ಗಣೇಶ್-ನಾರಾಯಣ್ ಜೋಡಿಗೆ ಅಗ್ನಿ ಪರೀಕ್ಷೆ 'ಶೈಲೂ'
ಗೊಲ್ಡನ್ ಸ್ಟಾರ್ ಗಣೇಶ್ ಹಾಗೂ ಕಲಾ ಸಾಮ್ರಾಟ್ ಎಸ್ ನಾರಾಯಣ್ ಜೋಡಿಯ 'ಶೈಲೂ' ಚಿತ್ರ ಈ ಡಿಸೆಂಬರ್ 9, 2011 ರಂದು ತೆರೆಗೆ ಬರಲು ರೆಡಿಯಾಗಿದೆ. 'ಯು/ಎ' ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರ, 'ಚೆಲುವಿನ ಚಿತ್ತಾರ'ದ ನಂತರ ಗಣೇಶ್ ಹಾಗೂ ಎಸ್ ನಾರಾಯಣ್ ಜೋಡಿಯಲ್ಲಿ ಬರುತ್ತಿರುವ ಚಿತ್ರ. ಸದ್ಯಕ್ಕೆ ಈ ಇಬ್ಬರೂ ಸೋಲಿನ ದವಡೆಯಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿರುವರು. ಶೈಲೂ ಈ ಜೋಡಿಗೆ 'ಗೆಲುವಿನ ಚಿತ್ತಾರ' ಆಗಬಹುದೇ?
ಕೆ. ಮಂಜು ಅವರ 'ಕೆ ಮಂಜು ಸಿನಿಮಾಸ್' ಬ್ಯಾನರ್ ನಲ್ಲಿ ತಯಾರಿಸಿರುವ ಈ ಚಿತ್ರಕ್ಕೆ ಹತ್ತು ವರ್ಷಗಳ ನಂತರ, ಎಸ್ ನಾರಾಯಣ್ ನಿರ್ದೇಶನ ಮಾಡುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ ಕೆ ಮಂಜು-ನಾರಾಯಣ್ ಜೋಡಿಯ 'ಜಮೀನ್ದಾರ್ರು' ಚಿತ್ರ ತೆರೆಗೆ ಬಂದಿತ್ತು. ಇದು ಮಲೆಯಾಳಂ ಚಿತ್ರ 'ಮೈನಾ' ರೀಮೇಕ್ ಆಗಿದ್ದರೂ ಇದಕ್ಕೆ ಕನ್ನಡದ ಸೊಬಗು ತಂದಿದ್ದಾರಂತೆ ನಾರಾಯಣ್.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಮಲೆಯಾಳಿ ನಟಿ ಭಾಮಾ ಪ್ರಮುಖ ತಾರಾಗಣದ ಈ ಚಿತ್ರದಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಸಹ ವಿಶಿಷ್ಟ ಪ್ರಾತ್ರದಲ್ಲಿದ್ದಾರೆ. ಮುನ್ನಾರ್ ಹಾಗೂ ಇತರ ಸ್ಥಳಗಳಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರ ಪ್ರಕೃತಿ ಸಂದರ್ಯದ ರಸದೌತಣ ನೀಡಲಿದೆಯಂತೆ. ಈ ಚಿತ್ರಕ್ಕಾಗಿ ಗಣೇಶ್, ತೂಕ ಹಾಗೂ ಮೈಬಣ್ಣ ಎರಡನ್ನೂ ಬದಲಾಯಿಸಿಕೊಂಡಿದ್ದಾರೆ ಎಂಬ ಗುಟ್ಟುನ್ನು ಕೆ ಮಂಜು ಬಿಚ್ಚಿಟ್ಟಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











