»   » ನಾರಾಯಣ್‌ ದಶಾವತಾರದ ಡೈರಿ!

ನಾರಾಯಣ್‌ ದಶಾವತಾರದ ಡೈರಿ!

Posted By: Staff
Subscribe to Filmibeat Kannada
Narayan
ಚೈತ್ರದ ಪ್ರೇಮಾಂಜಲಿ ಮೂಲಕ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿಯಾದ ನಾರಾಯಣ್‌, ಹಿರಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ಮನೆಮಾತು. ನಿರ್ದೇಶಕರಾಗಿ, ಚಿತ್ರಸಾಹಿತಿಯಾಗಿ, ಸಂಭಾಷಣಾಕಾರರಾಗಿ ಮಾತ್ರವಲ್ಲದೆ ಅಭಿನಯದಲ್ಲೂ (ಹಾಸ್ಯ ಪಾತ್ರಗಳ ಮೂಲಕ ಎರಡನೇ ಕಾಶೀನಾಥ್‌ ಎಂದೇ ಪ್ರಸಿದ್ಧರು) ಸೈ ಅನ್ನಿಸಿಕೊಂಡವರು ನಾರಾಯಣ್‌.

ಈಯಪ್ಪ ಮುಟ್ಟಿದ್ದೆಲ್ಲ ಚಿನ್ನ... ಯಶಸ್ಸು ಅನ್ನೋದು ಅವರ ಬಳಿ ಕಾಲು ಮರಿದು ಕೊಂಡು ಬಿದ್ದಿದೆಯೋನೋ ಎನ್ನುವ ಅಸೂಯೆ ಕೆಲವರಿಗಿದೆ. ಆದರೆ ಅದರ ಹಿಂದಿನ ಶ್ರಮ ಹಾಗೂ ಪ್ರಯತ್ನ ಕೆಲವರಿಗಷ್ಟೇ ಗೊತ್ತು. ಅದನ್ನು ನಾರಾಯಣ್‌ ಬಾಯಿ ಬಿಚ್ಚಿ ಅನೇಕ ಸಲ ಹೇಳಿದ್ದಿದೆ. ನಾರಾಯಣ್‌ರಂತೆ ಆಗಬೇಕು ಅಥವಾ ಅವರನ್ನು ಮೀರಿಸಬೇಕು ಅನ್ನೋರು ಬೇಕಾದರೆ ಪಾಲಿಸಬಹುದು!

ನಾರಾಯಣ್‌ ಡೈರಿ : ಶಿಸ್ತು ಬದುಕಿನ ಸೂತ್ರವಾಗಬೇಕು ಎನ್ನುವ ನಾರಾಯಣ್‌, ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಸರಿಯಾಗಿ ಏಳುತ್ತಾರೆ. ನಾಲ್ಕೂವರೆಗೆ ಮಕ್ಕಳನ್ನು ಎಬ್ಬಿಸುತ್ತಾರೆ. ಐದೂವರೆಗೆ ಮಕ್ಕಳು ಓದುವುದಕ್ಕೆ ಶುರುಮಾಡುತ್ತಾರೆ. ಬೆಳಿಗ್ಗೆ ಆರು ಗಂಟೆಗಾಗಲೇ ಸೆಟ್ಟಲ್ಲಿ ನಾರಾಯಣ್‌ ಪ್ರತ್ಯಕ್ಷರಾಗುತ್ತಾರೆ. ಮತ್ತೆ ಅವರು ಕೆಲಸ ಮುಗಿಸಿ ರಾತ್ರಿ ಹತ್ತಕ್ಕೆ ಮನೆ ಸೇರುತ್ತಾರೆ.

ನಾರಾಯಣ್‌ ಅಂದರೆ ಹುಡುಗಾಟವಲ್ಲ. ಹೊಸಬರಿಗೆ ಜೀವ ಕೊಟ್ಟವರು, ಸಣ್ಣ ವಯಸ್ಸಿನಲ್ಲಿಯೇ ರಾಜಣ್ಣನವರ ಚಿತ್ರ ನಿರ್ದೇಶಿಸಿದವರು. ರಾಜ್‌ ಕುಟುಂಬದ ನಾಲ್ವರು ಹೀರೋಗಳ ಚಿತ್ರಗಳನ್ನು ನಿರ್ದೇಶಿಸಿದ ಏಕೈಕ ನಿರ್ದೇಶಕರವರು. ಎಲ್ಲೇ ಇರಲಿ ಸಿನಿಮಾ ಬಗೆಗೆ ವಿವಿಧ ಯೋಚನೆಗಳು ಎಲ್ಲಿಂದಲೋ ಅವರ ಮನಸ್ಸಲ್ಲಿ ಬರುತ್ತವಂತೆ. ಸದಾ ಬಳಿಯಲ್ಲಿ ಟೇಪ್‌ ರೆಕಾರ್ಡರ್‌ ಇಟ್ಟುಕೊಂಡು ಯೋಚನೆಗಳನ್ನೆಲ್ಲ ರೆಕಾರ್ಡ್‌ ಮಾಡಿ ಸಂಗ್ರಹಿಸೋದು ಅವರ ಹವ್ಯಾಸ. ನಂತರ ಅದನ್ನು ತಮ್ಮ ಚಿತ್ರತಂಡಕ್ಕೆ ನೀಡುತ್ತಾರೆ. ಅವರು ಅವುಗಳನ್ನು ಅನುಷ್ಠಾನಗೊಳಿಸುತ್ತಾರಂತೆ. ಅವುಗಳ ಅನುಷ್ಠಾನಕ್ಕಾಗಿಯೇ ನಾರಾಯಣ್‌ ಬಳಿ ತಲಾ ಐದು ಸದಸ್ಯರ ಎರಡು ತಂಡಗಳಿವೆ.

ಮೌರ್ಯ ಖುಷಿ : ಪುನೀತ್‌, ಮೀರಾ ಜಾಸ್ಮಿನ್‌, ರೋಜಾ ಅಭಿನಯದ ಮೌರ್ಯ ಚಿತ್ರ ಮನರಂಜನೆ ಜೊತೆಗೆ ಸಂಬಂಧಗಳನ್ನು ಬಲಗೊಳಿಸುತ್ತಿದೆ. ಇದೊಂದು ರಿಮೇಕ್‌ ಚಿತ್ರವಾದರೂ, ತಾಯಿ ಮಗನ ಮಮತೆಯನ್ನು ಮತ್ತಷ್ಟು ತಾಜಾತನದಿಂದ ಕನ್ನಡಕ್ಕೆ ತಂದಿರುವ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎನ್ನುವ ಎಸ್‌. ನಾರಾಯಣ್‌ಗೆ, ಹೊನ್ನಾವರದಿಂದ ಮಹಿಳೆಯಾಬ್ಬರು ಪತ್ರವೊಂದನ್ನು ಬರೆದಿದ್ದಾರೆ.

ಅದರ ಸಾರ ಸರಳವಾಗಿ ಹೇಳೋದಾದ್ರೆ, ತನ್ನ ಮಗನಿಂದ ಶ್ರೀವಾಣಿ(ಪತ್ರ ಬರೆದವರು) 15 ವರ್ಷದಿಂದ ಸಿಟ್ಟು ಮಾಡಿಕೊಂಡು ದೂರವಿದ್ದರಂತೆ. ಒಂದು ಸಲ ಸಹಾ ಭೇಟಿಯಾಗಲು ಮನಸ್ಸಾಗಿರಲಿಲ್ಲವಂತೆ. ಅವರು ಮೌರ್ಯ ಚಿತ್ರ ನೋಡಿದ ಮೇಲೆ ಮಗನನ್ನು ಹುಡುಕಿಕೊಂಡು ಹೋಗಿದ್ದಾರೆ. ತಾಯಿ-ಮಗನನ್ನು ಒಂದು ಮಾಡುವಲ್ಲಿ ಮೌರ್ಯ ಸಾರ್ಥಕತೆ ಪಡೆದಿದೆ ಎನ್ನುವ ತೃಪ್ತಿ ನಾರಾಯಣ್‌ಗೆ ಸಿಕ್ಕಿದೆ.

ಸ್ವಮೇಕ್‌ಗೆ ಜೈ... ಆದರೂ ಮತ್ತೊಂದು ರಿಮೇಕ್‌: ಮುಂದಿನ ವರ್ಷ ಎರಡು ಸ್ವಮೇಕು ಚಿತ್ರ ನೀಡಲು ನಾರಾಯಣ್‌ ಮುಂದಾಗಿದ್ದಾರೆ. ಒಂದನ್ನು ಕುಮಾರ್‌ಸ್ವಾಮಿ ನಿರ್ಮಿಸಲಿದ್ದಾರೆ. ಬೆಳಗಾವಿಯಲ್ಲಿ ಚಂದ್ರಚಕೋರಿ 67 ನೇ ವಾರದಲ್ಲಿ ಓಡುತ್ತಿರುವ ಬಗೆಗೆ ನಾರಾಯಣ್‌ಗೆ ವಿಪರೀತ ಆನಂದ.

ನೂರಕ್ಕೆ ನೂರರಷ್ಟು ಸ್ವಮೇಕು ಚಿತ್ರಗಳು ಗೆಲ್ಲುತ್ತೆ ಅನ್ನೊ ಧೈರ್ಯ ನನಗಿದೆ. ಆದರೆ ನಾನು ನಿರ್ಮಾಪಕನಲ್ಲ. ನನ್ನಲ್ಲಿ ಹತ್ತು ಸ್ವಮೇಕು ಕತೆಗಳಿವೆ. ಆದರೆ ನಿರ್ಮಾಪಕರಿಗೆ ಅತ್ತ ಆಸಕ್ತಿ ಇಲ್ಲ. ಹೀಗಾಗಿ ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ನಾವು ಕಾಲಕ್ಕೆ ತಕ್ಕಂತೆ ಕುಣಿಯ ಬೇಕು ಪಾಲಿಸಿಗೆ ಬದ್ಧರಾಗಿರುವುದಾಗಿ ನಿರ್ದೇಶಕ ನಾರಾಯಣ್‌ ವಿಷಾದದಿಂದಲೇ ಹೇಳುತ್ತಾರೆ.

ಸದ್ಯಕ್ಕೆ ನಾರಾಯಣ್‌ ಚಿರಂಜೀವಿ ನಾಯಕ ನಟನಾಗಿ ನಟಿಸಿದ್ದ ತೆಲುಗಿನ ಹಿಟ್ಲರ್‌ ಚಿತ್ರದ ರಿಮೇಕ್‌ಗೆ ಮುಂದಾಗಿದ್ದಾರೆ. ವಿಷ್ಣುವರ್ಧನ್‌, ರಮೇಶ್‌ ತಾರಾಗಣದ ಚಿತ್ರಕ್ಕೆ 'ವರ್ಷ" ಎಂದು ನಾಮಕರಣ ಮಾಡಲಾಗಿದೆ. ಈಗ ಸಣ್ಣ ಪುಟ್ಟ ಬಜೆಟ್‌ ಚಿತ್ರಗಳ ಬಗ್ಗೆ ಯೋಚಿಸುವುದಿಲ್ಲ. ಅವರೇ ಹೇಳುವ ಪ್ರಕಾರ, 'ನಾರಾಯಣ್‌ ಈಗ ಬೆಳೆದಿದ್ದಾರೆ".

English summary
S for Narayan! S for Sandalwood! Dashavatara's of S Narayan penned by Vigneshwara Kundapura

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada