»   » ಬರೋ ವರ್ಷ ಮೆಗಾಸ್ಟಾರ್‌ ಚಿರಂಜೀವಿ ರಾಜಕೀಯಕ್ಕೆ

ಬರೋ ವರ್ಷ ಮೆಗಾಸ್ಟಾರ್‌ ಚಿರಂಜೀವಿ ರಾಜಕೀಯಕ್ಕೆ

Posted By: Staff
Subscribe to Filmibeat Kannada

ಚಿರಂಜೀವಿ ಹೊಸ ರಾಜಕೀಯ ಪಕ್ಷ ಕಟ್ಟುತ್ತಾರಾ? ಆಂಧ್ರಪ್ರದೇಶದಲ್ಲಿ ಇಂಥದೊಂದು ಪ್ರಶ್ನೆ ಮುಂದಿಟ್ಟುಕೊಂಡು ಮಾಧ್ಯಮಗಳು ದೊಡ್ಡ ಮಟ್ಟದ ವಿಶ್ಲೇಷಣೆ ಶುರುವಿಟ್ಟುಕೊಂಡಿವೆ. ರಾಜಕೀಯದ ಅಂಟುಳ್ಳ ತೆಲುಗು ಚಿತ್ರ 'ಇಂದ್ರ" ತೆರೆ ಕಂಡಾಗಲೇ ಮೆಗಾಸ್ಟಾರ್‌ ರಾಜಕಾರಣಿಯಾಗೋದು ಖಾತ್ರಿ ಅಂತ ಅಭಿಮಾನಿ ಬಳಗ ಹುಯಿಲೆಬ್ಬಿಸಿತು. ಹೀಗೆ ಎದ್ದ ಹುಯಿಲೇ ಈಗ ಚಿರಂಜೀವಿಗೆ ಒತ್ತಡದ ಮಹಾಪೂರವಾಗಿ ಪರಿವರ್ತಿತವಾಗಿದೆ.

ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ಪ್ರಾಯಶಃ 2003ನೇ ಇಸವಿಯಲ್ಲಿ ಚಿರಂಜೀವಿಯ ಹೊಸ ಪಕ್ಷ ರಾಜಕೀಯ ವಲಯದಲ್ಲಿ ಧೂಳೆಬ್ಬಿಸುವುದು ಗ್ಯಾರಂಟಿ. ಮೊನ್ನೆ ಆಂಧ್ರದ ಕರಾವಳಿ ನಗರ ಪಾಲಕೊಳ್ಳುವಿನಲ್ಲಿ ಚಿರಂಜೀವಿಗೆ ಹೆಣ್ಣು ಕೊಟ್ಟ ಮಾವ ಹಾಗೂ ಹಿರಿಯ ನಟ ಅಲ್ಲು ರಾಮಲಿಂಗಯ್ಯವರನ್ನು ಚಿರಂಜೀವಿ ಅಭಿಮಾನಿಗಳು ಸನ್ಮಾನಿಸಿದರು. ಈ ಸನ್ಮಾನದ ಮೂಲಕ ಆಂಧ್ರ ರಾಜಕಾರಣಕ್ಕೆ ಚಿರಂಜೀವಿ ರೀತಿಯ ಚರಿಷ್ಮಾ ಇರುವ ರಾಜಕಾರಣಿ ಬೇಕೆಂಬ ಕಿವಿಮಾತನ್ನೂ ಅಭಿಮಾನಿ ಬಳಗ ಹೇಳಿತು.

ಸಿನಿಮಾ ನಿರ್ದೇಶಕ ಕಂ ರಾಜಕಾರಣಿ ದಾಸರಿ ನಾರಾಯಣ ರಾವ್‌ ಕೂಡ ಚಿರಂಜೀವಿ ಮನೆಗೆ ಹೋಗಿ ರಾಜಕೀಯದ ಮಾತಾಡಿಕೊಂಡು ಬಂದಿದ್ದಾರೆ. ಒಬ್ಬ ಕಾಂಗ್ರೆಸ್ಸಿನ ಲೋಕಸಭಾ ಸದಸ್ಯರಂತೂ ಚಿರಂಜೀವಿ ರಾಜಕೀಯಕ್ಕೆ ಬರುವುದಾದರೆ ರಾಜೀನಾಮೆ ಕೊಟ್ಟು, ಅವರಿಗೆ ಸಾಥ್‌ ನೀಡಲು ಸಿದ್ಧರಿದ್ದಾರೆ. ತಣ್ಣಗೇ ಕೆಲಸ ಮಾಡುವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮ್ಮ ತೆಲುಗು ದೇಶಂ ಪಾರ್ಟಿ ಜೊತೆ ಚಿರಂಜೀವಿ ಬೆಸೆವುದಾದರೆ, ಮುಂದಿನ ಚುನಾವಣೆಯಲ್ಲಿ 20 ಎಂಎಲ್‌ಎ ಸೀಟುಗಳನ್ನು ಕೊಡುವ ಆಮಿಷ ತೋರಿರುವ ಸುದ್ದಿಯೂ ತೇಲಾಡುತ್ತಿದೆ.

ಇಷ್ಟೆಲ್ಲಾ ರೀತಿಯಲ್ಲಿ ವ್ಯವಸ್ಥಿತವಾಗಿ ಚಿರಂಜೀವಿ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜಾಗುತ್ತಿರುವಾಗಲೇ ಚಿರಂಜೀವಿ ದಾನ- ದತ್ತಿ ಕೆಲಸಗಳು, ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಇವೆಲ್ಲಾ ಜನಪ್ರಿಯತೆಯನ್ನು ರಾಜಕೀಯಕ್ಕೆ ಎನ್‌ಕ್ಯಾಷ್‌ ಮಾಡಿಕೊಳ್ಳುವ ಪಕ್ಕಾ ಪೊಲಿಟಿಕಲ್‌ ತಂತ್ರ ಎನ್ನುವವರೂ ಉಂಟು.

ಚಿರು ಪಕ್ಷಕ್ಕೆ ಏನಂತ ಹೆಸರಿಡಬಹುದು ಅನ್ನುವುದೊಂದೇ ಉಳಿದಿರುವ ಕುತೂಹಲ. ಅಂದಹಾಗೆ, ಚಿರಂಜೀವಿ ಪಕ್ಷ ಜಾತ್ಯತೀತವಾಗಿರುತ್ತದೆ. ಒಂದೇ ಕೋಮಿನ ಮಂದಿ ಅದರಲ್ಲಿ ಸುತಾರಾಂ ಇರುವುದಿಲ್ಲವಂತೆ. ತೃತೀಯ ರಂಗದ ಕನಸು ಕಾಣುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು ಒಮ್ಮೆ ಚಿರಂಜೀವಿಯನ್ನು ಭೇಟಿ ಮಾಡುವುದೊಳ್ಳೆಯದು!

English summary
Chiranjeevi to launch new party?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada