»   » ಇದು ಶೃಂಗಾರ ಕಾಲ, ರಮೇಶ್‌ ‘ಬಿಸಿ ಬಿಸಿ’ !

ಇದು ಶೃಂಗಾರ ಕಾಲ, ರಮೇಶ್‌ ‘ಬಿಸಿ ಬಿಸಿ’ !

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ರಮೇಶ್‌ ಬಿಸಿಯಾಗಿದ್ದಾರೆ !

ರಮೇಶ್‌ ಬಿಸಿಯಾಗಲಿಕ್ಕೆ ಎರಡು ಕಾರಣ. ಬಿಜಿ ಎನ್ನುವ ಶಬ್ದವೇ ಮರೆತುಹೋಗುತ್ತಿರುವ ಸಂದರ್ಭದಲ್ಲಿ ಹೊಸ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿರುವುದು ರಮೇಶ್‌ ಬಿಸಿಗೆ ಮೊದಲ ಕಾರಣವಾದರೆ, ಎರಡನೆ ಕಾರಣ ಚಿತ್ರದ ಕಥಾವಸ್ತು . ಚಿತ್ರದ ಹೆಸರಲ್ಲೇ ಇದೆ ಬಿಸಿ, ಅದು ‘ಬಿಸಿ ಬಿಸಿ’.

‘ಬಿಸಿ ಬಿಸಿ’ ಪ್ರೇಕ್ಷಕರಿಗೆ ಇಷ್ಟವಾಗುವ ಕುರಿತು ರಮೇಶ್‌ಗೆ ಅನುಮಾನವಿಲ್ಲ . ನಿರ್ಮಾಪಕ ಪಾಲ್‌ ಚಂದಾನಿಗೆ ಕೂಡ ಚಿತ್ರದ ಬಗ್ಗೆ ಆಪಾರ ಆತ್ಮ ವಿಶ್ವಾಸವಿದೆ. ಇತ್ತೀಚೆಗೆ ಚಿತ್ರ ನಿರ್ಮಾಣದಿಂದ ದೂರವುಳಿದು ಹಂಚಿಕೆಯಲ್ಲೇ ಬಿಜಿಯಾಗಿದ್ದ ಚಂದಾನಿ, ‘ಬಿಸಿ ಬಿಸಿ’ ಮೂಲಕ ಮತ್ತೆ ಸಕ್ರಿಯ ನಿರ್ಮಾಪಕರಾಗುತ್ತಿದ್ದಾರೆ.

‘ಕತ್ತೆಗಳು ಸಾರ್‌ ಕತ್ತೆಗಳು’ ಚಿತ್ರೀಕರಣದ ಸಂದರ್ಭದಲ್ಲೇ ಪಾಲ್‌ ಚಂದಾನಿ ರಮೇಶ್‌ಗೆ ‘ಬಿಸಿ ಬಿಸಿ’ ಕಥೆ ಹೇಳಿದ್ದರಂತೆ. ಕಥೆಯ ವ್ಯಾಪ್ತಿ ರಮೇಶ್‌ಗೆ ತುಂಬಾ ಇಷ್ಟವಾಗಿತ್ತಂತೆ.

ನಾಯಕ ವಿವಾಹಿತ ಪುರುಷ. ಮದುವೆಯಾಗಿದ್ದರೂ ಮತ್ತೊಂದು ಸಂಬಂಧಕ್ಕಾಗಿ ಹಾತೊರೆಯುವ ಮನಸ್ಸಿನವ. ಗಂಡ, ಹೆಂಡತಿ ಹಾಗೂ ಗಂಡನ ಪ್ರೇಯಸಿಯ ಸುತ್ತ ಸುತ್ತುವ ಕಥಾವಸ್ತು ಸಾಕಷ್ಟು ಬಿಸಿ ಬಿಸಿಯಾಗಿದೆ ಎನ್ನುತ್ತ್ತಾರೆ ಮಾದಕ ಧ್ವನಿಯಲ್ಲಿ ರಮೇಶ್‌.

ರಮೇಶ್‌ ಪತ್ನಿಯಾಗಿ ಅನು ಪ್ರಭಾಕರ್‌ ನಟಿಸುತ್ತಿದ್ದಾರೆ. ಪ್ರೀತಿ ಪ್ರೇಮ ಪ್ರಣಯದಲ್ಲಿ ಪಡ್ಡೆ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಅನೂಗೆ ‘ಬಿಸಿ ಬಿಸಿ’ಯಲ್ಲಿ ಬಿಸಿ ಬಿಸಿ ಪಾತ್ರ. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಹೆಲೆನಾ ನಟಿಸುತ್ತಿದ್ದಾರೆ. ಬೆಂಗಳೂರಿನ ವಸ್ತ್ರ ವಿನ್ಯಾಸ ಕ್ಷೇತ್ರದಲ್ಲಿ ಹೆಲೆನಾ ಇತ್ತೀಚೆಗೆ ಸುದ್ದಿ ಮಾಡುತ್ತಿರುವ ಹುಡುಗಿ. ರಮೇಶ್‌ ಗೆಳೆಯ ರಾಜೇಂದ್ರ ಕಾರಂತ ಸಂಭಾಷಣೆ ಬರೆದಿದ್ದಾರೆ.

ಕಥೆ, ಸಂಭಾಷಣೆ ಪಕ್ಕಾ ಆಗಿದೆ. ಮೂವತ್ತು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯ. ನವೆಂಬರ್‌-ಡಿಸೆಂಬರ್‌ನಲ್ಲಿ ಚಿತ್ರ ತೆರೆ ಕಾಣುತ್ತದೆ ಎಂದರು ರಮೇಶ್‌. ಡಿಸೆಂಬರ್‌ ತಿಂಗಳಲ್ಲಿ ಚಳಿ ತೀವ್ರವಾಗಿರುವುದರಿಂದ ಬಿಸಿ ಬಿಸಿ ಚೆನ್ನಾಗಿ ಓಡಬಹುದು.

‘ಬಿಸಿ ಬಿಸಿ’ ಚಿತ್ರದ ಮೂಲಕವಾದರೂ ರಮೇಶ್‌ ಮತ್ತೆ ಬಿಜಿಯಾಗಲಿ !

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada