»   » ಹೊಸ ಹುಡುಗರು ನಿಲ್ಲುತ್ತಿಲ್ಲ, ಹಳೇ ಹುಲಿಗಳು ಗೆಲ್ಲುತ್ತಿಲ್ಲ!

ಹೊಸ ಹುಡುಗರು ನಿಲ್ಲುತ್ತಿಲ್ಲ, ಹಳೇ ಹುಲಿಗಳು ಗೆಲ್ಲುತ್ತಿಲ್ಲ!

Subscribe to Filmibeat Kannada

ಏಕಾಏಕಿ ಗಣೇಶ್ ಮತ್ತು ವಿಜಯ್ 'ಸ್ಟಾರ್'ಆದ ಮೇಲೆ, ಹೊಸ ಹುಡುಗರು ಬರುತ್ತಲೇ ಇದ್ದಾರೆ.. ಬಂದವರಲ್ಲಿ ನಿಂತವರು, ನಿಲ್ಲುವ ಭರವಸೆ ಹುಟ್ಟಿಸಿದವರು ಕೆಲವರು ಮಾತ್ರ. ಸ್ಟಾರ್ ಇಲ್ಲದೇ ಚಿತ್ರ ಮಾಡುವುದು ಎಷ್ಟು ಕಷ್ಟವೋ, ಸ್ಟಾರ್ ಗಳ ನಂಬಿ ರೀಲ್ ಸುತ್ತುವುದೂ ಸಹಾ ಅಷ್ಟೇ ಕಷ್ಟ. ಸ್ಯಾಂಡಲ್ ವುಡ್ ಬಾಕ್ಸಾಫೀಸ್, ಈ ಅಂಶಗಳನ್ನು ವಿವರಿಸಿದೆ.

  • ಹ.ಚ.ನಟೇಶ ಬಾಬು

ಕಳೆದ ಎರಡು ವಾರಗಳಲ್ಲಿ ಐದು ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಆದರೆ ಯಾವುದೂ ಗಟ್ಟಿಯಾಗಿ ತಳವೂರುವ ಲಕ್ಷಣಗಳು ಕಾಣಿಸುತ್ತಿಲ್ಲ. 'ಸಿಕ್ಸರ್' ಖ್ಯಾತಿಯ ದೇವರಾಜ್ ಪುತ್ರ ಪ್ರಜ್ವಲ್ ಮತ್ತು ಸುಧೀರ್ ಪುತ್ರ ತರುಣ್ ಅಭಿನಯದ 'ಗೆಳೆಯ'ಚಿತ್ರದ ಗಳಿಕೆ ಸುಮಾರಾಗಿದೆ. ರಾಖಿ ಸಾವಂತ್ ಐಟಂ ಡ್ಯಾನ್ಸ್, ಹೊಸ ಹುಡುಗರ ಮ್ಯಾಜಿಕ್ ವರ್ಕ್ ಔಟ್ ಆಗಿಲ್ಲ.

ಮತ್ತೊಂದು ಕಡೆ ಅದೇ ದಿನ ಬಿಡುಗಡೆಯಾದ 'ಆ ದಿನಗಳು'ಚಿತ್ರಮಂದಿರದಲ್ಲಿ ನಿಲ್ಲಲು ತಿಣುಕಾಡುತ್ತಿದೆ. ಒಂದು ರೌಡಿಸಂ ಚಿತ್ರವನ್ನೂ ಹೀಗೂ ಮಾಡಲು ಸಾಧ್ಯ ಎಂಬುದನ್ನು ಅಗ್ನಿ ಶ್ರೀಧರ್ ಮತ್ತು ನಿರ್ದೇಶಕ ಚೈತನ್ಯ ಸಾಬೀತುಪಡಿಸಿದ್ದಾರೆ. ಮಚ್ಚುಲಾಂಗ್, ಐಟಂ ಡ್ಯಾನ್ಸ್ ಸೇರಿದಂತೆ ಸಿನಿ ಮಸಾಲೆ ಬೆರೆಸಲು ಕತೆಯಲ್ಲಿ ಅವಕಾಶವಿತ್ತು. ಆದರೆ ಇವೆಲ್ಲವನ್ನು ಚಿತ್ರತಂಡ ದೂರತಳ್ಳಿದೆ. ಇದು ಕಲಾತ್ಮಕ ಚಿತ್ರವೋ, ವಾಣಿಜ್ಯ ಚಿತ್ರವೋ ಪ್ರೇಕ್ಷರಿಗೆ ಗೊತ್ತಾಗುತ್ತಿಲ್ಲ.ನಿಮಗೆ?

ಸ್ಟಾರ್ ಗಳ ಅಬ್ಬರವಿಲ್ಲದ ಕಾರಣ, 'ಆ ದಿನಗಳು'ಚಿತ್ರದತ್ತ ಪ್ರೇಕ್ಷಕರು ಗಮನಹರಿಸುತ್ತಿಲ್ಲ. ಹೀಗೆಂದು ಸ್ಟಾರ್ ಗಿರಿ ಮುಖ್ಯ ಅನ್ನುವಂತೆಯೂ ಇಲ್ಲ. ಉಪೇಂದ್ರ, ದರ್ಶನ್, ರಾಧಿಕಾ, ಸಾಂಘವಿ ಮತ್ತಿತರ ಸ್ಟಾರ್ ಗಳಿಂದ 'ಅನಾಥರು'ಚಿತ್ರಕ್ಕೆ ಪ್ರಯೋಜನವೇನೂ ಆಗಿಲ್ಲ. ಉಪ್ಪಿ ಮತ್ತು ಸಾಧುಕೋಕಿಲಾ ಗಿಮಿಕ್ ಇಲ್ಲಿ ಕೆಲಸ ಮಾಡಿಲ್ಲ. ಈ ಜೋಡಿಯ 'ರಕ್ತ ಕಣ್ಣೀರು'ಚಿತ್ರದಂತೆಯೇ 'ಅನಾಥರು'ಮುನ್ನುಗ್ಗುತ್ತದೆ ಎಂಬ ಮಾತು ಸುಳ್ಳಾಗಿದೆ. ಚಿತ್ರದ ಮೊದಲ ವಾರದ ಗಳಿಕೆಯನ್ನು ಅನಾಥ ಮಕ್ಕಳಿಗೆ ನೀಡುವುದಾಗಿ ಚಿತ್ರದ ಹಂಚಿಕೆ ಹಕ್ಕು ಪಡೆದಿರುವ ರವಿರಾಜ್ (ರಾಧಿಕಾ ಸಹೋದರ) ಹೇಳಿದ್ದರು. ಅವರಿಗೆ ತಮ್ಮ ಮಾತು ಮರೆತು ಹೋಗಿದೆ. ರಾಧಿಕಾ ಅವರೇ ನೀವಾದರೂ ಮಾತು ನೆನಪಿಸಿ.

ಇನ್ನು ಗಣೇಶ್ ತಮ್ಮ ಯಶಸ್ಸಿನ ಪಯಣವನ್ನು ಮುಂದುವರೆಸಿದ್ದಾರೆ. 'ಮುಂಗಾರು ಮಳೆ', 'ಚೆಲುವಿನ ಚಿತ್ತಾರ' ಚಿತ್ರಗಳಷ್ಟಲ್ಲದಿದ್ದರೂ'ಕೃಷ್ಣ'ಗಳಿಕೆ ನಿರ್ಮಾಪಕರಿಗೆ ತೃಪ್ತಿ ನೀಡಿದೆ. ಮತ್ತೊಂದು ಕಡೆ ಪುನೀತ್ ಅಭಿನಯದ 'ಮಿಲನ' 50ದಿನ ಪೂರೈಸಿದೆ. ಆದರೆ ಪುನೀತ್ ಮತ್ತು ಅವರ ಮನೆಯವರಿಗೆ 'ಮಿಲನ'ಚಿತ್ರದ ಯಶಸ್ಸು ಸಾಲದು ಎಂಬ ಭಾವ ಇದೆ. ನಿರೀಕ್ಷೆಗಳು ಜಾಸ್ತಿಯಾದರೆ ಹೀಗೆ ಆಗುತ್ತಾ?

ವಿನೋದ್ ರಾಜ್ ಅಭಿನಯದ 'ಶುಕ್ರ', ಪ್ರಭಾಕರ್ ಪುತ್ರ ವಿನೋದ್ ಅಭಿನಯದ 'ಸರ್ಕಲ್ ರೌಡಿ'ಸೋತಿವೆ. ಈ ಸೋಲಿನ ಸಾಲಿಗೆ 'ಗುಣ', 'ಅಗ್ರಹಾರ', 'ರೋಡ್ ರೋಮಿಯೋ'ಸೇರ್ಪಡೆಯಾಗಿವೆ. ದಿಲೀಪ್ ಪೈ , ಆಶಿತಾ, ವಿನೋದ್ ಪ್ರಭಾಕರ್ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೂರು ಚಿತ್ರಗಳ ಸೋಲಿನಿಂದ, ಹೊಸ ಹುಡುಗರನ್ನು ನಿರ್ಮಾಪಕರು ಅನುಮಾನದಿಂದ ನೋಡುತ್ತಿದ್ದಾರೆ. ಆದರೂ 20ಕ್ಕೂ ಅಧಿಕ ಹೊಸ ಹುಡುಗರು ಬಣ್ಣ ಹಚ್ಚಿಕೊಳ್ಳಲು ಸಜ್ಜಾಗಿದ್ದಾರೆ. ದುಡ್ಡು ಚೆಲ್ಲಲು ನಿರ್ಮಾಪಕರು ನಿಂತಿದ್ದಾರೆ. ಬೆಸ್ಟ್ ಆಫ್ ಲಕ್ ಹೇಳೋಣವಾ?

ನವೆಂಬರ್ ಮೊದಲ ವಾರ ದುನಿಯಾ ವಿಜಯ್ ಅವರ 'ಯುಗ'ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಅಂಥಾ ಒಳ್ಳೆಯ ಮಾತು ಕೇಳಿ ಬರುತ್ತಿಲ್ಲ. ನವೆಂಬರ್ ಎರಡು ಅಥವಾ ಮೂರನೇ ವಾರ ವಿಜಯ್ ಅಭಿನಯದ ಮೂರನೇ ಚಿತ್ರ 'ಚಂಡ'(ನಿರ್ದೇಶನ, ನಿರ್ಮಾಣ : ಎಸ್.ನಾರಾಯಣ್) ಬಿಡುಗಡೆಯಾಗಲಿದೆ.

ಇತ್ತ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನ 'ಗಾಳಿಪಟ', ವಿಷ್ಣು ಮತ್ತು ಜಯಪ್ರದಾರ'ಈ ಬಂಧನ',ಸುದೀಪ್ ಅಭಿನಯದ 'ಗೂಳಿ', ದರ್ಶನ್ ರ 'ಗಜ', ಪ್ರೇಮ್ ಅಭಿನಯದ 'ಗುಣವಂತ'ಸೇರಿದಂತೆ ವಿವಿಧ ಚಿತ್ರಗಳು ಬಿಡುಗಡೆಗಾಗಿ ಸಾಲಲ್ಲಿ ನಿಂತಿವೆ. 'ಪಲ್ಲಕ್ಕಿ', 'ಸವಿಸವಿ ನೆನಪು' ನಿರೀಕ್ಷೆಯನ್ನು ಹುಸಿಗೊಳಿಸಿವೆ. ಹೀಗಾಗಿ 'ಗುಣವಂತ' ಗೆಲ್ಲಲೇ ಬೇಕಾದ ಅನಿವಾರ್ಯತೆ ಪ್ರೇಮ್ ಅವರಿಗಿದೆ.ಅಂತೆಯೇ, 'ಗೂಳಿ'ಗೆಲ್ಲಲೇ ಬೇಕಾದ ಅನಿವಾರ್ಯತೆ ರಾಮುಗೆ.

ದೀಪಾವಳಿ ಹಬ್ಬದ ಬೆಳಕಿನ ಹಾದಿಯಲ್ಲಿ ಚಿತ್ರರಂಗ ಸಾಗಲಿ.. ಇಷ್ಟನ್ನು ನಾವು ನೀವು ಹಾರೈಸಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada