»   » ಬೆಂಗಳೂರಿನಲ್ಲಿ ಮೋಹನ್‌ ಲಾಲ್‌

ಬೆಂಗಳೂರಿನಲ್ಲಿ ಮೋಹನ್‌ ಲಾಲ್‌

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

‘ಇದು ನಾನು ಅಭಿನಯಿಸುತ್ತಿರುವ ಇನ್ನೊಂದು ಚಿತ್ರ. ಇದನ್ನು ಕನ್ನಡ ಚಿತ್ರವೆಂದು ವರ್ಗೀಕರಿಸಲು ಬಯಸುವುದಿಲ್ಲ. ಭಾಷೆ ತೊಡಕಿನ ವಿಷಯವಲ್ಲ . ಕಥೆ ಹಾಗೂ ಪಾತ್ರ ಚೆನ್ನಾಗಿದ್ದುದರಿಂದಲೇ ಕನ್ನಡ ಚಿತ್ರ ಒಪ್ಪಿಕೊಂಡೆ.’

ಸ್ವಲ್ಪ ಸಮಯಕ್ಕೆ ಮುಂಚೆಯಷ್ಟೇ ವರನಟ ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿ ಬಂದ ಪುಳಕದಲ್ಲಿದ್ದ ಮೋಹನ್‌ಲಾಲ್‌ ಸುದ್ದಿಗಾರರೊಂದಿಗೆ ಮಾತಿಗೆ ತೊಡಗಿದಾಗಲೂ ಆ ಪುಳಕದಿಂದ ಹೊರ ಬಂದಿರಲಿಲ್ಲ . ‘ರಾಜ್‌ ಅವರೊಂದಿಗಿನ ಭೇಟಿ ಅವಿಸ್ಮರಣೀಯವಾದುದು. ಕನ್ನಡ ಚಿತ್ರದಲ್ಲಿ ನಾನು ನಟಿಸುತ್ತಿರುವ ವಿಷಯ ಕೇಳಿ ರಾಜ್‌ ಸಂತೋಷಪಟ್ಟರು. ಕನ್ನಡದೊಂದಿಗಿನ ಈ ಸಂಬಂಧ ಇನ್ನಷ್ಟು ಬೆಳೆಯಲಿ ಎಂದು ಅವರು ಹಾರೈಸಿದರು’ ಎಂದು ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಹೇಳಿದರು.

ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಲವ್‌’ ಚಿತ್ರದಲ್ಲಿ ಮೋಹನ್‌ಲಾಲ್‌ ಅಭಿನಯಿಸುತ್ತಿರುವ ಕುರಿತು ಹೇಳಲಿಕ್ಕೆಂದೇ ಕರೆದ ಸುದ್ದಿಗೋಷ್ಠಿಯದು. (ನಡೆದದ್ದು ನ.2ರ ಭಾನುವಾರ). ಇಪ್ಪತ್ತೆೈದು ವರ್ಷಗಳ ಸಿನಿಮಾ ಬದುಕಿನಲ್ಲಿ ಮೋಹನ್‌ಲಾಲ್‌ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು. ಹಿಂದಿ, ತಮಿಳು, ತೆಲುಗು ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಲಯಾಳಿ ಹೀರೋ ಅಭಿನಯಿಸಿದ್ದಾರೆ.

ತಮ್ಮ ಪುತ್ರ ಆದಿತ್ಯ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ‘ಲವ್‌’ ಗೆಲ್ಲಲೆಂದು ಏನೆಲ್ಲಾ ಪ್ರಯತ್ನ ಮಾಡುತ್ತಿರುವ ಬಾಬು, ಮೋಹನ್‌ಲಾಲ್‌ ಸೇರ್ಪಡೆಯ ಮೂಲಕ ಚಿತ್ರದ ರಂಗು ಹೆಚ್ಚಿಸಿದ್ದಾರೆ. ಅಂದಹಾಗೆ, ‘ಲವ್‌’ ಚಿತ್ರದಲ್ಲಿ ಮೋಹನ್‌ಲಾಲ್‌ ಅವರದ್ದು ಟ್ಯಾಕ್ಸಿ ಡ್ರೆೃವರ್‌ ಪಾತ್ರ. ದುಬೈನಲ್ಲಿ ಟ್ಯಾಕ್ಸಿ ಡ್ರೆೃವರ್‌. ಚಿತ್ರದಲ್ಲಿ ಮೋಹನ್‌ಲಾಲ್‌ ಅವರದ್ದು ವಿಶಿಷ್ಟ ಪಾತ್ರ ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಬಣ್ಣಿಸಿದರು.

ಪ್ರಸ್ತುತ ಹಿಂದಿ ಚಿತ್ರಗಳಲ್ಲಿನ ಅವಕಾಶಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಮೋಹನ್‌ಲಾಲ್‌- ಬಾಲಿವುಡ್‌ ಚಿತ್ರಗಳಲ್ಲಿ ನಟಿಸುವುದು ದೊಡ್ಡ ವಿಷಯವೇನಲ್ಲ . ಸದ್ಯಕ್ಕೆ ಮಲಯಾಳಂ ಚಿತ್ರಗಳಲ್ಲಿಯೇ ಸಂತೃಪ್ತನಾಗಿದ್ದೇನೆ ಎಂದರು.

ನಾಯಕನಟನೊಬ್ಬನ ಏರಿಳಿತಗಳಲ್ಲಿ ಅದೃಷ್ಟವೆನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮೋಹನ್‌ಲಾಲ್‌ ಅಭಿಪ್ರಾಯಪಟ್ಟರು.

ಆದಿತ್ಯ ಹಾಗೂ ರಕ್ಷಿತಾ ‘ಲವ್‌’ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಲಹಾಬಾದ್‌ ಹಾಗೂ ವಾರಣಾಸಿಗಳಲ್ಲಿ ಈಗಾಗಲೇ ಚಿತ್ರೀಕರಣ ನಡೆಸಿದ್ದು , ದುಬೈನಲ್ಲಿ ಚಿತ್ರೀಕರಣ ಬಾಕಿಯಿದೆ. ನವಂಬರ್‌ 9 ರಂದು ‘ಲವ್‌’ ಚಿತ್ರತಂಡ ದುಬೈಗೆ ತೆರಳಲಿದೆ. ದುಬೈನಲ್ಲಿ 1 ತಿಂಗಳ ಕಾಲ ಶಟಿಂಗ್‌ ನಡೆಯಲಿದೆ ಎಂದು ರಾಜೇಂದ್ರಸಿಂಗ್‌ ಬಾಬು ಹೇಳಿದರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada