ, ಕುಂಕುಮಭಾಗ್ಯ, ಗೀತಾಂಜಲಿ ಮತ್ತಿತರ ಸವಕಲು ಸೀರಿಯಲ್ ಗಳ ಕಂಡು ಕಂಗೆಟ್ಟ ವೀಕ್ಷಕರು, ಟಿ.ಎನ್.ಸೀತಾರಾಂರ ಹಳೇ ಹಾಡು ಕೇಳಿ ಸಾಕಪ್ಪ ಸಾಕು ಎಂದ ವೀಕ್ಷಕರು,ಹೊಸತಿಗಾಗಿ ಹುಡುಕುತ್ತಲೇ ಇದ್ದಾರೆ. ಇಂತಹ ಹೊತ್ತಿನಲ್ಲಿ ರಮೇಶ್ ನಿರ್ದೇಶನದ ಹೊಸ ಧಾರಾವಾಹಿ ಕಿರುತೆರೆ ಮೇಲೆ ಮೂಡಿ ಬರಲಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಈ ಧಾರಾವಾಹಿ, ಕುಮಾರಸ್ವಾಮಿ ಅವರ ಹೊಸ ಚಾನೆಲ್ ಕಸ್ತೂರಿಯಲ್ಲಿ ಪ್ರಸಾರವಾಗಲಿದೆ.

ರಮೇಶ್ ರ ಹೊಸ ಧಾರಾವಾಹಿಯ ಹೆಸರು ಡಿಟೆಕ್ಟಿವ್ ದ್ರೋಣ. ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ಹಂಪಾಪುರ್(ಅನಂತನಾಗ್) ಪತ್ತೇದಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಫ್ಟ್ ವೇರ್ ರಂಗದಲ್ಲಿ ತೊಡಗಿಸಿಕೊಂಡಿರುವ ದೀಪಕ್ ಮತ್ತು ಹರ್ಷ ಧಾರಾವಾಹಿಗಾಗಿ ಕತೆ ಬರೆಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ, ಇನ್ನೆರಡು ತಿಂಗಳೊಳಗೆ, ಡಿಟೆಕ್ಟಿವ್ ದ್ರೋಣನಿಮ್ಮ ಮುಂದೆ.

ಈಗ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಬಗ್ಗೆ ಓದುಗರು ತಮ್ಮ ಅಭಿಪ್ರಾಯ ಬರೆಯಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada