»   » ಲೋಕೇಶ್‌ ಪುತ್ರನ ಜೊತೆ ವಿಜಯಲಕ್ಷ್ಮಿ ಮದುವೆ!

ಲೋಕೇಶ್‌ ಪುತ್ರನ ಜೊತೆ ವಿಜಯಲಕ್ಷ್ಮಿ ಮದುವೆ!

Posted By:
Subscribe to Filmibeat Kannada


ಇತ್ತೀಚೆಗಷ್ಟೇ ಆತ್ಮಹತ್ಯೆ ಮೂಲಕ ಯಮನ ಮನೆ ಬಾಗಿಲು ತಟ್ಟಿದ್ದ ನಟಿ ವಿಜಯಲಕ್ಷ್ಮಿ, ಈಗ ತಮ್ಮ ಮದುವೆ ದಿನಗಳನ್ನು ಎಣಿಸುತ್ತಿದ್ದಾರೆ. ಮುಖದಲ್ಲಿ ಮದುವೆ ಕಳೆ ಚಿಮ್ಮುತ್ತಿದೆ!

ನಟ ಲೋಕೇಶ್‌ ಪುತ್ರ ಸೃಜನ್‌ ಮತ್ತು ವಿಜಯಲಕ್ಷ್ಮಿ ಮದುವೆ ನಿಶ್ಚಿತಾರ್ಥ ರಹಸ್ಯವಾಗಿ ಚೆನ್ನೈನಲ್ಲಿ ನಡೆದಿದೆ. ಈ ಬಗ್ಗೆ ಚೆನ್ನೈನಲ್ಲಿರುವ ಸೃಜನ್‌ರ ದೂರವಾಣಿ ಬೆನ್ನು ಹತ್ತಿದಾಗ, ಸುದ್ದಿಯನ್ನು ಅವರು ಖಚಿತ ಪಡಿಸಿದರು. ವಿಜಯ ಲಕ್ಷ್ಮಿ ತಮ್ಮ ಬಾಳಸಂಗಾತಿಯಾಗಲಿದ್ದಾಳೆ ಎಂಬುದನ್ನು ಖುಷಿಯಿಂದಲೇ ಹೇಳಿದರು.

ನನ್ನ ಮತ್ತು ವಿಜಯಲಕ್ಷ್ಮಿ ಸ್ನೇಹ ಮೂರು ವರ್ಷಗಳಷ್ಟು ಹಳೆಯದು. ಇಬ್ಬರು ಒಬ್ಬರನ್ನು ಒಬ್ಬರು ಅರ್ಥಮಾಡಿಕೊಂಡಿದ್ದೇವೆ. ಕಳೆದ ತಿಂಗಳಷ್ಟೆ ಮದುವೆಯಾಗುವ ತೀರ್ಮಾನ ಕೈಗೊಂಡೆವು. ಹೆತ್ತವರು ಸಂತೋಷದಿಂದಲೇ ಒಪ್ಪಿದರು. ನನ್ನಮ್ಮ(ಗಿರಿಜಾ ಲೋಕೇಶ್‌) ಆಶೀರ್ವಾದ ಮಾಡಿದರು. ಹೀಗಾಗಿ ನಮ್ಮದು ಸುಖದಾಂಪತ್ಯ ಎಂಬ ಗಟ್ಟಿ ವಿಶ್ವಾಸ ಸೃಜನ್‌ ಮಾತಿನಲ್ಲಿ ಪ್ರತಿಧ್ವನಿಸುತ್ತಿತ್ತು.

ಚೆನ್ನೈನ ಬೆನ್ಜ್‌ ಪಾರ್ಕ್‌ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಅ.27ರಂದು ನೆರವೇರಿದೆ. 2007ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿಯೇ ಮದುವೆ. ಇನ್ನೊಂದೆರಡು ವಾರದಲ್ಲಿ ಚೆನ್ನೈನಿಂದ ಬೆಂಗಳೂರಿಗೆ ವಾಸ್ತವ್ಯವನ್ನು ವಿಜಯಲಕ್ಷ್ಮಿ ಬದಲಿಸುತ್ತಾರೆ. ತಮ್ಮ ತಂದೆ ನಿಧನದ ನಂತರ ಅವರು ಬೆಂಗಳೂರು ತೊರೆದಿದ್ದರು ಎನ್ನುತ್ತಾರೆ ಸೃಜನ್‌.

ಜೋಡಿ ಹಕ್ಕಿ, ನಂ.1, ಸ್ವಸ್ತಿಕ್‌, ಭೂಮಿ ತಾಯಿ ಚೊಚ್ಚಲ ಮಗ, ಹಬ್ಬ, ಸೂರ್ಯವಂಶ, ಅರುಣೋದಯ, ದುರ್ಗದ ಹುಲಿ, ನಕ್ಸಲೈಟ್‌, ಪಂಜಾಬಿ ಹೌಸ್‌ ಮತ್ತಿತರ ಚಿತ್ರಗಳಲ್ಲಿ ವಿಜಯಲಕ್ಷ್ಮಿತನ್ನ ಅಭಿನಯ ಸಾಮಾರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನಾಗಾಭರಣ ನಿರ್ದೇಶನದ, ಪ್ರಕಾಶ್‌ ರೈ ಅಭಿನಯದ ‘ನಾಗಮಂಡಲ’ ವಿಜಯ ಲಕ್ಷ್ಮಿ ವೃತ್ತಿ ಬದುಕಿನಲ್ಲಿ ಸುವರ್ಣ ಅಧ್ಯಾಯ.

ಅವಕಾಶಗಳ ಹುಡುಕುತ್ತ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗಕ್ಕೂ ಅವರು ಹೋಗಿದ್ದರು. ಇತ್ತೀಚೆಗೆ ಉದಯ ಟೀವಿಯಲ್ಲಿ ‘ಬಂಗಾರದ ಬೇಟೆ’ ಕಾರ್ಯಕ್ರಮದ ನಿರೂಪಕಿಯಾಗಿ ವಿಜಯಲಕ್ಷ್ಮಿ, ಮೈತುಂಬ ಬಂಗಾರ ಹೇರಿಕೊಂಡು ಮಿಂಚಿದ್ದರು. ಆಮೇಲೆ ನಡೆದದ್ದೇ ಆತ್ಮಹತ್ಯೆ ಪ್ರಕರಣ. ಎಲ್ಲವೂ ಮುಗಿದಿದ್ದು, ಹೊಸ ಬದುಕಿಗೆ ಮುನ್ನುಡಿ ಬರೆಯಲು ಅವರು ಸಜ್ಜಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada